ಡ್ರಿಂಕ್ಸ್​ ಬ್ರೇಕ್​ ವೇಳೆ ವಾಪಸ್​ ಬ್ಯಾಟ್​ ಕೊಡದೇ ಹೊರಟ ರಿಂಕು ಸಿಂಗ್​! ಸಂಜು ಏನ್​ ಮಾಡಿದ್ರು ನೋಡಿ... Sanju Samson  
ಕ್ರಿಕೆಟ್

ಡ್ರಿಂಕ್ಸ್​ ಬ್ರೇಕ್​ ವೇಳೆ ವಾಪಸ್​ ಬ್ಯಾಟ್​ ಕೊಡದೇ ಹೊರಟ ರಿಂಕು ಸಿಂಗ್​! ಸಂಜು ಏನ್​ ಮಾಡಿದ್ರು ನೋಡಿ... Sanju Samson

ಪ್ರಮುಖ ಮುಖ್ಯಾಂಶಗಳು

  • ವೆಸ್ಟ್​ ಇಂಡೀಸ್​ ವಿರುದ್ಧ ಭರ್ಜರಿ ಜಯ ಸಾಧಿಸಿ ಟಿ20 ವಿಶ್ವಕಪ್​ ಟೂರ್ನಿಯ ಸಮಿಫೈನಲ್​ಗೆ ಭಾರತ ಎಂಟ್ರಿ​
  • ಕೊನೆಯವರೆಗೂ ಕ್ರೀಸ್​ನಲ್ಲಿ ಗಟ್ಟಿಯಾಗಿ ನಿಂತು ತಂಡಕ್ಕೆ ಗೆಲುವು ತಂದುಕಟ್ಟ ಸಂಜು ಸ್ಯಾಮ್ಸನ್​
  • ಟೀಮ್​ ಇಂಡಿಯಾದ ಫಿನಿಶರ್​ ರಿಂಕು ಸಿಂಗ್​ ಮತ್ತು ಸಂಜು ನಡುವೆ ಒಂದು ಹಾಸ್ಯಮಯ ಸಂಗತಿ ವೈರಲ್​
Sanju Samson : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿ ಅಂತಿಮ ಹಂತಕ್ಕೆ ಬಂದಿದೆ. ನಾಳೆಯಿಂದ (ಮಾರ್ಚ್​ 04) ಸೆಮಿಫೈನಲ್‌ ಪಂದ್ಯಗಳು ಆರಂಭವಾಗಲಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ, ಸೆಮೀಸ್​ಗೆ ಲಗ್ಗೆ ಇಟ್ಟಿದೆ. ಮಾರ್ಚ್​ 1ರಂದು ನಡೆದ ಸೂಪರ್​ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ, ಸೂರ್ಯಕುಮಾರ್​ ಯಾದವ್​ ಪಡೆ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಕೊನೆಯವರೆಗೂ ಕ್ರೀಸ್​ನಲ್ಲಿ ಗಟ್ಟಿಯಾಗಿ ನಿಂತು ತಂಡಕ್ಕೆ ಗೆಲುವು ತಂದುಕೊಟ್ಟರು. ಸಂಜು 50 ಎಸೆತಗಳಲ್ಲಿ 97 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಈ ಪಂದ್ಯದ ನಡುವೆ ಟೀಮ್​ ಇಂಡಿಯಾದ ಫಿನಿಶರ್​ ರಿಂಕು ಸಿಂಗ್​ ಮತ್ತು ಸಂಜು ನಡುವೆ ಒಂದು ಹಾಸ್ಯಮಯ ಸಂಗತಿ ನಡೆಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್​ ಆಗಿದೆ.
