ಹೈವೋಲ್ಟೇಜ್​ ಪಂದ್ಯದಲ್ಲಿ RCB ವಿರುದ್ಧ ಸೋಲುಂಡರೂ CSK ನಾಯಕ ಆಡಿದ ಮಾತಿಗೆ ತಲೆಬಾಗಿದ ಕ್ರೀಡಾ ಜಗತ್ತು! Ruturaj Gaikwad  
ಕ್ರಿಕೆಟ್

ಹೈವೋಲ್ಟೇಜ್​ ಪಂದ್ಯದಲ್ಲಿ RCB ವಿರುದ್ಧ ಸೋಲುಂಡರೂ CSK ನಾಯಕ ಆಡಿದ ಮಾತಿಗೆ ತಲೆಬಾಗಿದ ಕ್ರೀಡಾ ಜಗತ್ತು! Ruturaj Gaikwad

ಪ್ರಮುಖ ಮುಖ್ಯಾಂಶಗಳು

  • ಈ ಬಾರಿಯ ಐಪಿಎಲ್ 2026ರ ಟೂರ್ನಿಯಲ್ಲಿ ಸಿಎಸ್​ಕೆ ತಂಡ ಒಂದೇ ಒಂದು ಗೆಲುವಿಗಾಗಿ ಹೆಣಗಾಡುತ್ತಿದೆ
  • ಇದುವೆರೆಗೂ ಮೂರು ಪಂದ್ಯಗಳನ್ನು ಆಡಿರುವ ಸಿಎಸ್​ಕೆ ಮೂರರಲ್ಲೂ ಸೋಲು ಅನುಭವಿಸಿದೆ
  • ನಿನ್ನೆ ಆರ್​ಸಿಬಿ ವಿರುದ್ಧ ನಡೆದ ಹೈವೋಲ್ಟೇಜ್​ ಪಂದ್ಯದಲ್ಲೂ ಸಿಎಸ್​ಕೆಗೆ ಹೀನಾಯ ಸೋಲು
  • ಸೋಲು ತಮ್ಮನ್ನು ಸಂಪೂರ್ಣವಾಗಿ ನಿರಾಶೆಗೊಳಿಸಿದೆ ಎಂದ ಸಿಎಸ್​ಕೆ ನಾಯಕ ರುತುರಾಜ್ ಗಾಯಕವಾಡ್
Ruturaj Gaikwad : ಈ ಬಾರಿಯ ಐಪಿಎಲ್ 2026ರ ಟೂರ್ನಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ( CSK ) ತಂಡ ಒಂದೇ ಒಂದು ಗೆಲುವಿಗಾಗಿ ಹೆಣಗಾಡುತ್ತಿದೆ. ಇದುವೆರೆಗೂ ಮೂರು ಪಂದ್ಯಗಳನ್ನು ಆಡಿರುವ ಸಿಎಸ್​ಕೆ ಮೂರರಲ್ಲೂ ಸೋಲು ಅನುಭವಿಸಿದೆ. ಭಾನುವಾರ ( ಏಪ್ರಿಲ್​ 05) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ತನ್ನ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ವಿರುದ್ಧ 43 ರನ್‌ಗಳಿಂದ ಸಿಎಸ್​ಕೆ ಸೋಲುಂಡಿತು. ಈ ಸೋಲು ತಮ್ಮನ್ನು ಸಂಪೂರ್ಣವಾಗಿ ನಿರಾಶೆಗೊಳಿಸಿದೆ ಎಂದು ಸಿಎಸ್​ಕೆ ನಾಯಕ ರುತುರಾಜ್ ಗಾಯಕವಾಡ್ ಹೇಳಿದರು. ಅಲ್ಲದೆ, ಕೊಹ್ಲಿಯ ಕ್ಯಾಚ್ ಬಿಟ್ಟಿದ್ದು ಮತ್ತು ಅನ್ಶುಲ್ ಕಾಂಬೋಜ್​ ಅವರ ನೋ-ಬಾಲ್‌ ನಮ್ಮ ತಂಡದ ಸೋಲಿಗೆ ತಿರುವು ನೀಡಿದವು ಎಂದು ತಿಳಿಸಿದರು. 
