ಏಕದಿನ ಸರಣಿಗೆ ಟೀಮ್ ಇಂಡಿಯಾ ಭರ್ಜರಿ ತಯಾರಿ: ನೆಟ್ಸ್‌ನಲ್ಲಿ ಬೆವರಿಳಿಸಿದ ರೋಹಿತ್-ಕೊಹ್ಲಿ ಜೋಡಿ, ನಾಳೆ ಮೊದಲ ಪಂದ್ಯ! Rohit Sharma 
ಕ್ರಿಕೆಟ್

ಏಕದಿನ ಸರಣಿಗೆ ಟೀಮ್ ಇಂಡಿಯಾ ಭರ್ಜರಿ ತಯಾರಿ: ನೆಟ್ಸ್‌ನಲ್ಲಿ ಬೆವರಿಳಿಸಿದ ರೋಹಿತ್-ಕೊಹ್ಲಿ ಜೋಡಿ, ನಾಳೆ ಮೊದಲ ಪಂದ್ಯ! Rohit Sharma

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಭಾರತ ತಂಡದ ಕಠಿಣ ತಾಲೀಮು
  • ಏಕದಿನ ಸರಣಿಯ ಆರಂಭಿಕ ಪಂದ್ಯಕ್ಕಾಗಿ ಓಪನ್ ನೆಟ್ಸ್‌ನಲ್ಲಿ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಅಭ್ಯಾಸ
  • ಎಡ್ಜ್‌ಬಾಸ್ಟನ್‌ನಲ್ಲಿ ನೆಟ್ಸ್ ಭೇದಿಸಿ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ ನೋಡಲು ಮುಗಿಬಿದ್ದ ಅಭಿಮಾನಿಗಳು
  • ವೇಗಿಗಳ ಮಾರಕ ಎಸೆತಗಳನ್ನು ಎದುರಿಸಿ ಏಕದಿನ ಸರಣಿಗೆ ಬ್ಯಾಟಿಂಗ್ ಲಯ ಕಂಡುಕೊಂಡ ವಿರಾಟ್ ಕೊಹ್ಲಿ
Rohit Sharma : ಜುಲೈ 14 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಆರಂಭಿಕ ಪಂದ್ಯಕ್ಕಾಗಿ ಭಾರತ ತಂಡದ ಪ್ರಮುಖ ಆಟಗಾರರು ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಸತತ ಎರಡನೇ ದಿನವೂ ಕಠಿಣ ಅಭ್ಯಾಸ ನಡೆಸಿದರು. ಭಾನುವಾರದ ಸುಡು ಬಿಸಿಲಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಡೆದ ತರಬೇತಿ ಅವಧಿಯಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮೈದಾನದ ಹೊರಗೆ ಅಭಿಮಾನಿಗಳಿಂದ 'ಮುಂಬೈ ಚಾ ರಾಜಾ' ಎಂಬ ಘೋಷಣೆಗಳು ಮೊಳಗುವ ಮುನ್ನವೇ ರೋಹಿತ್ ನೆಟ್ಸ್‌ನಲ್ಲಿ ಸುದೀರ್ಘ ಅವಧಿಯ ಬ್ಯಾಟಿಂಗ್ ತಾಲೀಮು ನಡೆಸಿದರು.
ಮೂರು ಗಂಟೆಗಳ ಕಾಲ ನಡೆದ ಒಟ್ಟಾರೆ ತರಬೇತಿ ಅವಧಿಯಲ್ಲಿ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ತರಬೇತುದಾರ ಟಿ. ದಿಲೀಪ್ ಅವರ ಉಸ್ತುವಾರಿಯಲ್ಲಿ ಫೀಲ್ಡಿಂಗ್ ಡ್ರಿಲ್ಸ್ ನಡೆಸಿದರು. ಮುಂಬರುವ ಸುದೀರ್ಘ ಪಂದ್ಯಗಳಿಗಾಗಿ ತಮ್ಮ ಫಿಟ್‌ನೆಸ್ ಹಾಗೂ ಚುರುಕುತನವನ್ನು ಕಾಯ್ದುಕೊಳ್ಳಲು ಅವರು ಸಾಕಷ್ಟು ಸಮಯ ವ್ಯಯಿಸಿದರು. ಇದಾದ ಬಳಿಕ ಏಕದಿನ ತಂಡದ ನಾಯಕ ಶುಭಮಾನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ, ರೋಹಿತ್ ಮೈದಾನದ ಬದಿಗೆ ಬಂದು ಕುಲದೀಪ್ ಯಾದವ್ ಸೇರಿದಂತೆ ಇತರ ಆಟಗಾರರೊಂದಿಗೆ ಸುದೀರ್ಘ ಚರ್ಚೆಯಲ್ಲಿ ತೊಡಗಿದರು.
