ಐಪಿಎಲ್‌ನಲ್ಲಿ ಸುರಕ್ಷತೆಗೆ ಆದ್ಯತೆ: ಚಿನ್ನಸ್ವಾಮಿಯಲ್ಲಿ ಪ್ರೇಕ್ಷಕರ ಸಂಖ್ಯೆಗೆ ಮಿತಿ?
ಬೆಂಗಳೂರು: ಪ್ರತಿಷ್ಠಿತ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದ್ದರೂ, ಆಟಗಾರರು ಮತ್ತು ಪ್ರೇಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಕ್ರೀಡಾಂಗಣದಲ್ಲಿ ಆಸನಗಳ ಸಂಪೂರ್ಣ ಭರ್ತಿಗೆ ಬದಲು ಶೇ.80 ಹಾಜರಾತಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಇದರ ಜತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿ ಫ್ರಾಂಚೈಸಿ, ಪಂದ್ಯ ಆಯೋಜಕ ಪಾಲುದಾರರಿಗೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕ್ರೀಡಾಂಗಣದ ಸಂಪೂರ್ಣ ಭರ್ತಿಗೆ ಅನುಮತಿ ನಿರಾಕರಿಸಿರುವ ತಜ್ಞರ ಸಮಿತಿಯು 19ನೇ ಆವೃತ್ತಿಯಲ್ಲಿ ಲೀಗ್ ಮತ್ತು ಪ್ಲೇಆ್ ಪಂದ್ಯಗಳನ್ನು ನಡೆಸಲು ಅನುಮೋದನೆ ನೀಡಿದ್ದು, ಪಂದ್ಯಗಳ ಟಿಕೆಟ್ ಮಾರಾಟ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ನಡೆಸಲು ಕೆಎಸ್‌ಸಿಎ, ಆರ್‌ಸಿಬಿ ಫ್ರಾಂಚೈಸಿ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಸೇರಿ ಆಯೋಜಕರಿಗೆ ಸೂಚಿಸಿದೆ. ಈ ಪ್ರಕಾರ ಜನಸಂದಣಿಯ ನಿಯಂತ್ರಣಕ್ಕಾಗಿ, 35 ಸಾವಿರ ಆಸನ ಸಾಮರ್ಥ್ಯ ಹೊಂದಿರುವ ಚಿನ್ನಸ್ವಾಮಿಯಲ್ಲಿ ಒಮ್ಮೆಗೆ ಗರಿಷ್ಠ 28 ಸಾವಿರ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. ಉಳಿದಂತೆ ಪಂದ್ಯದ ಶೇ.80 ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಸೇಲಾಗಲಿದ್ದು, ಉಳಿದ ಶೇ.20 ಟಿಕೆಟ್‌ಗಳು ಮೂರು ದಿನ ಮುಂಚಿತವಾಗಿ ಆ್ಲೈನ್‌ನಲ್ಲಿ ಮಾರಾಟ ಮಾಡಬೇಕಿದೆ. ಆಸನ ಸಾಮರ್ಥ್ಯ ಕಡಿಮೆಯಾಗಿರುವುದರಿಂದ ಈ ಬಾರಿ ಪಂದ್ಯಗಳ ಟಿಕೆಟ್ ದರವೂ ಹೆಚ್ಚಳವಾಗುವ ನಿರೀಕ್ಷೆ ಇದೆ.
18ನೇ ಆವೃತ್ತಿಯ ಟ್ರೋಫಿ ಗೆದ್ದ ನಂತರದ ವಿಜಯೋತ್ಸವದಲ್ಲಿ ನಿರೀಕ್ಷೆಗೂ ಮೀರಿದ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದರ ಜತೆಗೆ ಜನಸಂದಣಿಯ ನಿರ್ವಹಣೆಯ ವೈಲ್ಯದಿಂದಾಗಿ 11 ಮಂದಿ ಅಸುನೀಗಿದ್ದರು. ಇಂಥ ಅನಿರೀಕ್ಷಿತ ಘಟನೆಗಳು ಮರುಕಳಿಸದಂತೆ ತಡೆಯಲು ಪಂದ್ಯ ವೀಕ್ಷಣೆಗೆ ಆಗಮಿಸುವ ಪ್ರೇಕ್ಷಕರ ಪ್ರವೇಶ ಮತ್ತು ನಿರ್ಗಮನವನ್ನು ಖಾತ್ರಿಪಡಿಸಲು ಸುಸಜ್ಜಿತ ಕಾರ್ಯ ವಿಧಾನವನ್ನು ಜಾರಿಗೊಳಿಸಲಾಗಿದೆ.