ನಿನ್ನೆ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 250 ರನ್​ಗಳ ಬೃಹತ್​ ಮೊತ್ತವನ್ನು ಕಲೆಹಾಕಿತು. ಆರ್‌ಸಿಬಿ ಪರ ಟಿಮ್ ಡೇವಿಡ್ (ಅಜೇಯ 70 ರನ್​, 25 ಎಸೆತ, 3 ಬೌಂಡರಿ, 8 ಸಿಕ್ಸರ್) ಮತ್ತು ದೇವದತ್ ಪಡಿಕ್ಕಲ್ (50 ರನ್​, 29 ಎಸೆತ, 5 ಬೌಂಡರಿ, 2 ಸಿಕ್ಸರ್) ಮಿಂಚಿನ ಅರ್ಧಶತಕಗಳನ್ನು ಗಳಿಸಿದರು. ನಾಯಕ ರಜತ್ ಪಾಟಿದಾರ್ (ಅಜೇಯ 48 ರನ್​, 19 ಎಸೆತ, 1 ಬೌಂಡರಿ, 6 ಸಿಕ್ಸರ್) ಮತ್ತು ಫಿಲ್ ಸಾಲ್ಟ್ (46 ರನ್​, 30 ಎಸೆತ, 3 ಬೌಂಡರಿ, 2 ಸಿಕ್ಸರ್) ವೇಗವಾಗಿ ಆಡಿದರು. ಸಿಎಸ್‌ಕೆ ಬೌಲರ್‌ಗಳಲ್ಲಿ ಅನ್ಶುಲ್ ಕಾಂಬೋಜ್, ಜೇಮಿ ಓವರ್ಟನ್ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಆರ್​ಸಿಬಿ ನೀಡಿದ 251 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 207 ರನ್​ಗಳಿಗೆ ಆಲೌಟ್ ಆಯಿತು. ಸಿಎಸ್​ಕೆ ಪರ ಸರ್ಫರಾಜ್ ಖಾನ್ (50 ರನ್​, 25 ಎಸೆತ, 8 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರು. ಪ್ರಶಾಂತ್ ವೀರ್ (43 ರನ್​, 29 ಎಸೆತ, 6 ಬೌಂಡರಿ, 1 ಸಿಕ್ಸರ್) ಮತ್ತು ಜೇಮೀ ಓವರ್ಟನ್ (37 ರನ್​, 16 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆರ್​ಸಿಬಿ ಪರ ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಪಡೆದರು. ಜಾಕೋಬ್ ಡಫಿ, ಅಭಿನಂದನ್ ಸಿಂಗ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರೆ, ಸುಯಾಶ್ ಶರ್ಮಾ ಒಂದು ವಿಕೆಟ್ ಪಡೆದರು.
ಈ ಪಂದ್ಯದ ಬಳಿಕ ಮಾತನಾಡಿದ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್, ಈ ಸೋಲು ನಮ್ಮ ತಂಡವನ್ನು ನಿರಾಶೆಗೊಳಿಸಿದೆ ಎಂದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮ್ಮ ತಂಡ ಬ್ಯಾಟಿಂಗ್ ಮಾಡಿದ ರೀತಿ ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಸರ್ಫರಾಜ್ ಖಾನ್, ಪ್ರಶಾಂತ್ ವೀರ್, ಜೇಮಿ ಓವರ್ಟನ್ ಮತ್ತು ಸ್ವಲ್ಪ ಮಟ್ಟಿಗೆ ಶಿವಂ ದುಬೆ ಅವರ ಅತ್ಯುತ್ತಮ ಬ್ಯಾಟಿಂಗ್​ನಿಂದಾಗಿ ಹೀನಾಯ ಸೋಲನ್ನು ತಪ್ಪಿಸಿಕೊಂಡೆವು ಎಂದು ಗಾಯಕ್ವಾಡ್​ ಶ್ಲಾಘಿಸಿದರು. ನಮ್ಮ ತಂಡದಿಂದ ಒಂದೊಳ್ಳೆ ಆರಂಭ ಸಿಕ್ಕಿದ್ದರೆ ಪಂದ್ಯದ ಫಲಿತಾಂಶವೇ ವಿಭಿನ್ನವಾಗಿರುತ್ತಿತ್ತು. ನಾವು ಖಂಡಿತವಾಗಿಯೂ ಈ ಗುರಿಯನ್ನು ಸಾಧಿಸುತ್ತಿದ್ದೆವು. ಆದರೆ, ಈ ಪಂದ್ಯದಲ್ಲಿ ಒಳ್ಳೆಯ ಆರಂಭ ಸಿಗಲಿಲ್ಲ. ಇಲ್ಲಿ ಸಂಪೂರ್ಣ ತಪ್ಪು ನನ್ನದೇ ಎಂದು ಗಾಯಕ್ವಾಡ್​ ತಿಳಿಸಿದರು. 
ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಟಿಮ್ ಡೇವಿಡ್ ಒಂದು ಹಂತದಲ್ಲಿ ಕ್ಲೀನ್ ಬೌಲ್ಡ್ ಆದರು. ಆದರೆ, ಆ ಚೆಂಡು ನೋಬಾಲ್​ ಆಗಿ ಡೇವಿಡ್​ಗೆ ಜೀವದಾನ ಸಿಕ್ಕಿತು. ಇದಾದ ಬಳಿಕ ಡೇವಿಡ್​ ಮತ್ತೆ ಅಬ್ಬರಿಸಿದರು. ಈ ಬಗ್ಗೆ ಮಾತನಾಡಿದ ರುತುರಾಜ್, ಅನ್ಶುಲ್ ಕಾಂಬೋಜ್ ಅವರು ಬಹುತೇಕ ತಮ್ಮ ವಿಕೆಟ್ ಪಡೆದರು. ಈ ಹಂತದಲ್ಲಿ ನಮಗೆ ಸಂತೋಷವಾಯಿತು. ಆದರೆ, ಚೆಂಡು ನೋ-ಬಾಲ್ ಆಗಿ ಮಾರ್ಪಟ್ಟಿದ್ದು ನಮಗೆ ದುರದೃಷ್ಟಕರ. ಆ ಅವಕಾಶವನ್ನು ಡೇವಿಡ್​ ಸದುಪಯೋಗಪಡಿಸಿಕೊಂಡು ಅದ್ಭುತ ಪ್ರದರ್ಶನ ನೀಡಿದರು. ಮೈದಾನದಾದ್ಯಂತ ಚೆಂಡನ್ನು ಬಾರಿಸಿದರು ಎಂದು ಡೇವಿಡ್​ ಅವರನ್ನು ಕೊಂಡಾಡುವ ಮೂಲಕ ರುತುರಾಜ್​ ಕ್ರೀಡಾ ಸ್ಫೂರ್ತಿ ಮೆರೆದರು. ಅಲ್ಲದೆ, ರುತುರಾಜ್​ ಅವರ ಈ ಮಾತಿಗೆ ಕ್ರೀಡಾ ಜಗತ್ತು ತಲೆಬಾಗಿದೆ.
ತಮ್ಮ ತಂಡದ ಕಳಪೆ ಫೀಲ್ಡಿಂಗ್‌ ಬಗ್ಗೆಯೂ ರುತುರಾಜ್​ ಪ್ರತಿಕ್ರಿಯಿಸಿದರು. ನಾವು ಫೀಲ್ಡಿಂಗ್‌ನಲ್ಲಿ ಇನ್ನಷ್ಟು ಸುಧಾರಿಸಬೇಕಾಗಿದೆ. ಕೊಹ್ಲಿ ಅವರು ಇನ್ನಿಂಗ್ಸ್‌ನ ಆರಂಭದಲ್ಲಿ ನೀಡಿದ ಕ್ಯಾಚ್ ಪಡೆದಿದ್ದರೆ, ಪಂದ್ಯದ ದಿಕ್ಕು ನಮ್ಮ ಕಡೆ ಬದಲಾಗುತ್ತಿತ್ತು. ಕ್ಯಾಚ್​ ಬಿಟ್ಟ ನಂತರವೂ, ಆರ್‌ಸಿಬಿ ಇನ್ನಿಂಗ್ಸ್‌ನ 13 ಮತ್ತು 14 ನೇ ಓವರ್‌ಗಳವರೆಗೆ ಪಂದ್ಯ ನಮ್ಮ ಕೈಯಲ್ಲಿತ್ತು. ಆ ನಂತರ ಎಲ್ಲವೂ ಬದಲಾಯಿತು ಎಂದು ರುತುರಾಜ್ ಗಾಯಕ್ವಾಡ್ ಹೇಳಿದರು.
ಈ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ರುತುರಾಜ್ ಗಾಯಕ್ವಾಡ್ 3 ಎಸೆತಗಳಲ್ಲಿ 1 ಸಿಕ್ಸರ್​ ಸೇರಿದಂತೆ 7 ರನ್​ ಗಳಿಸಿ ಔಟಾದರು, (ಏಜೆನ್ಸೀಸ್​).