ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ವಿಶ್ವ ನಂ. 1 ಪಟ್ಟ ಕಳೆದುಕೊಂಡ ರೋಹಿತ್ ಶರ್ಮ!
ನವದೆಹಲಿ: ಭಾರತ ತಂಡದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟರ್ ರೋಹಿತ್ ಶರ್ಮ (Rohit Sharma) ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ (ICC Ranking) ವಿಶ್ವ ನಂ. 1 ಪಟ್ಟದಿಂದ 2ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ನ್ಯೂಜಿಲೆಂಡ್ನ ಡೆರಿಲ್ ಮಿಚೆಲ್ ಇದೇ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದಾರೆ.
38 ವರ್ಷದ ರೋಹಿತ್ ಶರ್ಮ ಕಳೆದ ಆಸ್ಟ್ರೆಲಿಯಾ ಪ್ರವಾಸದಲ್ಲಿ ಭರ್ಜರಿ ನಿರ್ವಹಣೆ ತೋರಿದ ಬೆನ್ನಲ್ಲೇ ಅಗ್ರಸ್ಥಾನಕ್ಕೇರಿದ್ದರು. ಇದೀಗ ಮಿಚೆಲ್ ಏಕದಿನದಲ್ಲಿ ವಿಶ್ವ ನಂ. 1 ಪಟ್ಟಕ್ಕೇರಿದ ನ್ಯೂಜಿಲೆಂಡ್ನ 2ನೇ ಬ್ಯಾಟರ್ ಎನಿಸಿದ್ದಾರೆ. 1979ರಲ್ಲಿ ಗ್ಲೆನ್ ರ್ಟನರ್ ಈ ಸಾಧನೆ ಮಾಡಿದ ಮೊದಲ ಕಿವೀಸ್ ಬ್ಯಾಟರ್ ಎನಿಸಿದ್ದರು. ನಂತರದಲ್ಲಿ ಮಾರ್ಟಿನ್ ಕ್ರೋವ್, ನಾಥನ್ ಆಸ್ಟಲ್, ಕೇನ್ ವಿಲಿಯಮ್ಸನ್, ಮಾರ್ಟಿನ್ ಗುಪ್ಟಿಲ್, ರೋಸ್ ಟೇಲರ್ರಂಥ ಕಿವೀಸ್ ಬ್ಯಾಟರ್ಗಳು ಅಗ್ರ 5ರೊಳಗೆ ಪ್ರವೇಶಿಸಿದ್ದರೂ, ಅಗ್ರಸ್ಥಾನಕ್ಕೇರಿರಲಿಲ್ಲ. (Cricket)
ಶುಭಮಾನ್ ಗಿಲ್ 4, ವಿರಾಟ್ ಕೊಹ್ಲಿ 5ನೇ ಸ್ಥಾನ ಕಾಯ್ದುಕೊಂಡಿದ್ದರೆ, ಶ್ರೇಯಸ್ ಅಯ್ಯರ್ 9ರಿಂದ 8ನೇ ಸ್ಥಾನಕ್ಕೇರಿದ್ದಾರೆ. ಅಗ್ರ 10ರೊಳಗೆ ಒಟ್ಟು ನಾಲ್ವರು ಭಾರತೀಯರು ಸ್ಥಾನ ಉಳಿಸಿಕೊಂಡಿದ್ದಾರೆ.
ಜೈಸ್ವಾಲ್ ಕುಸಿತ: ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಯಶಸ್ವಿ ಜೈಸ್ವಾಲ್ 5ರಿಂದ 7ನೇ ಸ್ಥಾನಕ್ಕೆ ಕುಸಿದಿದ್ದರೆ, ಕೋಲ್ಕತ ಟೆಸ್ಟ್ನಲ್ಲಿ ಗಾಯದಿಂದಾಗಿ ಬ್ಯಾಟಿಂಗ್ ಮಾಡದ ನಡುವೆಯೂ ಶುಭಮಾನ್ ಗಿಲ್ 13ರಿಂದ 11ನೇ ಸ್ಥಾನಕ್ಕೇರಿದ್ದಾರೆ. ರಿಷಭ್ ಪಂತ್ 8ರಿಂದ 12ನೇ ಸ್ಥಾನಕ್ಕಿಳಿದಿದ್ದಾರೆ.