LSG ಗೆಲುವಿನ ಬೆನ್ನಲ್ಲೇ ಸಂಜೀವ್ ಗೋಯೆಂಕಾ ಭಾವುಕರಾಗಿ ಕಣ್ಣೀರಿಟ್ಟಿದ್ದು ನಾಟಕನಾ? ನೆಟ್ಟಿಗರು ಹೇಳೋದೇನು? Sanjiv Goenka
- 19ನೇ ಆವೃತ್ತಿಯ ಐಪಿಎಲ್ ಟೂರ್ನಮೆಂಟ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ತನ್ನ ಮೊದಲ ಗೆಲುವು ದಾಖಲಿಸಿದೆ
- ನಿನ್ನೆ ಉಪ್ಪಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು
- ಮೊದಲ ಗೆಲುವು ದಾಖಲಿಸಿದ್ದರಿಂದ ಲಖನೌ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಭಾವುಕರಾಗಿ ಕಣ್ಣೀರಾಕಿದರು
Sanjiv Goenka : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಮೆಂಟ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ( LSG ) ತನ್ನ ಮೊದಲ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಲಖನೌ, ನಿನ್ನೆ (ಏಪ್ರಿಲ್ 05) ಹೈದರಾಬಾದ್ನ ಉಪ್ಪಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು. ತಮ್ಮ ತಂಡ ಮೊದಲ ಗೆಲುವು ದಾಖಲಿಸಿದ್ದರಿಂದ ಲಖನೌ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಭಾವುಕರಾಗಿ ಕಣ್ಣೀರಾಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
19ನೇ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಗೆಲುವಿನ ಹಾದಿಗೆ ಮರಳಿದೆ. ಕಳೆದ ಋತುವಿನಲ್ಲಿ ಉತ್ತಮ ಆರಂಭ ಪಡೆದಿದ್ದ ಲಖನೌ ಟ್ರೋಫಿ ಗೆಲ್ಲುವ ನಿರೀಕ್ಷೆಯಿತ್ತು. ಆದರೆ, ಆ ನಿರೀಕ್ಷೆ ಹುಸಿಯಾಯಿತು. ಈ ಬಾರಿಯೂ ಭಾರಿ ನಿರೀಕ್ಷೆಯಿಂದ ಕಣಕ್ಕಿಳಿದಿದ್ದ ಲಖನೌ, ಮೊದಲ ಪಂದ್ಯದಲ್ಲಿಯೇ ಸೋತಿತು. ಇದರಿಂದ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆದರೆ, ನಿನ್ನೆ ಹೈದರಾಬಾದ್‌ನಲ್ಲಿ ಲಖನೌ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದೆ.
ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಲಖನೌ ತಂಡ, ಈ ಸೀಸನ್ನಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು. ಈ ಕ್ಷಣದಲ್ಲಿ, ಕ್ರೀಡಾಂಗಣದಲ್ಲಿ ಹಾಜರಿದ್ದ ಲಖನೌ ಮಾಲೀಕ ಸಂಜೀವ್ ಗೋಯೆಂಕಾ ಕಣ್ಣೀರು ಹಾಕಿದರು. ಆದರೆ, ಗೋಯೆಂಕಾ ಅವರು ಕಣ್ಣೀರು ಹಾಕಿದ್ದನ್ನು ಕೆಲವರು ಟ್ರೋಲ್ ಮಾಡಿದರೆ, ಇನ್ನು ಕೆಲವರು ಅವರ ಬ್ಯಾಟ್ ಬೀಸಿದ್ದಾರೆ.
ಈ ಹಿಂದೆ ಮೊದಲ ಪಂದ್ಯದ ಸೋಲಿನ ನಂತರ ನಾಯಕ ರಿಷಬ್ ಪಂತ್ ಅವರೊಂದಿಗೆ ಗೋಯೆಂಕಾ ತೀವ್ರವಾದ ಚರ್ಚೆ ನಡೆಸಿದ ವಿಡಿಯೋ ವೈರಲ್ ಆಗಿತ್ತು, ಇದನ್ನು ನೆಟ್ಟಿಗರು "ಸಾರ್ವಜನಿಕವಾಗಿ ಆಟಗಾರರನ್ನು ಟೀಕಿಸುವುದು ತಪ್ಪು" ಎಂದು ಟ್ರೋಲ್ ಮಾಡಿದ್ದರು. ಈಗ ಗೆಲುವಿನ ನಂತರ ಅವರು ಕಣ್ಣೀರು ಹಾಕುತ್ತಿರುವುದನ್ನು ಕಂಡು, "ಇದು ಕೇವಲ ಡ್ಯಾಮೇಜ್ ಕಂಟ್ರೋಲ್ ಅಥವಾ ನಾಟಕ" ಎಂದು ಕೆಲವರು ವ್ಯಂಗ್ಯವಾಡುತ್ತಿದ್ದರೆ, ಇನ್ನು ಕೆಲವರು "ಅತಿಯಾದ ಒತ್ತಡ ಮತ್ತು ಹಿಂದಿನ ಟೀಕೆಗಳಿಂದಾಗಿ ಅವರು ನಿರಾಳರಾಗಿ ಹೀಗೆ ಪ್ರತಿಕ್ರಿಯಿಸಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ.