ತಮ್ಮ ಬ್ಯಾಟಿಂಗ್ ಸರದಿ ಬಂದಾಗ ಆರಂಭದಲ್ಲಿ ಕೆಲವು ಎಸೆತಗಳನ್ನು ಎದುರಿಸಲು ರೋಹಿತ್ ಸ್ವಲ್ಪ ಕಷ್ಟಪಟ್ಟಂತೆ ಕಂಡರೂ, ತಕ್ಷಣವೇ ಎಂಡ್‌ಗಳನ್ನು ಬದಲಾಯಿಸುವ ಮೂಲಕ ಲಯಕ್ಕೆ ಮರಳಿದರು. ನಂತರ ಮತ್ತಷ್ಟು ಬದಲಾವಣೆಯನ್ನು ಬಯಸಿದ ರೋಹಿತ್​, ಸ್ಪಿನ್ ಬೌಲಿಂಗ್ ತರಬೇತುದಾರ ಸಾಯಿರಾಜ್ ಬಹುತುಲೆ ಹಾಗೂ ಥ್ರೋಡೌನ್ ತಜ್ಞರಾದ ನುವಾನ್ ಸೆನಾವಿರತ್ನೆ, ದಯಾನಂದ್ ಗರಾನಿ ಮತ್ತು ರಘು ಅವರ ಸಹಾಯದೊಂದಿಗೆ ಓಪನ್ ನೆಟ್ಸ್‌ನಲ್ಲಿ ಪಂದ್ಯದ ಮಾದರಿಯಲ್ಲೇ ಸಿಮ್ಯುಲೇಶನ್ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಆಫ್ ಸೈಡ್‌ನಲ್ಲಿ ಫೀಲ್ಡರ್‌ಗಳನ್ನು ನಿಲ್ಲಿಸಿ ಆಡಿದ ರೋಹಿತ್, ಆಕರ್ಷಕ ಬೌಂಡರಿಗಳನ್ನು ಬಾರಿಸುವ ಮೂಲಕ ತಮ್ಮ ಬ್ಯಾಟಿಂಗ್ ಪ್ರದರ್ಶನದಿಂದ ತೃಪ್ತರಾಗಿ ಹೊರನಡೆದರು.
ಮತ್ತೊಂದೆಡೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ನೆಟ್ಸ್‌ನಲ್ಲಿ ಜಸ್​ಪ್ರೀತ್​ ಬುಮ್ರಾ, ಗುರ್ನೂರ್ ಬ್ರಾರ್ ಮತ್ತು ಸ್ಥಳೀಯ ವೇಗಿಗಳ ಮಾರಕ ಎಸೆತಗಳನ್ನು ಎದುರಿಸಿದರು. ಶನಿವಾರದ ಅಭ್ಯಾಸದಲ್ಲಿ ಸ್ಪಿನ್ ಬೌಲಿಂಗ್‌ಗೆ ಹೆಚ್ಚಿನ ಆದ್ಯತೆ ನೀಡಿದ್ದ ಕೊಹ್ಲಿ, ಭಾನುವಾರ ವೇಗಿಗಳ ಎಸೆತಗಳನ್ನು ಎದುರಿಸುವ ಮೂಲಕ ಕಣಕ್ಕಿಳಿದರು. ಆರಂಭದಲ್ಲಿ ವೇಗದ ಬೌಲಿಂಗ್ ವಿರುದ್ಧ ಕೊಹ್ಲಿ ಕೊಂಚ ಪರದಾಡಿದಂತೆ ಕಂಡರೂ, ನಂತರ ಸ್ಪಿನ್ನರ್‌ಗಳ ವಿರುದ್ಧ ಅತ್ಯಂತ ಸಂಯಮದ ಆಟ ಪ್ರದರ್ಶಿಸಿ ತಮಗೆ ಬೇಕಾದ ಆತ್ಮವಿಶ್ವಾಸವನ್ನು ಮರಳಿ ಪಡೆದರು.
ವಿರಾಟ್ ಕೊಹ್ಲಿ ಕೇವಲ ತಮಗಷ್ಟೇ ಬ್ಯಾಟಿಂಗ್ ಅಭ್ಯಾಸ ಮಾಡದೆ, ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನೂ ಮುಂದುವರಿಸಿದರು. ಶನಿವಾರ ಶುಭಮಾನ್ ಗಿಲ್ ಅವರಿಗೆ ಬ್ಯಾಟಿಂಗ್ ಟಿಪ್ಸ್ ನೀಡಿದ್ದ ಕೊಹ್ಲಿ, ಭಾನುವಾರ ತರಬೇತಿ ಮುಗಿದ ನಂತರ ಮೈದಾನದ ಬದಿಯಲ್ಲಿ ನಿಂತು 26 ವರ್ಷದ ವೇಗಿ ಗುರ್ನೂರ್ ಬ್ರಾರ್ ಅವರಿಗೆ ಬೌಲಿಂಗ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ಸಲಹೆಗಳನ್ನು ಹಂಚಿಕೊಂಡರು. ಹಿರಿಯ ಆಟಗಾರನ ಈ ನಡೆ ಯುವ ಆಟಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.
ಸೌತಾಂಪ್ಟನ್‌ನಲ್ಲಿ 5ನೇ ಟಿ20 ಪಂದ್ಯವನ್ನು ಮುಗಿಸಿ ಬಂದಿರುವ ಟಿ20 ತಂಡದ ಸದಸ್ಯರು ಸೇರಿದಂತೆ ಇಡೀ ಭಾರತೀಯ ತಂಡವು ಸೋಮವಾರ (ಜುಲೈ 13) ಸರಣಿಯ ಕೊನೆಯ ಅಧಿಕೃತ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದೆ. ಜುಲೈ 14 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ನಂತರದ ಎರಡು ಪಂದ್ಯಗಳು ಜುಲೈ 16 ರಂದು ಕಾರ್ಡಿಫ್ ಮತ್ತು ಜುಲೈ 19 ರಂದು ಲಂಡನ್‌ನಲ್ಲಿ ಜರುಗಲಿವೆ, (ಏಜೆನ್ಸೀಸ್​).