- ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸಲ್ಮಾನ್ ಆಘಾ ಮದುವೆ ವಿಚಾರ
- ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ಅಳಿಯನಾಗುತ್ತಿದ್ದಾನೆ ಎಂಬ ವದಂತಿ
- ಈಗಾಗಲೇ ಮದುವೆ ಯಾಗಿರುವ ಸಲ್ಮಾನ್ ಆಘಾ
ಇಸ್ಲಾಮಾಬಾದ್: 2026ರ ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹೊಸ ವಿವಾದವೊಂದು ಕಿಚ್ಚು ಹಚ್ಚಿದೆ. ಸಲ್ಮಾನ್ ಆಘಾ ನೇತೃತ್ವದ ಪಾಕ್ ತಂಡ ಸೂಪರ್ 8 ಹಂತ ತಲುಪಿದರೂ ಸೆಮಿಫೈನಲ್ ಮಿಸ್ ಮಾಡಿಕೊಂಡಿತ್ತು. ಆದರೆ ಈಗ ಪಂದ್ಯದ ಸೋಲಿಗಿಂತ ಹೆಚ್ಚಾಗಿ ನಾಯಕ ಸಲ್ಮಾನ್ ಆಘಾ (Salman Agha Wedding) ಅವರ ಮದುವೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ.
ವೈರಲ್ ಫೋಟೋ ತಂದಿಟ್ಟ ಸಂಕಷ್ಟ!
ಈ ವದಂತಿ ಶುರುವಾಗಿದ್ದು ಒಂದು ಫೋಟೋದಿಂದ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋವೊಂದರಲ್ಲಿ ಪಿಸಿಬಿ ಬಾಸ್ ಮೊಹ್ಸಿನ್ ನಖ್ವಿ ಮತ್ತು ಸಲ್ಮಾನ್ ಆಘಾ ಒಟ್ಟಿಗೆ ಕುಳಿತು ಪಂದ್ಯ ವೀಕ್ಷಿಸುತ್ತಿರುವುದು ಕಂಡುಬಂದಿದೆ.
ಇದನ್ನು ನೋಡಿದ ನೆಟ್ಟಿಗರು, ಸಲ್ಮಾನ್ ಆಘಾ ಅವರು ಮೊಹ್ಸಿನ್ ನಖ್ವಿ ಅವರ ಮಗಳನ್ನು ಮದುವೆಯಾಗಲಿದ್ದಾರೆ, ಅದಕ್ಕಾಗಿಯೇ ಅವರಿಗೆ ನಾಯಕತ್ವ ನೀಡಲಾಗಿದೆ ಎಂದು ಟ್ರೋಲ್ ಮಾಡಲು ಶುರು ಮಾಡಿದರು. ಅನೇಕ ಪೋಸ್ಟ್‌ಗಳಲ್ಲಿ ಸಲ್ಮಾನ್ ಅವರ ನಾಯಕತ್ವಕ್ಕೆ ಅವರ ಕ್ರಿಕೆಟ್ ಪ್ರತಿಭೆಯಲ್ಲ, ಬದಲಾಗಿ ಅವರು ಪಿಸಿಬಿ ಮುಖ್ಯಸ್ಥರ ಅಳಿಯನಾಗುತ್ತಿರುವುದೇ ಕಾರಣ ಎಂದು ಅಪಪ್ರಚಾರ ಮಾಡಲಾಗಿತ್ತು.
ಸತ್ಯವೇನು ಗೊತ್ತಾ?
ಹಾಗಾದರೆ ಸಲ್ಮಾನ್ ಆಘಾ ನಿಜವಾಗಿಯೂ ನಖ್ವಿ ಅವರ ಅಳಿಯನಾಗುತ್ತಿದ್ದಾರಾ? ಖಂಡಿತ ಇಲ್ಲ, ಈ ಸುದ್ದಿಯಲ್ಲಿ ಕಿಂಚಿತ್ತೂ ಸತ್ಯವಿಲ್ಲ.
ವೈರಲ್ ಆಗಿರುವ ಫೋಟೋ ವಾಸ್ತವವಾಗಿ ಪಾಕಿಸ್ತಾನ ಸೂಪರ್ ಲೀಗ್ (PSL) ಪಂದ್ಯವೊಂದರ ಸಮಯದಲ್ಲಿ ತೆಗೆದದ್ದು. ಪಿಸಿಬಿ ಮುಖ್ಯಸ್ಥರಾಗಿ ಮೊಹ್ಸಿನ್ ನಖ್ವಿ ಅವರು ತಂಡದ ನಾಯಕನ ಜೊತೆ ಚರ್ಚಿಸುತ್ತಾ ಕುಳಿತಿರುವುದನ್ನೇ ಮದುವೆಯ ವಿಚಾರಕ್ಕೆ ತಳುಕು ಹಾಕಲಾಗಿದೆ. ಇದು ಕೇವಲ ವದಂತಿ ಅಷ್ಟೇ.
ಸಲ್ಮಾನ್ ಆಘಾ ಈಗಾಗಲೇ ಗೃಹಸ್ಥ!
ಇನ್ನೂ ಒಂದು ಮುಖ್ಯ ವಿಷಯವೆಂದರೆ, ಸಲ್ಮಾನ್ ಆಘಾ ಅವರಿಗೆ ಈಗಾಗಲೇ ಮದುವೆಯಾಗಿದೆ. ಅವರೊಬ್ಬ ಸುಖಿ ಸಂಸಾರಿ. ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಗಮನಿಸಿದರೆ ಅವರೇ ಸ್ವತಃ ಹೆಮ್ಮೆಯ ತಂದೆ ಮತ್ತು ಪತಿ (Proud Father and Husband) ಎಂದು ಬರೆದುಕೊಂಡಿದ್ದಾರೆ. ಅವರ ಪತ್ನಿಯ ಹೆಸರು ಸಬಾ ಮಂಜರ್. ಹೀಗಿರುವಾಗ ಮತ್ತೊಂದು ಮದುವೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಸಲ್ಮಾನ್ ಆಘಾ ಅವರ ಕ್ರಿಕೆಟ್ ಕೆರಿಯರ್
ಸಲ್ಮಾನ್ ಆಘಾ ಕೇವಲ ಶಿಫಾರಸ್ಸಿನಿಂದ ನಾಯಕನಾದವರಲ್ಲ. ಅವರ ಅಂಕಿಅಂಶಗಳೇ ಅದಕ್ಕೆ ಸಾಕ್ಷಿ. ಸದ್ಯಕ್ಕೆ ಅವರು ಪಾಕಿಸ್ತಾನ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಪಾಕಿಸ್ತಾನದ ಪರವಾಗಿ 23 ಟೆಸ್ಟ್ ಪಂದ್ಯಗಳಲ್ಲಿ 1,487 ರನ್ ಬಾರಿಸಿರುವ ಅಘಾ, ಏಕದಿನದಲ್ಲಿ 50 ಪಂದ್ಯಗಳಲ್ಲಿ 1,538 ಸಿಡಿಸಿದ್ದಾರೆ. ಅಷ್ಟೇ ಅಲ್ಲದೇ, ಟಿ20 ಯಲ್ಲಿ ಆಡಿರುವ 52 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 916 ರನ್ ಆಘಾ ಅವರ ಹೆಸರಿನಲ್ಲಿದೆ,(ಏಜನ್ಸೀಸ್).