ರಗ್ಬಿ ಪ್ರೀಮಿಯರ್ ಲೀಗ್: ಫೈನಲ್ ಪ್ರವೇಶಿಸಿದ ಹೈದರಾಬಾದ್ ಹೀರೋಸ್ ಮತ್ತು ಮುಂಬೈ ಡ್ರೀಮರ್ಸ್
ಹೈದರಾಬಾದ್: HSBC ರಗ್ಬಿ ಪ್ರೀಮಿಯರ್ ಲೀಗ್ ಪವರ್ಡ್ ಬೈ Avid ಸೀಸನ್ 2ರ ಸೆಮಿಫೈನಲ್ ಪಂದ್ಯಗಳಲ್ಲಿ ಶನಿವಾರ ಗಚಿಬೌಲಿನ ಗಂತಿ ಮೋಹನ ಚಂದ್ರ ಬಾಲಯೋಗಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಆತಿಥೇಯ ಹೈದರಾಬಾದ್ ಹೀರೋಸ್ ಮತ್ತು ಮುಂಬೈ ಡ್ರೀಮರ್ಸ್ ತಂಡಗಳು ಗೆಲುವು ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆದವು.ಹೈದರಾಬಾದ್ ಹೀರೋಸ್ 29-24ರಿಂದ ಚೆನ್ನೈ ಬುಲ್ಸ್‌ನ್ನು ಮಣಿಸಿತು
ಹೈದರಾಬಾದ್ ಹೀರೋಸ್ ಮಿಂಚಿನ ಆರಂಭ ಕಂಡಿತು. ಚೆಂಡನ್ನು ವೇಗವಾಗಿ ಮೈದಾನದಾದ್ಯಂತ ಚಲಾಯಿಸುತ್ತಾ ಮೊದಲ ನಿಮಿಷದಲ್ಲೇ ತೈಟೈಫೊನೊ ತವಿತಾ ಟ್ರೈ ದಾಖಲಿಸಿದರು. ಇದಕ್ಕೆ ಪ್ರತಿಯಾಗಿ ಚೆನ್ನೈ ಬುಲ್ಸ್ ಹೆಚ್ಚು ದೈಹಿಕ ಆಟವಾಡುತ್ತಾ ಮಧ್ಯಭಾಗದಿಂದ ದಾಳಿ ನಡೆಸಿ ಮಾರಿಕಾ ಕೊರೊಇಬೆಟೆ ಟ್ರೈ ಮೂಲಕ ಮುನ್ನಡೆ ಸಾಧಿಸಿತು.
ಆದರೆ ಹೈದರಾಬಾದ್ ಮೈದಾನದ ಅಗಲವನ್ನು ಸಮರ್ಥವಾಗಿ ಬಳಸಿಕೊಂಡಿತು. ತವಿತಾ ಎಡ ವಿಂಗ್‌ನಲ್ಲಿ ತಮ್ಮ ಎರಡನೇ ಟ್ರೈ ದಾಖಲಿಸಿದರೆ, ಮೌರಿಸ್ ಲಾಂಗ್‌ಬಾಟಮ್ ಅವರ ಚುರುಕಿನ ಓಟ ಮತ್ತು ವೇಗದ ಲಿಂಕ್ ಆಟದ ನೆರವಿನಿಂದ ರಾವುಆಮಾ ಸೆರುವಾಕುಲಾ ಮತ್ತೊಂದು ಟ್ರೈ ದಾಖಲಿಸಿ ಹೈದರಾಬಾದ್‌ನ ಮುನ್ನಡೆಯನ್ನು ಹೆಚ್ಚಿಸಿದರು. ಚೆನ್ನೈ ಬುಲ್ಸ್ ತಾಳ್ಮೆಯಿಂದ ಚೆಂಡನ್ನು ಚಲಾಯಿಸುತ್ತಾ ದಾಳಿಯನ್ನು ಕಟ್ಟಿಕೊಂಡು, ಮೊದಲಾರ್ಧ ಮುಗಿಯುವ ಮುನ್ನ ಜುಗಲ್ ಮಾಝಿ ಅತ್ಯುತ್ತಮ ತಂಡದ ಆಟವನ್ನು ಟ್ರೈಯಾಗಿ ಪರಿವರ್ತಿಸಿ ಅಂತರವನ್ನು ಕಡಿಮೆ ಮಾಡಿದರು.
ನಾಯಕ ಮ್ಯಾನುಯೆಲ್ ಮೊರೆನೊ ಟ್ರೈ ದಾಖಲಿಸಿ ಅಂತರವನ್ನು ಕೇವಲ ಎರಡು ಅಂಕಗಳಿಗೆ ಇಳಿಸಿದರು. ಅಂತಿಮ ಹಂತದಲ್ಲಿ ಹೀರೋಸ್ ಅಪಾರ ಸಮಾಧಾನ ಮತ್ತು ತಾಳ್ಮೆ ಪ್ರದರ್ಶಿಸಿತು. ಚೆಂಡಿನ ಮೇಲಿನ ಹಿಡಿತವನ್ನು ಕಾಪಾಡಿಕೊಂಡು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದ ತಂಡಕ್ಕೆ ಸಂಬಿತ್ ಪ್ರಧಾನ ಟ್ರೈ ದಾಖಲಿಸಿ ನಿರ್ಣಾಯಕ ಮುನ್ನಡೆ ತಂದುಕೊಟ್ಟರು. ಕೊನೆಯ ಕ್ಷಣಗಳಲ್ಲಿ ಚೆಂಡನ್ನು ಸಮರ್ಥವಾಗಿ ನಿಯಂತ್ರಿಸಿದ ಹೈದರಾಬಾದ್ ಹೀರೋಸ್ ಕಠಿಣ ಹೋರಾಟದ ಗೆಲುವು ಸಾಧಿಸಿತು.
