ಸಂಜು ಸ್ಯಾಮ್ಸನ್​, ವೈಭವ್ ಸೂರ್ಯವಂಶಿ  
ಕ್ರಿಕೆಟ್

ಸಂಜು ಕ್ರಿಕೆಟ್​ ಕರಿಯರ್​ಗೆ ಮುಳ್ಳಾದ ವೈಭವ್​! ಜಿಂಬಾಬ್ವೆ ಸರಣಿಯಿಂದಲೂ ಸ್ಯಾಮ್ಸನ್​ ಕೈಬಿಟ್ಟ ಬಿಸಿಸಿಐ​

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್​ ಟಿ20 ಸರಣಿಯಿಂದ ಹೊರಗಿಟ್ಟ ಬೆನ್ನಲ್ಲೇ ಜಿಂಬಾಬ್ವೆ ಸರಣಿಯಿಂದಲೂ ಔಟ್​
  • ತಂಡದಿಂದ ಸಂಜು ಸ್ಯಾಮ್ಸನ್​ ಕೈಬಿಟ್ಟು ವೈಭವ್ ಸೂರ್ಯವಂಶಿಗೆ ಅವಕಾಶ
Sanju Samson: ಪ್ರಸಕ್ತ ಆಂಗ್ಲರ ಮಣ್ಣಿನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಲ್ಲಿ ಇಂಗ್ಲೆಂಡ್​ ಮುನ್ನಡೆ ಕಾಯ್ದುಕೊಂಡಿದೆ. ಮತ್ತೊಂದೆಡೆ, ಅತ್ಯಂತ ಕಳಪೆ ಪ್ರದರ್ಶನದಿಂದ ಇನ್ನೂ ಗೆಲುವಿನ ಖಾತೆ ತೆರೆಯದ ಟೀಮ್ ಇಂಡಿಯಾಗೆ ಇಂದಿನ ಮೂರನೇ ಟಿ20 ಪಂದ್ಯವು ನಿರ್ಣಾಯಕವಾಗಿದೆ. ಈ ಮಧ್ಯೆ, ಟಿ20 ವಿಶ್ವಕಪ್​ ಹೀರೋ ಸಂಜು ಸ್ಯಾಮ್ಸನ್​ರನ್ನು ಇಂಗ್ಲೆಂಡ್​ ಮತ್ತು ಮುಂಬರುವ ಜಿಂಬಾಬ್ವೆ ಸರಣಿಯಿಂದ ಕೈಬಿಡಲಾಗಿದೆ.
ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಸ್ಥಾನ ಉಳಿದಿರುವ ಎರಡು ಪಂದ್ಯಗಳಲ್ಲಿ ಬಹುತೇಕ ಅನುಮಾನವೇ. ಕಾರಣ, ಐರ್ಲೆಂಡ್​ ವಿರುದ್ಧದ ಎರಡು ಮತ್ತು ಇಂಗ್ಲೆಂಡ್​ ಎದುರಿಗೆ ಆಡಿದ ಒಂದು ಸೇರಿ ಒಟ್ಟು ಮೂರು ಟಿ20 ಪಂದ್ಯಗಳಲ್ಲಿಯೂ ಅವರು ಫ್ಲಾಪ್​ ಪ್ರದರ್ಶನ ನೀಡಿದರು. ಇದೇ ಅವರಿಗೆ ತಂಡದಲ್ಲಿ ಆಡುವ ಅವಕಾಶವನ್ನು ಕಿತ್ತುಕೊಳ್ಳುವಂತೆ ಮಾಡಿದೆ. ಈಗಾಗಲೇ ಅವರ ಸ್ಥಾನವನ್ನು 15 ವರ್ಷದ ವೈಭವ್ ಸೂರ್ಯವಂಶಿಗೆ ನೀಡಿರುವ ಬಿಸಿಸಿಐ, ಮುಂಬರುವ ಜಿಂಬಾಬ್ವೆ ಸರಣಿಯಿಂದಲೂ ಗೇಟ್​ಪಾಸ್​ ಕೊಟ್ಟಿದೆ.
ಇದೇ ಜು.23ರಿಂದ 26 ರವರೆಗೆ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಘೋಷಿಸಲಾದ ತಂಡದಲ್ಲಿ ಸಂಜುಗೆ ಸ್ಥಾನ ನೀಡಿಲ್ಲ. ಅವರ ಬದಲಿಗೆ ವೈಭವ್ ಸೂರ್ಯವಂಶಿ ಅವರನ್ನು ಆರಂಭಿಕ ಬ್ಯಾಟರ್​ ಆಗಿ ಮುಂದುವರಿಸಲು ನಿರ್ಧರಿಸಲಾಗಿದೆ. ಇನ್ನು, ಪಂಜಾಬ್ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಪ್ರಭ್‌ಸಿಮ್ರಾನ್ ಸಿಂಗ್ ಅವರನ್ನು ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ವೇಗಿಗಳಾದ ಅಶೋಕ್ ಶರ್ಮಾ ಮತ್ತು ಮಾಯಾಂಕ್ ಯಾದವ್ ಅವರಿಗೂ ಅವಕಾಶ ನೀಡಲಾಗಿದೆ.
ಭಾರತದ ಜಿಂಬಾಬ್ವೆ ಪ್ರವಾಸವನ್ನು ಸಾಮಾನ್ಯವಾಗಿ ಯುವ ಆಟಗಾರರಿಗೆ ಅವಕಾಶ ಕೊಡಲೆಂದೇ ಮೀಸಲಿಡಲಾಗಿದೆ. ಇದೊಂದು ರೀತಿ ಹಳೆಯ ಸಂಪ್ರದಾಯದಂತೆ. ಈ ಬಾರಿ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಏಕೈಕ ಹಿರಿಯ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಎಂಬುದು ಗಮನಾರ್ಹ. ಅಸಲಿಗೆ, ಇಲ್ಲಿ ಮಾಜಿ ಕ್ರಿಕೆಟಿಗರ ಕಿಡಿನುಡಿಗೆ ಕಾರಣವಾಗಿರುವುದು ಒಂದೇ. ಇಂಗ್ಲೆಂಡ್ ಸರಣಿಯಲ್ಲಿ ಆಡುತ್ತಿರುವ ಶ್ರೇಯಸ್ ಅಯ್ಯರ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಇಶಾನ್ ಕಿಶನ್ ಮತ್ತು ಶಿವಂ ದುಬೆ ಅವರಂತಹ ಆಟಗಾರರನ್ನು ಜಿಂಬಾಬ್ವೆ ಸರಣಿಗೆ ಆಯ್ಕೆ ಮಾಡಿರುವ ಬಿಸಿಸಿಐ, ಸಂಜುರನ್ನು ಬಿಟ್ಟಿರುವುದು ಪ್ರಶ್ನೆಯಾಗಿದೆ.

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ

ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಜ್, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್​, ಪ್ರಭ್​ಸಿಮ್ರನ್​ ಸಿಂಗ್​(ವಿಕೆಟ್ ಕೀಪರ್).

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ

ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಗುರ್ನ್‌ರ್​ ಬ್ರಾರ್​, ಹರ್ಷಿತ್ ರಾಣಾ, ಶಿವಂ ದುಬೆ, ಅರ್ಷದೀಪ್​ ಸಿಂಗ್​.