ರಿಂಕು ಮತ್ತು ಸ್ಪಿನ್ನರ್​ ಕುಲದೀಪ್​ ಯಾದವ್​ ಆಡುವ ಹನ್ನೊಂದರ ಬಳಗದಲ್ಲಿ ಇರಲಿಲ್ಲ. ಮಾರ್ಚ್​ 1ರಂದು ಕೋಲ್ಕತದ ಈಡನ್​ ಗಾರ್ಡನ್ಸ್​ನಲ್ಲಿ ವಿಂಡೀಸ್​ ವಿರುದ್ಧ ನಡೆದ ಪಂದ್ಯದ ಸಮಯದಲ್ಲಿ ಡ್ರಿಂಕ್ಸ್​ ಬ್ರೇಕ್​ ವೇಳೆ ಇಬ್ಬರು ಡ್ರಿಂಕ್ಸ್​ ಮತ್ತು ಟವೆಲ್​ ಹಿಡಿದು ಮೈದಾನಕ್ಕೆ ಪ್ರವೇಶಿಸಿದರು. ಒಂದು ಹಂತದಲ್ಲಿ ಮೈಮೇಲಿದ್ದ ಬೆವರು ಒಡೆಸಿಕೊಂಡು ರಿಫ್ರೆಶ್​ ಆಗಲು ಸಂಜು ಅವರು ತಮ್ಮ ಬ್ಯಾಟ್​ ಅನ್ನು ರಿಂಕು ಕೈಗೆ ನೀಡಿದರು. ಬಳಿಕ ಸಂಜು ಟವೆಲ್​ ಅನ್ನು ರಿಂಕು ಹೆಗಲ ಮೇಲೆ ಹಾಕಿ, ಅಲ್ಲಿಂದ ಮುಂದೆ ನಡೆದರು. ಆದರೆ, ಬ್ಯಾಟ್​ ಮರೆತಿರುವಂತೆ ಮರುಕ್ಷಣದಲ್ಲಿ ನೆನಪಾಯಿತು. ಅತ್ತು ರಿಂಕು ಕೂಡ ಬ್ಯಾಟ್​ ಹಿಡಿದಿರುವುದನ್ನು ಮರೆತು ಮೈದಾನ ತೊರೆಯಲು ಹೆಜ್ಜೆ ಹಾಕಿದರು. ಅಂತಿಮವಾಗಿ ಸಂಜು, ರಿಂಕು ಕೂಗಿ ಬ್ಯಾಟ್​ ಮರಳಿ ಪಡೆದುಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರ ಮುಖದಲ್ಲಿ ನಗು ಮೂಡಿಸುತ್ತಿದೆ.
ಈ ಪಂದ್ಯದಲ್ಲಿ ಸಂಜು ಅವರು ತಮ್ಮ ಜೀವನದಲ್ಲಿ ಎಂದೂ ಮರೆಯದಂತಹ ಸೊಗಸಾದ ಇನ್ನಿಂಗ್ಸ್​ ಆಡಿದರು. ಒಂದೆಡೆ ತಂಡದ ವಿಕೆಟ್​ಗಳು ಬೀಳುತ್ತಿದ್ದರೆ, ಇನ್ನೊಂದೆಡೆ ಕ್ರೀಸ್​ನಲ್ಲಿ ಗಟ್ಟಿಯಾಗಿ ನಿಂತು, ರನ್​ ಕಡಿಮೆ ಆಗಲು ಬಿಡದೆ, ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಂಜು ಅವರ ಅದ್ಭುತ ಪ್ರದರ್ಶನ ಕಾರಣದಿಂದಾಗಿ ಟೀಮ್​ ಇಂಡಿಯಾ, ಟಿ20 ವಿಶ್ವಕಪ್​ ಸೆಮಿಫೈನಲ್​ಗೆ ಲಗ್ಗೆ ಇಟ್ಟಿತು. ಹೀಗಾಗಿ, ಸಂಜು ಅವರನ್ನು ನಾಯಕ ಸೂರ್ಯಕುಮಾರ್​ ಮನಸಾರೆ ಹೊಗಳಿದ್ದಾರೆ. ಈ ಒಂದು ಇನ್ನಿಂಗ್ಸ್​ ತಮ್ಮ ವೃತ್ತಿ ಜೀವನದ ಉದ್ದಕ್ಕೂ ಹೆಚ್ಚಿನ ಕಷ್ಟಗಳನ್ನು ಸಹಿಸಿಕೊಂಡ ಕ್ರಿಕೆಟಿಗನಿಗೆ ಅರ್ಹವಾದ ಪ್ರತಿಫಲವಾಗಿದೆ ಎಂದು ಹೇಳಿದರು.