ಮುಂಬೈ ಡ್ರೀಮರ್ಸ್ 7-5ರಿಂದ ಬೆಂಗಳೂರು ಬ್ರೇವ್‌ಹಾರ್ಟ್ಸ್‌ನ್ನು ಮಣಿಸಿತು
ಎರಡನೇ ಸೆಮಿಫೈನಲ್ ಅತ್ಯಂತ ರೋಚಕ ರಕ್ಷಣಾತ್ಮಕ ಹೋರಾಟವಾಗಿ ನಡೆಯಿತು. ಉಭಯ ತಂಡಗಳು ಪರಸ್ಪರ ಚೆಂಡಿನ ಹಿಡಿತ ಕಸಿದುಕೊಳ್ಳುತ್ತಾ, ಎದುರಾಳಿಯ ಆಟದ ಲಯವನ್ನು ಭಂಗಪಡಿಸುತ್ತಾ ಪಂದ್ಯವನ್ನು ಆರಂಭದಿಂದಲೇ ತೀವ್ರ ಪೈಪೋಟಿಯನ್ನಾಗಿಸಿತು. ಮೊದಲಾರ್ಧದಲ್ಲಿ ಮುಂಬೈ ಡ್ರೀಮರ್ಸ್ ಚೆಂಡಿನ ಮೇಲಿನ ಹಿಡಿತದ ಮೂಲಕ ನಿಧಾನವಾಗಿ ಮೇಲುಗೈ ಸಾಧಿಸಿದರೂ, ಬೆಂಗಳೂರು ಬ್ರೇವ್‌ಹಾರ್ಟ್ಸ್‌ನ ಶಿಸ್ತುಬದ್ಧ ರಕ್ಷಣೆಯನ್ನು ಭೇದಿಸಲು ವಿಫಲವಾಯಿತು.
ವಿರಾಮದ ಬಳಿಕ ವೇಗದ ಚೆಂಡಿನ ಚಲನೆಯಿಂದ ಬಲಭಾಗದಲ್ಲಿ ಅವಕಾಶ ಸೃಷ್ಟಿಯಾದಾಗ ರಯಾನ್ ಆಪ್ಸ್ ಟ್ರೈ ದಾಖಲಿಸಿ ಬೆಂಗಳೂರುಗೆ ಮುನ್ನಡೆ ತಂದುಕೊಟ್ಟರು.
ಆದರೆ ಮುಂಬೈ ತಕ್ಷಣವೇ ಪ್ರತಿಕ್ರಿಯಿಸಿತು. ದೊರೆತ ಕೆಲವೇ ಸ್ಪಷ್ಟ ಅವಕಾಶಗಳಲ್ಲಿ ಒಂದನ್ನು ಬಳಸಿಕೊಂಡ ಈಥನ್ ಮೆಕ್‌ಫಾರ್ಲ್ಯಾಂಡ್ ಮಹತ್ವದ ಟ್ರೈ ದಾಖಲಿಸಿದರು. ಬಳಿಕ ಜೇಮ್ಸ್ ಟರ್ನರ್ ಕನ್ವರ್ಷನ್ ಯಶಸ್ವಿಗೊಳಿಸಿ ಮುಂಬೈಗೆ ಮುನ್ನಡೆ ತಂದುಕೊಟ್ಟರು.
ಕೊನೆಯ ಕ್ವಾರ್ಟರ್‌ನಲ್ಲಿ ಬೆಂಗಳೂರು ತನ್ನ ಸಂಪೂರ್ಣ ಶಕ್ತಿಯನ್ನು ಪ್ರಯೋಗಿಸಿ ಮುಂಬೈ ಅರ್ಧಭಾಗದಲ್ಲೇ ನಿರಂತರ ಒತ್ತಡ ಹೇರಿತು. ಆದರೂ ಮುಂಬೈ ಡ್ರೀಮರ್ಸ್‌ನ ದೃಢ ರಕ್ಷಣಾ ಆಟವು ಆ ಒತ್ತಡವನ್ನು ಯಶಸ್ವಿಯಾಗಿ ತಡೆದು, ಅಲ್ಪ ಮುನ್ನಡೆಯನ್ನು ಕೊನೆಯವರೆಗೂ ಕಾಯ್ದುಕೊಂಡಿತು. ಇದರೊಂದಿಗೆ ಈ ಸೀಸನ್‌ನ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿತು.