ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮ
- ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮ ಹೆಸರಿಗೆ ಮತ್ತೊಂದು ಐತಿಹಾಸಿಕ ದಾಖಲೆ
- ಏಕದಿನ ಪಂದ್ಯವಾಡಿದ ಅತ್ಯಂತ ಹಿರಿಯ ಆಟಗಾರ ಪಟ್ಟ
- ಹಿರಿಯ ಆಟಗಾರನ ದಾಖಲೆ ಮುರಿದ ರೋಹಿತ್ ಶರ್ಮ
ಹಿಮಾಚಲ ಪ್ರದೇಶ: ಕ್ರಿಕೆಟ್ ದಿಗ್ಗಜ, ಮಾಜಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದ್ದು, ಭಾರತ ಪರ ಏಕದಿನ ಕ್ರಿಕೆಟ್ ಆಡುತ್ತಿರುವ ಅತ್ಯಂತ ಹಿರಿಯ ಆಟಗಾರ ಎಂಬ ರೆಕಾರ್ಡ್ಗೆ ಸಾಕ್ಷಿಯಾಗಿದ್ದಾರೆ.
ಮಳೆಯಿಂದ 25 ಓವರ್ಗೆ ಇಳಿದ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದ ರೋಹಿತ್ ಶರ್ಮ, ರನ್ಔಟ್ ಆಗಿ ಪೆವಿಲಿಯನ್ ಸೇರಿದರು. ಇದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದೇ ಆದರೂ ರೋಹಿತ್ ಹೆಸರಿಗೆ ಸೇರಿದ ಮತ್ತೊಂದು ಐತಿಹಾಸಿಕ ದಾಖಲೆ ಖುಷಿ ತಂದಿದೆ. ಈ ಹಿಂದೆ ಇದೇ ದಾಖಲೆಯನ್ನು ಹೊಂದಿದ್ದ ಹಿರಿಯ ಆಟಗಾರನ ರೆಕಾರ್ಡ್ ಈಗ ರೋಹಿತ್ ಹಿಂದಿಕ್ಕಿದ್ದಾರೆ.
39 ವರ್ಷ 75 ದಿನಗಳಲ್ಲಿ ರೋಹಿತ್, ಭಾರತದ ಮಾಜಿ ಆಲ್‌ರೌಂಡರ್ ಮೊಹಿಂದರ್ ಅಮರ್‌ನಾಥ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿದಿದ್ದಾರೆ. 1989ರಲ್ಲಿ ಟೀಮ್ ಇಂಡಿಯಾ ಪರ ತಮ್ಮ ಕೊನೆಯ ಏಕದಿನ ಪಂದ್ಯ ಆಡಿದಾಗ ಮೊಹಿಂದರ್ ಅವರ ವಯಸ್ಸು 39 ವರ್ಷ 36 ದಿನಗಳು. ಆದರೀಗ, ಹಿಟ್ಮ್ಯಾನ್ ಹಿರಿಯ ಕ್ರಿಕೆಟಿಗನ ದಾಖಲೆಯನ್ನು ಸರಿಗಟ್ಟಿದ್ದು, ಹೊಸ ಮೈಲಿಗಲ್ಲು ತಲುಪಿದ್ದಾರೆ.
ಆದಾಗ್ಯೂ, ರೋಹಿತ್ ಏಕದಿನ ಪಂದ್ಯವಾಡಿದ ಮೊದಲ ಅತ್ಯಂತ ಹಿರಿಯ ಭಾರತೀಯ ಆಟಗಾರ ಅಲ್ಲ! ಅಸಲಿಗೆ, ಈ ದಾಖಲೆ ಭಾರತದ ಮಾಜಿ ಮಹಿಳಾ ವೇಗಿ ಜೂಲನ್ ಗೋಸ್ವಾಮಿ ಅವರ ಹೆಸರಿನಲ್ಲಿದೆ ಎಂಬುದು ಇಲ್ಲಿ ಗಮನಾರ್ಹ. 2022ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಜೂಲನ್ ಆಡಿದಾಗ ಅವರಿಗೆ 39 ವರ್ಷ ಮತ್ತು 303 ದಿನಗಳು. ವಿಶೇಷ ಎಂದರೆ, ಇಲ್ಲಿಯವರೆಗೆ ಯಾವುದೇ ಭಾರತೀಯ ಕ್ರಿಕೆಟಿಗ 40 ವರ್ಷ ವಯಸ್ಸು ಮೀರಿ ಏಕದಿನ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿಲ್ಲ. ಅದೇ 2027ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ರೋಹಿತ್ ಆಡಿದರೆ, ಈ ದಾಖಲೆ ಅವರ ಮುಡಿಗೇರುವುದು ಖಚಿತ,(ಏಜೆನ್ಸೀಸ್).