ಟೀಮ್ ಇಂಡಿಯಾ ಹೆಡ್ಕೋಚ್ ಗೌತಮ್ ಗಂಭೀರ್
- ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಶತಕದಾಟ
- ಮತ್ತೊಮ್ಮೆ ಜಗತ್ತಿಗೆ ಕ್ಲಾಸ್ ಬ್ಯಾಟಿಂಗ್ ಅಂದ್ರೆ ಏನು ಅಂತ ತೋರಿಸಿದ ಹಿಟ್‌ಮ್ಯಾನ್
- ರೋಹಿತ್ ಶತಕ ಟೀಮ್ ಇಂಡಿಯಾ ಹೆಡ್ಕೋಚ್ ಗೌತಮ್ ಗಂಭೀರ್ ಕಾಲೆಳೆದ ಫ್ಯಾನ್ಸ್
ನವದೆಹಲಿ: ರಾಜಸ್ಥಾನದ ಜೈಪುರದಲ್ಲಿ ನಡೆದ 2025-26ರ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಅಬ್ಬರಿಸಿ ಬೊಬ್ಬಿರಿಯುವ ಮೂಲಕ ಮತ್ತೊಮ್ಮೆ ಜಗತ್ತಿಗೆ ಕ್ಲಾಸ್ ಬ್ಯಾಟಿಂಗ್ ಅಂದ್ರೆ ಏನು ಅಂತ ತೋರಿಸಿದ್ದಾರೆ. ಹಿಟ್‌ಮ್ಯಾನ್ ಅಬ್ಬರವನ್ನು ನೋಡಿದ ಕ್ರೀಡಾಭಿಮಾನಿಗಳು ಟೀಮ್ ಇಂಡಿಯಾ ಹೆಡ್ಕೋಚ್ ಗೌತಮ್ ಗಂಭೀರ್ ( Gautam Gambhir ) ಕಾಲೆಳೆಯುತ್ತಿದ್ದಾರೆ.
ಬುಧವಾರ (ಡಿ.24) ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಸಿಕ್ಕಿಂ ವಿರುದ್ಧ ಮುಂಬೈ ಪರ ಕಣಕ್ಕಿಳಿದ 'ಹಿಟ್‌ಮ್ಯಾನ್' ಕೇವಲ 94 ಎಸೆತಗಳಲ್ಲಿ 155 ರನ್ ಗಳಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ರೋಹಿತ್ ಆಡಿದ ಭರ್ಜರಿ ಇನ್ನಿಂಗ್ಸ್‌ನಲ್ಲಿ 18 ಬೌಂಡರಿಗಳು ಮತ್ತು 9 ಸಿಕ್ಸರ್‌ಗಳು ಸೇರಿವೆ. ಇಡೀ ಮೈದಾನ ಬೌಂಡರಿಗಳಿಂದ ಮೊಳಗಿತು. ತನ್ನ ಟ್ರೇಡ್‌ಮಾರ್ಕ್ ಸ್ಟ್ರೋಕ್‌ಗಳಿಂದ ಬೌಲರ್‌ಗಳ ಮೇಲೆ ದಾಳಿ ಮಾಡಿದ ರೋಹಿತ್, ಚೇಸಿಂಗ್‌ನಲ್ಲಿ ವಿನಾಶವನ್ನೇ ಸೃಷ್ಟಿಸಿದರು. ರೋಹಿತ್ ಅವರ ಸ್ಫೋಟಕ ಆಟದ ನೆರವಿನಿಂದ ಮುಂಬೈ ತಂಡವು 237 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿ 8 ವಿಕೆಟ್‌ಗಳಿಂದ ಗೆದ್ದಿತು.
ಈ ಪಂದ್ಯದ ಮೂಲಕ ರೋಹಿತ್ ತಮ್ಮ 37 ನೇ ಲಿಸ್ಟ್-ಎ ಶತಕವನ್ನು ದಾಖಲಿಸಿದರು. ರೋಹಿತ್ ಅವರ ಈ ಇನ್ನಿಂಗ್ಸ್ ಕೇವಲ ಅಂಕಿಅಂಶಗಳಿಗೆ ಸೀಮಿತವಾಗಿರಲಿಲ್ಲ. ಅಭಿಮಾನಿಗಳಿಗೆ ಇದು ಬ್ಯಾಟಿಂಗ್ ಸಂಗೀತ ಕಚೇರಿಯಂತೆ ಭಾಸವಾಯಿತು. ಹಿಟ್‌ಮ್ಯಾನ್ ಆಟವನ್ನು ವೀಕ್ಷಿಸಲು ಕ್ರೀಡಾಂಗಣದಲ್ಲಿ 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಜಮಾಯಿಸಿದ್ದರು.
ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ, ಬಿಸಿಸಿಐ ಆಯ್ಕೆದಾರ ಆರ್‌ಪಿ ಸಿಂಗ್ ಅವರನ್ನು ನೋಡಿದ ಅಭಿಮಾನಿಗಳು, ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. "ಗಂಭೀರ್ ಕಿಧರ್ ಹೈ, ದೇಖ್ ರಹಾ ಹೈ ನಾ?" (ಗಂಭೀರ್ ಎಲ್ಲಿದ್ದಾರೆ? ನೀವಿದನ್ನು ನೋಡುತ್ತಿದ್ದೀರಾ?) ಎಂದು ಅಭಿಮಾನಿಗಳು ಜೋರಾಗಿ ಕೂಗಿದರು. ಈ ಕೂಗು ಪಂದ್ಯವನ್ನು ಹೆಚ್ಚು ರೋಮಾಂಚನಗೊಳಿಸಿದವು. ಅಭಿಮಾನಿಗಳು ಈ ರೀತಿ ಕೂಗಲು ಒಂದು ಕಾರಣವೂ ಇದೆ. ಅದು ಏನು ಅಂತ ತಿಳಿದುಕೊಳ್ಳಲು ಮುಂದೆ ಓದಿ.
ರೋಹಿತ್ ಮತ್ತು ಕೊಹ್ಲಿಯನ್ನು ಗಂಭೀರ್ ಅವರು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದು ಹೊಸ ಸಂಗತಿಯೇನಲ್ಲ. ಟಿ20 ಮತ್ತು ಟೆಸ್ಟ್ ಪಂದ್ಯಗಳಿಗೆ ರೋಕೊ ಜೋಡಿ ದಿಢೀರ್ ವಿದಾಯ ಹೇಳಲು ಗಂಭೀರ್ ಅವರೇ ಕಾರಣ ಎಂಬ ಮಾತಿದೆ. ಗಂಭೀರ್ ಮತ್ತು ರೋಕೊ ನಡುವೆ ಯಾವುದೇ ಹೊಂದಾಣಿಕೆ ಇಲ್ಲದ ಕಾರಣ ಈ ಹಿಂದೆ ಬಿಸಿಸಿಐ ಸಮನ್ವಯ ಸಭೆ ನಡೆಸಿರುವುದಾಗಿ ವರದಿಯಾಯಿತು.
ರೋಹಿತ್ ಮತ್ತು ಕೊಹ್ಲಿಯನ್ನು ಹೇಗಾದರೂ ಮಾಡಿ ತಂಡದಿಂದ ಹೊರಗಿಡುವ ಪ್ರಯತ್ನ ಗಂಭೀರ್ ಅವರಿಂದ ನಡೆಯುತ್ತಿದೆ ಎನ್ನಲಾಗುತ್ತಿದೆ. ಇಬ್ಬರು ದಿಗ್ಗಜ ಆಟಗಾರರು ಫಾರ್ಮ್ ಕಳೆದುಕೊಳ್ಳುವುದನ್ನೇ ಗೌತಿ ಎದುರು ನೋಡುತ್ತಿದ್ದಾರೆ ಅನ್ನೋ ಮಾತಿದೆ. ಅದೇ ನೆಪ ಮಾಡಿ ಅವರಿಬ್ಬರನ್ನು ತಂಡದಿಂದ ಹೊರಗಿಡಬಹುದು ಅನ್ನೋದು ಗೌತಿ ಲೆಕ್ಕಾಚಾರ.
ಆದರೆ, ರೋಕೊ ಜೋಡಿ ಮೈದಾನದಲ್ಲಿ ಅಬ್ಬರಿಸುತ್ತಿದೆ. ಇತ್ತೀಚೆಗೆ ಪ್ರತೀ ಪಂದ್ಯದಲ್ಲೂ ರೋಹಿತ್ ಹಾಗೂ ಕೊಹ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ರೋಕೊ ಜೋಡಿ ಬ್ಯಾಟ್ನಿಂದಲೇ ಖಡಕ್ ಉತ್ತರ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಇದೀಗ ಗಂಭೀರ್ ಕಾಲೆಳೆಯುತ್ತಿದ್ದಾರೆ, (ಏಜೆನ್ಸೀಸ್).