ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಮತ್ತು ಸ್ಪಿನ್ನರ್ ಉಸ್ಮಾನ್ ತಾರಿಕ್ ( Usman Tariq )
- ಮಿಸ್ಟರಿ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ
- ಬೌಲಿಂಗ್ ಮಾಡುವಾಗ ಕ್ರೀಸ್ ಬಳಿ ಒಂದೆರೆಡು ಸೆಕಂಡ್ ನಿಂತು ಆ ಬಳಿಕ ಬಾಲ್ ಬಿಡುಗಡೆ
- ತಾರಿಕ್ ಅವರನ್ನು ಸಮರ್ಥಿಸಿಕೊಂಡ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ
Usman Tariq : ಇಡೀ ಜಗತ್ತು ಕಾಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಇಂಡೋ-ಪಾಕ್ ಕ್ರಿಕೆಟ್ ಕದನ ಅಂದರೆ ಯಾವಾಗಲೂ ಬಿಸಿ ವಿಷಯವಾಗಿರುತ್ತದೆ. ಆದರೆ, ಈ ಬಾರಿ ಪಾಕ್ ತಂಡದಲ್ಲಿರುವ ಓರ್ವ ಆಟಗಾರನ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಆ ಆಟಗಾರ ಯಾರು ಅಂದರೆ, ಆತನೇ ಯುವ ಸ್ಪಿನ್ನರ್ ಉಸ್ಮಾನ್ ತಾರಿಕ್.
ಮಿಸ್ಟರಿ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಬೌಲಿಂಗ್ ಮಾಡುವಾಗ ಕ್ರೀಸ್ ಬಳಿ ಒಂದೆರೆಡು ಸೆಕಂಡ್ ನಿಂತು ಆ ಬಳಿಕ ಬಾಲ್ ಅನ್ನು ಬಿಡುಗಡೆ ಮಾಡುತ್ತಾರೆ. ಈ ರೀತಿಯ ಬೌಲಿಂಗ್ ಇದೇ ಮೊದಲು. ಹೀಗಾಗಿ, ತಾರಿಕ್ ಇದೀಗ ಎಲ್ಲರ ಪ್ರಶ್ನೆಯಾಗಿದ್ದಾರೆ. ಆದರೂ ಐಸಿಸಿ ಮಾತ್ರ ಈವರೆಗೂ ತಾರಿಕ್ ಬೌಲಿಂಗ್ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಎಲ್ಲೆಡೆ ತಾರಿಕ್ ಬೌಲಿಂಗ್ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ. ಆದರೆ, ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ, ತಾರಿಕ್ ಅವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಟೀಮ್ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಲ್ಮಾನ್, ತಾರಿಕ್ ಅವರ ಬೌಲಿಂಗ್ ಬಗ್ಗೆ ಯಾವುದೇ ಅನುಮಾನಗಳಿಗೆ ಅವಕಾಶವಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ವಿಷಯದ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದೆ. ತಾರಿಕ್ ಅವರ ಕ್ರಮ ಸರಿಯಾಗಿದೆ ಮತ್ತು ಸ್ಪಿನ್ನರ್ ಮೇಲೆ ಯಾವುದೇ ನಿರ್ಬಂಧಗಳಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ ಎಂದರು.
ತಾರಿಕ್ ಅವರನ್ನು ದೊಡ್ಡ ಹೆಸರನ್ನಾಗಿ ಅಂದರೆ ಪ್ರಖ್ಯಾತಿ ಮಾಡಿದ್ದು ಮಾಧ್ಯಮಗಳು. ನಮ್ಮ ತಂಡದಲ್ಲಿರುವ 15 ಆಟಗಾರರೂ ನಮಗೆ ಸಮಾನರು. ತಾರಿಕ್ ಅವರು ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ ಮತ್ತು ನಮ್ಮ ತಂಡಕ್ಕೆ ತಾರಿಕ್ ಟ್ರಂಪ್ ಕಾರ್ಡ್ ಇದ್ದಂತೆ. ಐಸಿಸಿ ಈಗಾಗಲೇ ಸ್ಪಿನ್ನಿಂಗ್ ಬಗ್ಗೆ ಸ್ಪಷ್ಟನೆ ನೀಡಿದೆ. ಹಾಗಾದರೆ ಈ ಚರ್ಚೆ ಏಕೆ? ಎಂದು ಸಲ್ಮಾನ್ ಕೇಳಿದರು. ಅಲ್ಲದೆ, ತಾರಿಕ್ ಅವರು ಈ ವಿವಾದಗಳಿಂದ ಕಂಗಾಲಾಗಿಲ್ಲ ಮತ್ತು ಅವರು ಶಾಂತವಾಗಿರುತ್ತಾರೆ ಎಂದು ಸಲ್ಮಾನ್ ಹೇಳಿದರು.
ಅಂದಹಾಗೆ, 28 ವರ್ಷದ ಉಸ್ಮಾನ್ ತಾರಿಕ್, ಇದುವರೆಗೂ ಆಡಿರುವ ನಾಲ್ಕು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಂದೇ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಈ ಟೂರ್ನಮೆಂಟ್‌ನಲ್ಲಿ ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಿಗೆ ಕೇವಲ 27 ರನ್‌ಗಳನ್ನು ನೀಡಿ 3 ವಿಕೆಟ್‌ಗಳನ್ನು ಪಡೆದರು. ಆದಾಗ್ಯೂ, ಅವರ ಬೌಲಿಂಗ್ ಶೈಲಿಯ ಬಗ್ಗೆ ಕೆಲವು ವಿವಾದಗಳು ಪ್ರಾರಂಭವಾಗಿವೆ.
ಉಸ್ಮಾನ್ ಅವರ ಬೌಲಿಂಗ್ ಶೈಲಿಯಲ್ಲಿನ ವಿರಾಮವನ್ನು "ಕಾನೂನುಬಾಹಿರ" ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಆದರೆ, ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾರಿಕ್ ಅವರ ಬೌಲಿಂಗ್ ಆಕ್ಷನ್ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೌಲಿಂಗ್ ಶೈಲಿಯ ಕಾನೂನುಬದ್ಧತೆಯನ್ನು ನಿರ್ಧರಿಸುವುದು ICCಗೆ ಮಾತ್ರ ಸಾಧ್ಯ ಎಂದಿದ್ದಾರೆ. ಅಲ್ಲದೇ, ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸಲಹೆ ನೀರುವ ಅಶ್ವಿನ್, ತಾರಿಕ್ ಏನಾದರೂ ರನ್-ಅಪ್‌ನಲ್ಲಿ ನಿಂತರೆ ಬ್ಯಾಟ್ಸ್‌ಮನ್ ಕ್ರೀಸ್‌ನಿಂದ ಸ್ವಲ್ಪ ಮುಂದೆ ಹೋಗಬಹುದು. ಇದು ಬೌಲರ್ ಮೇಲೆ ಮಾನಸಿಕ ಒತ್ತಡ ಹಾಕುತ್ತದೆ ಎಂಬ ಅಭಿಪ್ರಾಯಪಟ್ಟಿದ್ದಾರೆ, (ಏಜೆನ್ಸೀಸ್).