ಪ್ರವೇಶ ದ್ವಾರಗಳ ಬಳಿ ಜನದಟ್ಟಣೆಯ ನಿಗಾ ವಹಿಸಲು ಕೃತಕ ಬುದ್ಧಿಮತ್ತೆ (ಎಐ) ಕ್ಯಾಮರಾ ಬಳಸಲಾಗುತ್ತಿದ್ದು, ಹೆಚ್ಚು ಜನ ಸೇರಿದರೆ, ಅವರು ಸುರಕ್ಷಿತವಾಗಿ ಆಸನಗಳಿಗೆ ತೆರಳುವವರೆಗೂ ಹೋಲ್ಡಿಂಗ್ ಏರಿಯಾದ ಗೇಟ್‌ಗಳನ್ನು ಮುಚ್ಚಲಾಗುತ್ತದೆ. ಟಿಕೆಟ್‌ಗಳನ್ನು ಹೊಂದಿರುವ ಪ್ರೇಕ್ಷಕರನ್ನು ಅವರವರ ಪ್ರವೇಶ ದ್ವಾರಗಳು ಮತ್ತು ಆಸನ ವಿಭಾಗಗಳಿಗೆ ಸುರಕ್ಷಿತವಾಗಿ ತೆರಳಲು ಆಯೋಜಕರು ಹೋಲ್ಡಿಂಗ್ ಪ್ರದೇಶದಲ್ಲಿ ಮಾರ್ಗದರ್ಶನ ನೀಡಲಿದ್ದಾರೆ ಎನ್ನಲಾಗಿದೆ. ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಟಿಕೆಟ್‌ಗಳನ್ನು ವಿವಿಧ ಬಣ್ಣಗಳಲ್ಲಿ ಪರಿಚಯಿಸಲಾಗುತ್ತಿದೆ. ಇದರಿಂದ ಒಂದು ಬಣ್ಣದ ಟಿಕೆಟ್ ಹೊಂದಿರುವ ಜನರು ಇನ್ನೊಂದು ಬಣ್ಣದ ಟಿಕೆಟ್‌ಗಳ ಪ್ರವೇಶ ದ್ವಾರಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ಇದು ಪ್ರೇಕ್ಷಕರು ಎಲ್ಲಿದ್ದಾರೆ ಎಂಬುದನ್ನು ತ್ವರಿತವಾಗಿ ಗುರುತಿಸಲು ಮತ್ತು ಆತಂಕದ ಪರಿಸ್ಥಿತಿ ಎದುರಾದರೆ ತಕ್ಷಣಕ್ಕೆ ಸ್ಪಂದಿಸಲು ಆಯೋಜಕರು ಮತ್ತು ಪೊಲೀಸರಿಗೆ ಸಹಾಯವಾಗಲಿದ.
ತುರ್ತು ಸಮಯದಲ್ಲಿ ಆಂಬುಲೆನ್ಸ್, ಅಗ್ನಿಶಾಮಕ ವಾಹನ ಮತ್ತು ಇತರ ತುರ್ತು ಸೇವೆಗಳನ್ನು ಒದಗಿಸಲು ಕ್ರೀಡಾಂಗಣದ ಸುತ್ತಲೂ ಪರ್ಯಾಯ ಜಾಗವನ್ನು ಮೀಸಲಿಡಲಾಗಿದೆ. ಇದಲ್ಲದೆ, ಅಗತ್ಯವಿದ್ದರೆ ತಕ್ಷಣ ವೈದ್ಯಕೀಯ ನೆರವು ಮತ್ತು ಸೌಲಭ್ಯಗಳನ್ನು ಒದಗಿಸಲು 4 ಆಂಬುಲೆನ್ಸ್‌ಗಳು ಕ್ರೀಡಾಂಗಣದ ಬಳಿ ಇರಲಿವೆ.