ಒಳ್ಳೆಯ ಜನರಿಗೆ ಒಳ್ಳೆಯದೆಲ್ಲ ಒಳ್ಳೆಯ ಸಮಯದಲ್ಲೇ ನಡೆಯುತ್ತದೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಅವರಂತಹ (ಸಂಜು ಸ್ಯಾಮ್ಸನ್​) ವ್ಯಕ್ತಿ ಮುಂದೆ ಬಂದು ತಂಡಕ್ಕೆ ಬೇಕಾದುದನ್ನು ನೀಡಲು ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ. ಸಂಜು ತಂಡಕ್ಕೆ ಬಂದಾಗ, ನಾವೆಲ್ಲ ಒಟ್ಟಿಗೆ ಕುಳಿತಂತಹ ಸಂದರ್ಭದಲ್ಲಿ ಅವರು ಗುಂಪಿನಲ್ಲಿ ಹೇಳಿದ ಮೊದಲ ಮಾತೇನೆಂದರೆ, ನಾವೆಲ್ಲರು ತಂಡ ಏನು ಬಯಸುತ್ತದೋ ಅದನ್ನು ಮಾಡೋಣ ಹೊರತು ನಮಗೆ ಬೇಕಾದುದನ್ನಲ್ಲ ಎಂದು ಸಂಜು ಹೇಳಿದರು ಅಂತ ಸೋಮವಾರ ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಸೂರ್ಯಕುಮಾರ್​ ಹೇಳಿದರು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ವಿಂಡೀಸ್​ ಪಡೆಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟಿಂಗ್​​ಗಿಳಿದ ವೆಸ್ಟ್​ ಇಂಡೀಸ್​ ದೈತ್ಯರು, 20 ಓವರ್​ನಲ್ಲಿ ಕೇವಲ 4 ವಿಕೆಟ್​ ನಷ್ಟಕ್ಕೆ 195 ರನ್​ ಕಲೆಹಾಕಿದರು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಸೂರ್ಯ ಪಡೆಗೆ, ಆರಂಭಿಕ ಬ್ಯಾಟರ್​ ಸಂಜು ಸ್ಯಾಮ್ಸನ್​ ಅವರ ಸ್ಫೋಟಕ ಇನ್ನಿಂಗ್ಸ್​ ಗೆಲುವಿಗೆ ಪ್ರಮುಖ ಕಾರಣವಾಯಿತು. ಚೇಸಿಂಗ್​ನಲ್ಲಿ ವಿರಾಟ್​ ಕೊಹ್ಲಿ ಬಿಟ್ಟರೆ ಸ್ಯಾಮ್ಸನ್​ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದಿದ್ದು ವಿಶೇಷ.
ಇದೇ ಸಮಯದಲ್ಲಿ ಕೇವಲ 10 ರನ್​ಗೆ ಪೆವಿಲಿಯನ್​ ಹಾದಿ ಹಿಡಿದ ಸ್ಫೋಟಕ ಎಡಗೈ ಬ್ಯಾಟರ್​ಗಳಾದ ಅಭಿಷೇಕ್ ಶರ್ಮ ಮತ್ತು ಇಶಾನ್ ಕಿಶನ್​​ ಅಭಿಮಾನಿಗಳು ಹಾಗೂ ಕ್ರಿಕೆಟ್​ ಪ್ರಿಯರನ್ನು ಮತ್ತೊಮ್ಮೆ ಭಾರೀ ನಿರಾಶೆಗೊಳಿಸಿದರು. ಉಳಿದಂತೆ ಕ್ರೀಸ್​ಗೆ ಬಂದ ಸೂರ್ಯಕುಮಾರ್ ಯಾದವ್​, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಹೆಚ್ಚು ಕಾಲ ನಿಲ್ಲಲಿಲ್ಲ. ಆದರೆ, ಏಕಾಂಗಿಯಾಗಿ ಹೋರಾಟ ನಡೆಸಿದ ಸಂಜು, ಇಡೀ ಪಂದ್ಯದ ಪೂರ ಕೂಲ್ ಆಗಿಯೇ ಚೇಸ್​ ಮಾಡಿದ್ದು ನಿಜಕ್ಕೂ ರೋಮಾಂಚಕಕಾರಿ ಆಗಿತ್ತು. ಕಡೆಯ 2 ಓವರ್​ನಲ್ಲಿ ಸ್ಯಾಮ್ಸನ್​ ಮೇಲಿದ್ದ ಒತ್ತಡವನ್ನು ಇಳಿಸಿದ್ದೇ ಶಿವಂ ದುಬೆ ಅವರ ಎರಡು ಬೌಂಡರಿಗಳು. ಕೇವಲ 50 ರನ್​ಗೆ 97 ರನ್​ ಬಾರಿಸಿದ ಸಂಜು ಸ್ಯಾಮ್ಸನ್, ಟೀಮ್ ಇಂಡಿಯಾದ ರೋಚಕ ಗೆಲುವಿನ ರೂವಾರಿ. ಈ ಅದ್ಭುತ ಇನ್ನಿಂಗ್ಸ್​ನಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್​ಗಳು ಸೇರಿವೆ. ತನ್ನ ಅಮೋಘ ಬ್ಯಾಟಿಂಗ್​ ಪ್ರದರ್ಶನದಿಂದ ಭಾರತವನ್ನು ಸೆಮಿಫೈನಲ್​ಗೆ ಕೊಂಡೊಯ್ದ ಸಂಜುಗೆ ಇಡೀ ಭಾರತೀಯ ಕ್ರಿಕೆಟ್​ ಪ್ರಿಯರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).