ಗೋಯೆಂಕಾ ಪರ ಬ್ಯಾಟಿಂಗ್
ಇನ್ನು ಕೆಲವರು ಗೋಯೆಂಕಾ ಕಣ್ಣೀರು ಹಾಕಿದ್ದನ್ನು ಸಮರ್ಥಿಸಿಕೊಂಡು ಅವರ ಪರ ಬ್ಯಾಟ್ ಬೀಸಿದ್ದಾರೆ. ಕೇವಲ ಒಬ್ಬ ಉದ್ಯಮಿಯಾಗಿ ಲಾಭದ ಉದ್ದೇಶವನ್ನಷ್ಟೇ ಹೊಂದಿರದ ಗೋಯೆಂಕಾ, ಸುಮಾರು 6,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕ್ರಿಕೆಟ್ ಮತ್ತು ಫುಟ್‌ಬಾಲ್ ಮೇಲೆ ಹೂಡಿಕೆ ಮಾಡಿದ್ದು, ತಂಡದ ಯಶಸ್ಸಿಗೆ ತನು-ಮನ-ಧನದಿಂದ ಶ್ರಮಿಸುತ್ತಿದ್ದಾರೆ. ಗೆದ್ದಾಗ ಸಂಭ್ರಮಿಸುವ ಮತ್ತು ಸೋತಾಗ ಕಳವಳ ವ್ಯಕ್ತಪಡಿಸುವ ಅವರ ಭಾವನೆಯನ್ನು ಕೆಲವರು ಟ್ರೋಲ್ ಮಾಡುತ್ತಿರುವುದು ಸರಿಯಲ್ಲ. ಒಬ್ಬ ತೀವ್ರ ಆಸಕ್ತಿಯುಳ್ಳ ಮಾಲೀಕನಾಗಿ ತನ್ನ ತಂಡದ ನಾಯಕ ಅಥವಾ ಕೋಚ್‌ನಿಂದ ಉತ್ತರದಾಯಿತ್ವ ನಿರೀಕ್ಷಿಸುವುದು ತಪ್ಪಲ್ಲ. ಹಣಕ್ಕಿಂತ ಹೆಚ್ಚಾಗಿ ಕ್ರೀಡೆಯ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಅವರ ಈ ಬದ್ಧತೆ ಟೀಕೆಗಿಂತ ಗೌರವಕ್ಕೆ ಹೆಚ್ಚು ಅರ್ಹವಾಗಿದೆ ಎಂದು ಕೆಲ ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ, ಗೋಯೆಂಕಾ ಅವರ ಈ 'ಎಮೋಷನಲ್' ನಡೆಯನ್ನು ಕಳೆದ ವರ್ಷ ಕೆ.ಎಲ್. ರಾಹುಲ್ ಅವರೊಂದಿಗೆ ನಡೆದ ಘಟನೆಗೆ ಹೋಲಿಸಿ, ಗೋಯೆಂಕಾ ಅವರ ವರ್ತನೆಯ ಬದಲಾವಣೆಯನ್ನು ನೆಟ್ಟಿಗರು ತಮಾಷೆಯಾಗಿ ಟ್ರೋಲ್ ಮಾಡುತ್ತಿದ್ದಾರೆ.
ರಾಹುಲ್ ವಿರುದ್ಧ ಅಸಮಾಧಾನ
ಸುಮಾರು 2 ವರ್ಷಗಳ ಹಿಂದೆ ಅಂದರೆ, 2024ರ ಐಪಿಎಲ್ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ( LSG ) ತಂಡ ಹೀನಾಯವಾಗಿ ಸೋಲುಂಡಿತು. ಪಂದ್ಯದ ನಂತರ, ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಅಂದಿನ ನಾಯಕ ಕೆ.ಎಲ್. ರಾಹುಲ್ ವಿರುದ್ಧ ಮೈದಾನದಲ್ಲೇ ತಮ್ಮ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿ, ಆ ಸಮಯದಲ್ಲಿ ಗೋಯೆಂಕಾ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದಾದ ಬಳಿಕ, ಕೆ.ಎಲ್. ರಾಹುಲ್ ಲಖನೌ ತಂಡ ತೊರೆದರು. ನಂತರ ರಿಷಭ್ ಪಂತ್ ಅವರನ್ನು 27 ಕೋಟಿ ರೂಪಾಯಿಗಳಿಗೆ ಖರೀದಿಸಿ ಲಖನೌ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಯಿತು, (ಏಜೆನ್ಸೀಸ್).