ನಮ್ಮನ್ನು ಸೋಲಿಸಿಬಿಟ್ಟಲ್ಲಯ್ಯ ನೀನು... LSG ಓನರ್ ಸಂಜೀವ್ ಗೋಯೆಂಕಾ ನಡೆಗೆ ಬೆರಗಾದ ಕ್ರೀಡಾ ಜಗತ್ತು! Sanjiv Goenka
- ನಿನ್ನೆ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಮತ್ತೊಂದು ಸೋಲನ್ನು ಅನುಭವಿಸಿತು
- ಪಂಜಾಬ್ ಕಿಂಗ್ಸ್ ವಿರುದ್ಧ 54 ರನ್‌ಗಳ ಅಂತರದಿಂದ ಲಖನೌ ಸೋಲುಂಡಿತು
- ಈ ಸೀಸನ್ನಲ್ಲಿ ಲಖನೌ ತಂಡಕ್ಕೆ ಇದು 4ನೇ ಸೋಲು ಅನ್ನೋದು ಗಮನಾರ್ಹ ಸಂಗತಿ
- ಪಂದ್ಯದ ಬಳಿಕ ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ ನಡೆದುಕೊಂಡ ರೀತಿ ಎಲ್ಲರ ಹುಬ್ಬೇರಿಸಿದೆ
Sanjiv Goenka : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಮೆಂಟ್ ಭಾಗವಾಗಿ ನಿನ್ನೆ (ಏಪ್ರಿಲ್ 19) ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಮತ್ತೊಂದು ಸೋಲನ್ನು ಅನುಭವಿಸಿತು. ಈ ಸೀಸನ್ನಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಪಂಜಾಬ್ ಕಿಂಗ್ಸ್ ವಿರುದ್ಧ 54 ರನ್‌ಗಳ ಅಂತರದಿಂದ ಲಖನೌ ಸೋಲುಂಡಿತು. ಈ ಸೀಸನ್ನಲ್ಲಿ ಲಖನೌ ತಂಡಕ್ಕೆ ಇದು 4ನೇ ಸೋಲು ಅನ್ನೋದು ಗಮನಾರ್ಹ ಸಂಗತಿ.
ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಕೇವಲ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 9 ಸಿಕ್ಸರ್‌ಗಳ ಸಹಾಯದಿಂದ 93 ರನ್ ಗಳಿಸಿ, ಸ್ವಲ್ಪದರಲ್ಲೇ ಶತಕದಿಂದ ವಂಚಿತರಾದರು. ಪಂಜಾಬ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಿಯಾಂಶ್, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು.
ಈ ಪಂದ್ಯದ ನಂತರ, ಲಖನೌ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ನಡೆದುಕೊಂಡ ರೀತಿ ಎಲ್ಲರ ಹುಬ್ಬೇರಿಸಿದೆ. ಕ್ರೀಡಾಂಗಣದಲ್ಲಿದ್ದ ಗೋಯೆಂಕಾ, ಪಂದ್ಯ ಮುಗಿಯುತ್ತಿದ್ದಂತೆ ಮೈದಾನದಲ್ಲಿದ್ದ ಪ್ರಿಯಾಂಶ್ ಆರ್ಯ ಬಳಿ ಹೋಗಿ, ವಿಶೇಷವಾಗಿ ಅಭಿನಂದಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಇನ್ನೂ ವೈರಲ್ ಫೋಟೋ ಹಾಗೂ ವಿಡಿಯೋ ನೋಡಿದವರು ತಮಾಷೆ ರೀತಿಯಲ್ಲಿ ಕಾಮೆಂಟ್ಗಳನ್ನು ಹರಿಬಿಡುತ್ತಿದ್ದಾರೆ. ಬಹುಶಃ ನಾವು ಸೋತಿದ್ದು ನಿನ್ನಿಂದಲೇ, ನಮ್ಮನ್ನು ಸೋಲಿಸಿಬಿಟ್ಟಲ್ಲಯ್ಯ ಎಂದು ಗೋಯೆಂಕಾ, ಆರ್ಯಗೆ ಹೇಳಿರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ, ಗೋಯೆಂಕಾ ಅವರು ಪ್ರಿಯಾಂಶ್ ಆರ್ಯ ಜೊತೆ ಮಾತ್ರವಲ್ಲದೆ ಎಲ್ಲ ಪಂಜಾಬ್ ಆಟಗಾರರ ಜೊತೆಯೂ ತುಂಬಾ ತಮಾಷೆಯಾಗಿ ಸಂಭಾಷಣೆ ನಡೆಸಿದರು. ಸಾಮಾನ್ಯವಾಗಿ ತಮ್ಮ ತಂಡ ಸೋತಾಗ ತುಂಬಾ ಕೋಪಗೊಳ್ಳುವ ಗೋಯೆಂಕಾ, ತಮ್ಮ ತಂಡದ ನಾಯಕನ ಮೇಲೆ ವಾಗ್ದಾಳಿ ನಡೆಸುತ್ತಾರೆ. ಆದರೆ, ಈ ವಾರಿ ಆ ರೀತಿ ಮಾಡದೇ, ಗೆಲುವಿನ ತಂಡದ ಆಟಗಾರರನ್ನು ಅಭಿನಂದಿಸಿದರು. ಇದು ಒಂದು ರೀತಿಯಲ್ಲಿ ನೋಡಲು ತುಂಬಾ ಚೆನ್ನಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 254 ರನ್ ಗಳಿಸಿತು. ಪಂಜಾಬ್ ಪರ ಪ್ರಿಯಾಂಶ್ ಆರ್ಯ (93 ರನ್, 37 ಎಸೆತ, 4 ಬೌಂಡರಿ, 9 ಸಿಕ್ಸರ್) ಮತ್ತು ಕೂಪರ್ ಕಾನೊಲಿ (87 ರನ್, 46 ಎಸೆತ, 8 ಬೌಂಡರಿ, 7 ಸಿಕ್ಸರ್) ಅದ್ಭುತ ಆಟವಾಡಿದರು. ಲಖನೌ ಬೌಲರ್‌ಗಳಲ್ಲಿ, ಪ್ರಿನ್ಸ್ ಯಾದವ್ ಮತ್ತು ಮಣಿಮಾರನ್ ಸಿದ್ಧಾರ್ಥ್ ತಲಾ ಎರಡು ವಿಕೆಟ್ ಪಡೆದರೆ, ಮೊಹ್ಸಿನ್ ಖಾನ್ ಮತ್ತು ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದರು.
255 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಲಖನೌ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 200 ರನ್‌ಗಳಿಗೆ ಸೀಮಿತವಾಯಿತು. ಮಿಚೆಲ್ ಮಾರ್ಷ್ (40 ರನ್, 28 ಎಸೆತ), ಆಯುಷ್ ಬಡೋನಿ (21 ಎಸೆತಗಳಲ್ಲಿ 35 ರನ್), ನಾಯಕ ರಿಷಭ್ ಪಂತ್ (23 ಎಸೆತಗಳಲ್ಲಿ 43 ರನ್), ಮತ್ತು ಐಡೆನ್ ಮಾರ್ಕ್ರಾಮ್ (22 ಎಸೆತಗಳಲ್ಲಿ 42 ರನ್) ಲಖನೌ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಪಂಜಾಬ್ ಪರ ಮಾರ್ಕೊ ಜಾನ್ಸೆನ್ ಎರಡು ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್, ವಿಜಯ್ ಕುಮಾರ್ ವೈಶಾಕ್ ಮತ್ತು ಯುಜ್ವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್).