ಟಿ20 ವಿಶ್ವಕಪ್: ಭಾರತ-ವಿಂಡೀಸ್ 'ಕ್ವಾರ್ಟರ್ಫೈನಲ್'ನಲ್ಲಿ ರನ್ಮಳೆ ನಿರೀಕ್ಷೆ; ವರುಣನ ಭೀತಿ ಇಲ್ಲ
ಕೋಲ್ಕತ: ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಭಾರತ ತಂಡಕ್ಕೆ ಟಿ20 ವಿಶ್ವಕಪ್ (T20 World Cup) ಸೆಮಿಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್-8 ಹಂತದ 3ನೇ ಹಾಗೂ ಕೊನೇ ಪಂದ್ಯ ನಿರ್ಣಾಯಕವೆನಿಸಿದೆ. ಈಡನ್ ಗಾರ್ಡನ್ಸ್ನಲ್ಲಿ ಭಾನುವಾರ ನಡೆಯಲಿರುವ ಈ ನಿರ್ಣಾಯಕ ಪಂದ್ಯದಲ್ಲಿ ರನ್ಮಳೆ ಹರಿಯುವ ನಿರೀಕ್ಷೆ ಇದೆ. ಸ್ಕಾಟ್ಲೆಂಡ್ ತಂಡ ಇಟಲಿ ವಿರುದ್ಧ ಹಾಲಿ ಟೂರ್ನಿಯ ಮೊದಲ 200 ಪ್ಲಸ್ ಮೊತ್ತ ಕಲೆಹಾಕಿದ ಪಿಚ್ನಲ್ಲೇ ಈ ಪಂದ್ಯ ನಿಗದಿಯಾಗಿದೆ.
ಆತಿಥೇಯ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಶುಕ್ರವಾರ ಪಿಚ್ ಸಿದ್ಧತೆ ಪರಿಶೀಲಿಸಿ ಸ್ಥಳಿಯ ಕ್ಯುರೇಟರ್ ಸುಜನ್ ಮುಖರ್ಜಿ ಮತ್ತು ಬಿಸಿಸಿಐ ಕ್ಯುರೇಟರ್ ಆಶಿಶ್ ಬೌಮಿಕ್ ಜತೆ ಚರ್ಚಿಸಿದರು. ಸ್ಪಿನ್ನರ್ಗಳಿಗೂ ಪಿಚ್ನಿಂದ ನೆರವು ಲಭಿಸುವ ನಿರೀಕ್ಷೆ ಇದೆ. ಆದರೆ, ಪಂದ್ಯಕ್ಕೆ ಇಬ್ಬನಿ ಸಮಸ್ಯೆಯೂ ಕಾಡುವ ಸಾಧ್ಯತೆ ಇದೆ ಎಂದು ಸುಜನ್ ಮುಖರ್ಜಿ ತಿಳಿಸಿದ್ದಾರೆ.
ಭಾರತಕ್ಕೆ ಈಡನ್ನಲ್ಲಿ ಇದು ಟೂರ್ನಿಯ ಮೊದಲ ಪಂದ್ಯ ಆಗಿದ್ದರೆ, ವಿಂಡೀಸ್ ತಂಡ ಇಲ್ಲಿ ಈಗಾಗಲೆ ಸ್ಕಾಟ್ಲೆಂಡ್, ಇಟಲಿ ವಿರುದ್ಧ 2 ಪಂದ್ಯ ಆಡಿದ್ದು, 2ಲ್ಲೂ ಗೆದ್ದಿತ್ತು.
ವಿಂಡೀಸ್ ವಿರುದ್ಧದ ಕ್ವಾರ್ಟರ್ಫೈನಲ್ ಮಾದರಿಯ ಕಾದಾಟದಲ್ಲಿ ಗೆದ್ದರೆ ಭಾರತ ಸತತ 3ನೇ ಬಾರಿ ಉಪಾಂತ್ಯಕ್ಕೇರಬಹುದಾಗಿದೆ. ಆದರೆ ಈ ಪಂದ್ಯ ಮಳೆಯಿಂದ ರದ್ದುಗೊಂಡರೆ ಭಾರತಕ್ಕೆ ಸೆಮೀಸ್ ಟಿಕೆಟ್ ಕೈತಪ್ಪಲಿರುವುದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಗ್ರೂಪ್-1ರಲ್ಲಿ ಉಭಯ ತಂಡಗಳು ತಲಾ 2 ಅಂಕ ಹೊಂದಿದ್ದು, ರನ್ರೇಟ್ ಲೆಕ್ಕಾಚಾರದಲ್ಲಿ ವೆಸ್ಟ್ ಇಂಡೀಸ್ (+1.791) ತಂಡ ಭಾರತಕ್ಕಿಂತ (-0.100) ಮುಂದಿದೆ. ಇದರಿಂದ ಪಂದ್ಯ ರದ್ದಾದರೆ ವಿಂಡೀಸ್ ತಂಡವೇ ಉಪಾಂತ್ಯಕ್ಕೇರಲಿದೆ. ಆದರೆ ಕೋಲ್ಕತದ ಹವಾಮಾನ ಇಲಾಖೆ ವರದಿಯ ಪ್ರಕಾರ, ಭಾನುವಾರ ಮಳೆ ಸುರಿಯುವ ಎಳ್ಳಷ್ಟು ಸಾಧ್ಯತೆಯೂ ಇಲ್ಲ. ಅದರಲ್ಲೂ ಸಂಜೆ 6ರಿಂದ ರಾತ್ರಿ 11ರವರೆಗೆ ಮಳೆ ಸಾಧ್ಯತೆಯೇ ಇಲ್ಲ ಎಂದು ಹವಾಮಾನ ವರದಿ ಸ್ಪಷ್ಟಪಡಿಸಿದೆ. ಇದರಿಂದ ಭಾರತ ಉಪಾಂತ್ಯಕ್ಕೇರಲು ವಿಂಡೀಸ್ ವಿರುದ್ಧ ಗೆಲುವಿನತ್ತ ಮಾತ್ರ ಗಮನಹರಿಸಬೇಕಾಗಿದೆ.