ರಿಂಕು ಸಿಂಗ್ ತಮ್ಮ ಪೋಷಕರ ಜೊತೆ
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯಗಳು ರೋಚಕವಾಗಿ ಸಾಗುತ್ತಿದ್ದು, ತನ್ನ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆಲುವು ಸಾಧಿಸಲು ವಿಫಲವಾಯಿತು. ಈ ಪಂದ್ಯದಲ್ಲಿ ಬ್ಯಾಟರ್ಗಳ ವಿಫಲದಿಂದ ಹೀನಾಯ ಸೋಲು ಅನುಭವಿಸಿದ ಟೀಮ್ ಇಂಡಿಯಾಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ತಂಡದಿಂದ ರಿಂಕು ಸಿಂಗ್ ದಿಢೀರ್ ಹೊರನಡೆದಿದ್ದಾರೆ.
ಜಿಂಬಾಬ್ವೆ ವಿರುದ್ಧದ ತನ್ನ ಎರಡನೇ ಸೂಪರ್-8 ಪಂದ್ಯವನ್ನು ಆಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಟೀಮ್ ಇಂಡಿಯಾಗೆ ರಿಂಕು ಸಿಂಗ್ ಅವರ ಅಲಭ್ಯತೆ ಕಾಡಲಾರಂಭಿಸಿದೆ. ಮುಂಬರುವ ಪ್ರತಿ ಪಂದ್ಯವನ್ನು ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿ, ರಿಂಕು ಸಿಂಗ್ ತಮ್ಮ ತಂದೆಗೆ ವಿಪರೀತ ಅನಾರೋಗ್ಯ ಸಮಸ್ಯೆ ಹಿನ್ನೆಲೆ ತಂಡದಿಂದ ದಿಢೀರ್ ಎಕ್ಸಿಟ್ ಆಗಿದ್ದಾರೆ.
ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿರುವ ರಿಂಕು ಸಿಂಗ್ ಅವರ ತಂದೆ ಖಾನ್ಚಂದ್ರ ಸಿಂಗ್, ನೋಯ್ಡಾದ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ತಂದೆಯ ಆರೋಗ್ಯ ತೀರ ಹದಗೆಟ್ಟಿದ್ದರಿಂದ ಬೇರೆ ದಾರಿಯಿಲ್ಲದೆ ರಿಂಕು ತಂಡವನ್ನು ತೊರೆದಿದ್ದಾರೆ. ಈ ಬಗ್ಗೆ ಬಿಸಿಸಿಐ ಕೂಡ ಮಾಹಿತಿ ಹಂಚಿಕೊಂಡಿದ್ದು, ಮುಂದಿನ ಪಂದ್ಯಕ್ಕೆ ಅವರ ಲಭ್ಯತೆ ಬಹುತೇಕ ಡೌಟ್ ಎನ್ನುವಂತಾಗಿದೆ. ಅಂತಿಮ ತಂಡದಲ್ಲಿ ರಿಂಕು ಸಿಂಗ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಆಡಿಸುವ ಸಾಧ್ಯತೆಗಳು ಹೆಚ್ಚಿದೆ,(ಏಜೆನ್ಸೀಸ್).