ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ ಭಾನು'ವಾರ್'!
- ಮುಂದುವರಿಯಲಿದೆ ನೋ ಹ್ಯಾಂಡ್ಶೇಕ್ ಪಾಲಿಸಿ
- ಭಾನುವಾರ ರಾತ್ರಿ 8 ಗಂಟೆಯಿಂದ ಮುಖಾಮುಖಿ
- ಪಾಕ್ ಬೌಲರ್ಗಳಿಗೆ ವೈಭವ್ ಸೂರ್ಯವಂಶಿ ಸವಾಲು
ದೋಹಾ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ (Rising Stars Asia Cup T20 cricket) ಭಾನುವಾರ ಮುಖಾಮುಖಿ ಆಗಲಿವೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ಫೋಟಕ ಶತಕ ಮತ್ತು ಸಿಕ್ಸರ್ ಸುರಿಮಳೆ ಹರಿಸಿ ಬೀಗಿರುವ 14 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ ಪಾಕಿಸ್ತಾನ ಶಹೀನ್ಸ್ ತಂಡದ ಬೌಲರ್ಗಳನ್ನು ಹೇಗೆ ಎದುರಿಸುವರು ಎಂಬುದು ಪಂದ್ಯದ ಪ್ರಮುಖ ಕುತೂಹಲವಾಗಿದೆ.
ಜಿತೇಶ್ ಶರ್ಮ ಸಾರಥ್ಯದ ಭಾರತ ಎ ತಂಡ ಈ ಬಾರಿಯೂ ಪಾಕ್ ಎದುರು "ನೋ ಹ್ಯಾಂಡ್ಶೇಕ್' ಪಾಲಿಸಿಯನ್ನು ಮುಂದುವರಿಸಲಿದೆ. ಕಳೆದ ಏಷ್ಯಾಕಪ್ ಮತ್ತು ಮಹಿಳಾ ವಿಶ್ವಕಪ್ನಲ್ಲೂ ಭಾರತ ಟಾಸ್ ಮತ್ತು ಪಂದ್ಯದ ನಂತರ ಹಸ್ತಲಾಘವ ನೀಡಿರಲಿಲ್ಲ.
ಭಾರತ ತಂಡ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ 148 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿದ್ದರೆ, ಪಾಕ್ ತಂಡ ಓಮನ್ ವಿರುದ್ಧ ಜಯ ದಾಖಲಿಸಿ ಶುಭಾರಂಭ ಕಂಡಿತ್ತು. ಭಾರತ ಎ ತಂಡ ಐಪಿಎಲ್ ತಾರೆಯರನ್ನು ಒಳಗೊಂಡಿದ್ದರೆ, ಪಾಕ್ ಶಹೀನ್ಸ್ ತಂಡ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಮಿಂಚಿದವರಿಂದ ತುಂಬಿದೆ.
ಪಾಕ್ ಬೌಲಿಂಗ್ ವಿಭಾಗ ಬಲಿಷ್ಠವೆನಿಸಿದ್ದು, ರಾಷ್ಟ್ರೀಯ ತಂಡದ ವೇಗಿ ನಸೀಮ್ ಷಾ ಅವರ ಕಿರಿಯ ಸಹೋದರ ಉಬೇದ್ ಷಾರನ್ನು ಒಳಗೊಂಡಿದೆ. ಪ್ರಿಯಾಂಶ್ ಆರ್ಯ, ನೇಹಲ್ ವಧೇರ, ನಮನ್ ಧೀರ್ರಂಥ ಐಪಿಎಲ್ ತಾರೆಯರಿರುವ ಭಾರತ ಎ ತಂಡಕ್ಕೆ ಕನ್ನಡಿಗ ಸುನೀಲ್ ಜೋಶಿ ಕೋಚ್ ಆಗಿದ್ದಾರೆ.
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ಟೆನ್ 3,4.