ಧರ್ಮಶಾಲಾದಲ್ಲಿ ಇಂದು ಭಾರತ-ಅಫ್ಘಾನಿಸ್ತಾನ ಮೊದಲ ಏಕದಿನ ಕಾದಾಟ
ಧರ್ಮಶಾಲಾ: ಐಪಿಎಲ್ ಬೆನ್ನಲ್ಲೇ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಮೂರೇ ದಿನಗಳಲ್ಲಿ ಗೆಲುವು ದಾಖಲಿಸಿ ಬೀಗಿರುವ ಭಾರತ ತಂಡ (Team India), ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿ (ODI Cricket) ಆಡಲು ಸಜ್ಜಾಗಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಶನಿವಾರ ಧರ್ಮಶಾಲಾದ ಎಚ್ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿದ್ದು, ಶುಭಮಾನ್ ಗಿಲ್ ಪಡೆ ಶುಭಾರಂಭ ಕಾಣುವ ನಿರೀಕ್ಷೆ ಇದೆ. ನಾಲ್ವರು ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ಗೈರಿನ ನಡುವೆ ಭಾರತ ಮುಂದಿನ ವರ್ಷದ ಏಕದಿನ ವಿಶ್ವಕಪ್ಗೆ ಸಿದ್ಧತೆಯನ್ನು ಆರಂಭಿಸಲಿದೆ.
ಸತತ 2 ಟಿ20 ವಿಶ್ವಕಪ್ ಗೆದ್ದಿರುವ ನಡುವೆ ಕಳೆದ 2 ವರ್ಷಗಳಲ್ಲಿ ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡದ ನಿರ್ವಹಣೆ ಬಲಿಷ್ಠವಾಗಿಲ್ಲ. ಕೊನೇ 5 ಏಕದಿನ ಪಂದ್ಯಗಳಲ್ಲಿ ಭಾರತ 3ರಲ್ಲಿ ಸೋತಿದೆ. ಇದರಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಕಂಡ ಸರಣಿ ಸೋಲು ಕೂಡ ಸೇರಿದೆ. ಹೀಗಾಗಿ ವಿಶ್ವಕಪ್ಗೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಕೋಚ್ ಗೌತಮ್ ಗಂಭೀರ್ ಈ ಸರಣಿಯಿಂದಲೇ ಯೋಜನೆ ರೂಪಿಸುವ ನಿರೀಕ್ಷೆ ಇದೆ. ಭಾರತ ವಿಶ್ವಕಪ್ ತನಕ 25 ಏಕದಿನ ಪಂದ್ಯಗಳನ್ನು ಆಡಲಿದ್ದು, ಹಲವು ಕಾಂಬಿನೇಷನ್ ಪರೀಸಬಹುದು ಮತ್ತು ಕೆಲ ಹೊಸ ಆಟಗಾರರು ಅವಕಾಶ ಪಡೆಯಬಹುದು.
2023ರ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ ಸನಿಹ ಬಂದಿದ್ದ ಅಫ್ಘಾನಿಸ್ತಾನ ಆಡಿದ ಕೊನೇ 4 ಏಕದಿನ ಪಂದ್ಯದಲ್ಲೂ ಗೆದ್ದ ದಾಖಲೆ ಹೊಂದಿದ್ದು, ಲುವಾಗಿ ಪರಿಗಣಿಸಲಾಗದು. ಟೆಸ್ಟ್ನಂತೆ ಏಕದಿನದಲ್ಲಿ ಅಫ್ಘಾನಿಸ್ತಾನ ಸುಲಭ ತುತ್ತಾಗುವ ನಿರೀಕ್ಷೆ ಇಲ್ಲ.
