ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್
- ಈ ಸೀಸನ್ನಲ್ಲಿ ಸೋಲಿನ ರುಚಿ ನೋಡಿದ ಆರ್‌ಸಿಬಿ
- ರಾಜಸ್ಥಾನ ರಾಯಲ್ಸ್ ಎದುರು 6 ವಿಕೆಟ್‌ಗಳಿಂದ ಸೋಲು
- ಎರಡು ಪಂದ್ಯಗಳನ್ನು ಗೆದ್ದು ಬೀಗಿದ್ದ ಆರ್ಸಿಬಿಯ ಸೋಲಿಗೆ ಆತನೇ ಕಾರಣ ಎಂದ ಕ್ಯಾಪ್ಟನ್ ರಜತ್ ಪಾಟಿದಾರ್
RR vs RCB: ನಿನ್ನೆ (ಏ.10) ಅಸ್ಸಾಂನ ಗುವಾಹಟಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಐಪಿಎಲ್ 19ನೇ ಪಂದ್ಯದಲ್ಲಿ ಆರ್‌ಸಿಬಿ ಮೊದಲ ಸೋಲು ಕಂಡಿತು. 6 ವಿಕೆಟ್‌ಗಳ ಅಂತರದಲ್ಲಿ ಹೀನಾಯ ಸೋಲುಂಡ ರಜತ್ ಪಾಟಿದಾರ್ ಪಡೆಗೆ ಇದು 19ನೇ ಆವೃತ್ತಿಯಲ್ಲಿ ಮೊದಲ ಲಾಸ್.
ಪಂದ್ಯ ಸೋತ ಬೆನ್ನಲ್ಲೇ ಬೇಸರದಿಂದ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ನಾವು ಪಂದ್ಯವನ್ನು ಸೋತರೂ ಸಹ ಕೆಲವು ಪಾಸಿಟಿವ್ ಅಂಶಗಳಿವೆ. ಪವರ್ ಪ್ಲೇನಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದೆವು. ಮತ್ತು ಆರಂಭದಲ್ಲಿ ವಿಕೆಟ್ ಕಳೆದುಕೊಂಡ ನಂತರವೂ 202 ರನ್ಗಳ ಗುರಿಯನ್ನು ಕೊಟ್ಟೆವು. ಅದೇ ರೀತಿ, ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್‌ಗಳು, ವಿಶೇಷವಾಗಿ ವೈಭವ್ ಸೂರ್ಯವಂಶಿ, ಪವರ್ ಪ್ಲೇನಲ್ಲಿ ಬ್ಯಾಟಿಂಗ್ ಮಾಡಿದ ರೀತಿ ನಮ್ಮ ಗೆಲುವಿನ ಲೆಕ್ಕಾಚಾರಗಳನ್ನು ಬದಲಿಸಿತು ಎಂದರು.
ವೈಭವ್ ಸೂರ್ಯವಂಶಿ ನಮ್ಮಿಂದ ಗೆಲುವನ್ನು ಕಸಿದುಕೊಂಡರು. ಹಿಂದಿನ ಪಂದ್ಯಗಳಲ್ಲಿ ನಾವು ಆಡಿದ ರೀತಿ ತುಂಬಾ ಚೆನ್ನಾಗಿತ್ತು. ಆದರೆ, ಈ ಸೋಲಿನಿಂದ ಕಲಿಯಲು ಹಲವು ವಿಷಯಗಳಿವೆ ಎಂದರು. ಇನ್ನು ಸುಯಾಶ್ ಶರ್ಮ ಅವರನ್ನು ಏಕೆ ಆಡಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ರಜತ್, ಬೌಲಿಂಗ್ ಬದಲಾವಣೆಗಳ ಬಗ್ಗೆ ನಾವು ಹೆಚ್ಚು ಯೋಚಿಸಲಿಲ್ಲ. ಕಾರಣ, ವೆಂಕಟೇಶ್ ಅಯ್ಯರ್, ಶೆಫರ್ಡ್ ಮತ್ತು ಕೃನಾಲ್ ಅವರಿಗೆ ಓವರ್‌ಗಳನ್ನು ಕೊಟ್ಟಿದ್ದೆವು. ಇದೇನು ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿಲ್ಲ. ಈ ಪಂದ್ಯದಿಂದ ನಾವು ಬಹಳಷ್ಟು ಕಲಿಯುತ್ತೇವೆ ಮತ್ತು ಮುಂದುವರಿಯುತ್ತೇವೆ. ಮುಂದಿನ ಪಂದ್ಯಕ್ಕೆ ಖಂಡಿತ ಕಮ್ಬ್ಯಾಕ್ ಮಾಡುತ್ತೇವೆ ಎಂದು ಹೇಳಿದರು,(ಏಜೆನ್ಸೀಸ್).
ಪಂದ್ಯದ ವಿವರ
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಿತು. ತಂಡದ ಪರ ರಜತ್ ಪಟಿದಾರ್ (63 ರನ್, 40 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್) ಅರ್ಧಶತಕ ಗಳಿಸಿದರು. ಇನ್ನು 32 ರನ್ ಬಾರಿಸಿದ ವಿರಾಟ್ ಕೊಹ್ಲಿ, 16 ಎಸೆತಗಳಲ್ಲಿ 7 ಬೌಂಡರಿ ಸಿಡಿಸಿದರು. ರಾಜಸ್ಥಾನ ಪರ ಜೋಫ್ರಾ ಆರ್ಚರ್, ರವಿ ಬಿಷ್ಣೋಯ್ ಮತ್ತು ಬ್ರಿಜೇಶ್ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ಸಂದೀಪ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಈ ಗುರಿಯನ್ನು ಬೆನ್ನತ್ತಿದ ಆರ್ಆರ್ಗೆ ವೈಭವ್ ಸೂರ್ಯವಂಶಿ (78 ರನ್, 26 ಎಸೆತ, 8 ಬೌಂಡರಿ, 7 ಸಿಕ್ಸರ್) ಮತ್ತು ಧ್ರುವ್ ಜುರೆಲ್ ( ಅಜೇಯ 81 ರನ್, 43 ಎಸೆತ, 8 ಬೌಂಡರಿ, 3 ಸಿಕ್ಸರ್) ಅದ್ಭುತ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ 18 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ಗಳ ನಷ್ಟಕ್ಕೆ 202 ರನ್ಗಳ ಟಾರ್ಗೆಟ್ ಅನ್ನು ತಲುಪಿತು. ಆರ್‌ಸಿಬಿ ಪರ, ಜೋಶ್ ಹೇಜಲ್‌ವುಡ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್‌ಗಳನ್ನು ಪಡೆದರು.