ರಾಜಸ್ಥಾನ ರಾಯಲ್ಸ್ ವಿರುದ್ಧ ಹೀನಾಯ ಸೋಲು: ಪಂತ್ ಜತೆ LSG ಓನರ್ ನಡೆದುಕೊಂಡ ರೀತಿಗೆ ಮೆಚ್ಚುಗೆ! Sanjiv Goenka
- ರಾಜಸ್ಥಾನ ರಾಯಲ್ಸ್ ವಿರುದ್ಧ 40 ರನ್ಗಳಿಂದ ಹೀನಾಯ ಸೋಲು ಅನುಭವಿಸಿದ ಲಖನೌ ಸೂಪರ್ ಜೈಂಟ್ಸ್
- ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ ಅವರು ರಿಷಭ್ ಪಂತ್ ಜತೆ ನಡೆದುಕೊಂಡ ರೀತಿಗೆ ಮೆಚ್ಚುಗೆ
- ಗೋಯೆಂಕಾ ಈ ಬಾರಿ ಸೋಲನ್ನು ಸ್ವೀಕರಿಸಿದ ರೀತಿ ನಿಜಕ್ಕೂ ಪ್ರಶಂಸೆಗೆ ಅರ್ಹವಾಗಿದೆ
Sanjiv Goenka : ನಿನ್ನೆ (ಏಪ್ರಿಲ್ 22) ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 40 ರನ್ಗಳಿಂದ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ತಮ್ಮ ತಂಡದ ನಾಯಕ ರಿಷಭ್ ಪಂತ್ ಜತೆ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟು ದಿನ ಪಂದ್ಯ ಸೋತರೆ ಸಾಕು ನಾಯಕನ ಮೇಲೆ ಮುಗಿಬೀಳುತ್ತಿದ್ದ ಗೋಯೆಂಕಾ ಈ ಬಾರಿ ಸೋಲನ್ನು ಸ್ವೀಕರಿಸಿದ ರೀತಿ ನಿಜಕ್ಕೂ ಪ್ರಶಂಸೆಗೆ ಅರ್ಹವಾಗಿದೆ.
ಲಖನೌ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದು ಪ್ಲೇ ಆಫ್ ಹಾದಿ ಕಠಿಣವಾಗಿರುವ ಬೆನ್ನಲ್ಲೇ, ಮಾಲೀಕ ಸಂಜೀವ್ ಗೋಯೆಂಕಾ ಅವರು ನಾಯಕ ರಿಷಭ್ ಪಂತ್ ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದರು. ಅಲ್ಲದೆ, ಪಂತ್ ಅವರನ್ನು ಅಪ್ಪಿಕೊಂಡು ಸಂತೈಸಿದರು. ತಂಡ ಸಂಕಷ್ಟದಲ್ಲಿರುವಾಗ ಮಾಲೀಕರು ನೀಡಿದ ಈ ಬೆಂಬಲ ಮತ್ತು ಪ್ರೀತಿಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಮನ ಗೆದ್ದಿದೆ.
ಪಂದ್ಯದ ನಡುವೆ ಪಂತ್ ಅವರ ಮೂಗಿಗೆ ಚೆಂಡು ಬಡಿಯಿತು. ಇದರಿಂದ ಪಂತ್ಗೆ ಭಾರಿ ನೋವಾಗಿದೆ. ಈ ಬಗ್ಗೆಯೂ ಗೋಯೆಂಕಾ ವಿಚಾರಿಸಿ, ಗಮನ ಸೆಳೆದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಪಂದ್ಯ ಅಂದಮೇಲೆ ಸೋಲು ಮತ್ತು ಗೆಲುವು ಇದ್ದೇ ಇರುತ್ತದೆ. ಆದರೆ, ತಂಡವನ್ನು ಬೆಂಬಲಿಸುವುದು ತುಂಬಾನೇ ಮುಖ್ಯ. ಗೋಯೆಂಕಾ ಅವರು ಇದೀಗ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರ ತಂಡ ಟ್ರೋಫಿ ಗೆಲ್ಲುವುದು ಗ್ಯಾರಂಟಿ ಎಂಬ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ, ಬುಧವಾರ ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 40 ರನ್‌ಗಳ ಸೋಲು ಅನುಭವಿಸಿದ ನಂತರ, ಎಲ್ಎಸ್ಜಿ ನಾಯಕ ರಿಷಭ್ ಪಂತ್ ತಮ್ಮ ಬ್ಯಾಟಿಂಗ್ ವಿಭಾಗದ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ. ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್ ಮತ್ತು ಪ್ರಿನ್ಸ್ ಯಾದವ್ ಅವರ ಭರ್ಜರಿ ಬೌಲಿಂಗ್‌ನಿಂದ ಲಭಿಸಿದ ಆರಂಭಿಕ ಲಾಭವನ್ನು ಬ್ಯಾಟರ್‌ಗಳು ಉಳಿಸಿಕೊಳ್ಳುವಲ್ಲಿ ವಿಫಲರಾದರು. ಸತತ ನಾಲ್ಕನೇ ಸೋಲಿನಿಂದ ಕಂಗಾಲಾಗಿರುವ ಪಂತ್, ತಂಡದ ಒಳಗೇ ಇರುವ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಸತತ ಸೋಲುಗಳಿಂದ ತಂಡಕ್ಕೆ ನಿರಾಸೆಯಾಗಿದ್ದರೂ, ರಿಷಬ್ ಪಂತ್ ಭರವಸೆ ಕಳೆದುಕೊಂಡಿಲ್ಲ. ತಮ್ಮ ತಂಡದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಸಾಮರ್ಥ್ಯವಿರುವ ಆಟಗಾರರಿದ್ದಾರೆ ಎಂದು ಅವರು ನಂಬಿದ್ದಾರೆ. ಸೋಲಿನ ಬಗ್ಗೆ ಚಿಂತಿಸುವ ಬದಲು ತಪ್ಪುಗಳನ್ನು ಸರಿಪಡಿಸಿಕೊಂಡು, ಪಾಸಿಟಿವ್ ಅಂಶಗಳ ಕಡೆಗೆ ಗಮನ ಹರಿಸುವ ಮೂಲಕ ಟೂರ್ನಮೆಂಟ್ನಲ್ಲಿ ಮತ್ತೆ ಪ್ರಬಲವಾಗಿ ಪುಟಿದೇಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).