ಭಾರತ: ವಿರಾಟ್ ಕೊಹ್ಲಿ ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿರುವುದರಿಂದ, ಇಶಾನ್ ಕಿಶನ್ 3ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆಯುವ ನಿರೀಕ್ಷೆ ಇದೆ. ನಾಯಕ ಶುಭಮಾನ್ ಗಿಲ್ ಜತೆ ಮಾಜಿ ನಾಯಕ ರೋಹಿತ್ ಶರ್ಮ ಇನಿಂಗ್ಸ್ ಆರಂಭಿಸಲಿದ್ದಾರೆ. ವೇಗದ ಬೌಲಿಂಗ್ ಆಲ್ರೌಂಡರ್ ಸ್ಥಾನವನ್ನು ನಿತೀಶ್ ಕುಮಾರ್ ರೆಡ್ಡಿ ಮತ್ತು ಸ್ಪಿನ್ ಬೌಲಿಂಗ್ ಆಲ್ರೌಂಡರ್ ಸ್ಥಾನವನ್ನು ವಾಷಿಂಗ್ಟನ್ ಸುಂದರ್ ತುಂಬಲಿದ್ದಾರೆ. ಸಿರಾಜ್ ಬದಲಿಗೆ ತಂಡ ಸೇರಿರುವ ಕನ್ನಡಿಗ ಪ್ರಸಿದ್ಧಕೃಷ್ಣ, ಅರ್ಷದೀಪ್ ಜತೆ ಹೊಸ ಚೆಂಡು ಹಂಚಿಕೊಳ್ಳಲಿದ್ದಾರೆ. 3ನೇ ವೇಗದ ಬೌಲರ್ ಸ್ಥಾನಕ್ಕೆ ಪ್ರಿನ್ಸ್ ಯಾದವ್-ಗುರುನೂರ್ ಬ್ರಾರ್ ನಡುವೆ ಸ್ಪರ್ಧೆ ಇದ್ದು, ಯಾರೇ ಆಡಿದರೂ ಪದಾರ್ಪಣೆಯ ಪಂದ್ಯವಾಗಲಿದೆ.
ಅಫ್ಘಾನಿಸ್ತಾನ: ಕಳೆದ ಏಕೈಕ ಟೆಸ್ಟ್ನಲ್ಲಿ ಮಿಂಚಿದ್ದ ವೇಗಿ ಮೊಹಮದ್ ಸಲೀಮ್ ಇದೀಗ ಏಕದಿನ ತಂಡದಲ್ಲೂ ಗಮನಸೆಳೆಯುವ ಹಂಬಲದಲ್ಲಿದ್ದಾರೆ. ಅನುಭವಿ ಆಲ್ರೌಂಡರ್ ಮೊಹಮದ್ ನಬಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ, ಮೊದಲ ಏಕದಿನದಲ್ಲಿ ಆಡುವುದು ಅನುಮಾನವೆನಿಸಿದೆ. ಏಕೈಕ ಟೆಸ್ಟ್ನಿಂದ ವಿಶ್ರಾಂತಿ ಪಡೆದಿದ್ದ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಏಕದಿನ ಸರಣಿಯಲ್ಲಿ ಬಲ ತುಂಬಲಿದ್ದಾರೆ.
ಭಾರತ ಈ ಸರಣಿಯಲ್ಲಿ ಅನುಭವಿ ಬ್ಯಾಟರ್ ರೋಹಿತ್ ಶರ್ಮ ಮತ್ತು ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮೇಲೆ ಹೆಚ್ಚಿನ ಗಮನಹರಿಸಲಿದೆ. 39 ವರ್ಷದ ರೋಹಿತ್ ಇತ್ತೀಚೆಗೆ ಸತತವಾಗಿ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದು, ಮುಂದಿನ ವರ್ಷದ ವಿಶ್ವಕಪ್ವರೆಗೆ ತಂಡದಲ್ಲಿ ಮುಂದುವರಿಯುವರೇ ಎಂದು ನಿರ್ಧರಿಸಲು ಈ ಸರಣಿ ಸಹಾಯಕವಾಗಬಹುದು. ಇನ್ನು ಹಾರ್ದಿಕ್ ಗೈರಿನಲ್ಲಿ ಸ್ಥಾನ ಪಡೆದಿರುವ ನಿತೀಶ್, ತಂಡಕ್ಕೆ ಮುಂದಿನ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಬಲ ತುಂಬಬಲ್ಲರೇ ಎಂಬ ಸತ್ವಪರೀಕ್ಷೆಯೂ ನಡೆಯಲಿದೆ.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
1: ಭಾರತ-ಅಫ್ಘಾನಿಸ್ತಾನ ನಡುವಿನ ಮೊಟ್ಟಮೊದಲ ದ್ವಿಪಯ ಏಕದಿನ ಸರಣಿ ಇದಾಗಿದೆ. ಉಭಯ ತಂಡಗಳು ಈ ಹಿಂದೆ ವಿಶ್ವಕಪ್, ಏಷ್ಯಾಕಪ್ಗಳಲ್ಲಿ ಮಾತ್ರ ಏಕದಿನ ಪಂದ್ಯದಲ್ಲಿ ಮುಖಾಮುಖಿ ಆಗಿವೆ.
*3: ಶ್ರೇಯಸ್ ಅಯ್ಯರ್ 23 ರನ್ ಮತ್ತು ಶುಭಮಾನ್ ಗಿಲ್ 47 ರನ್ ಗಳಿಸಿದರೆ ಏಕದಿನ ಕ್ರಿಕೆಟ್ನಲ್ಲಿ 3 ಸಾವಿರ ರನ್ ಪೂರೈಸಲಿದ್ದಾರೆ.