ಟೀಮ್​ ಇಂಡಿಯಾ ಆಟಗಾರ ರಿಂಕು ಸಿಂಗ್  
ಕ್ರಿಕೆಟ್

ಆ ಒಂದು ಭಯ ನನ್ನ ಕಾಡುತ್ತಿತ್ತು... ಸ್ಫೋಟಕ ಬ್ಯಾಟಿಂಗ್​ ಹಿಂದಿನ ಕಾರಣ ಬಿಚ್ಚಿಟ್ಟ ರಿಂಕು ಸಿಂಗ್​! Rinku Singh

ಪ್ರಮುಖ ಮುಖ್ಯಾಂಶಗಳು

  • ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರಿಂಕು ಸಿಂಗ್ ಫಿನಿಷರ್ ಆಗಿ ಅದ್ಭುತ ಪ್ರದರ್ಶನ
  • ಟೀಮ್​ ಇಂಡಿಯಾ ಬೃಹತ್ ಮೊತ್ತ ಕಲೆಹಾಕುವಲ್ಲಿ ಸ್ಫೋಟಕ ಬ್ಯಾಟಿಂಗ್​ ಮೂಲಕ ರಿಂಕು ಸಹಾಯ
  • ಕೇವಲ 20 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ ಒಟ್ಟು 44 ರನ್
Rinku Singh : ನಿನ್ನೆ (ಜ.21) ನಾಗ್ಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ, ರಿಂಕು ಸಿಂಗ್ ಫಿನಿಷರ್ ಆಗಿ ಅದ್ಭುತ ಪ್ರದರ್ಶನ ನೀಡಿದರು. ಕೊನೆಯ ಹಂತದಲ್ಲಿ ಅಬ್ಬರಿಸಿ ಬೊಬ್ಬರಿದ ರಿಂಕು, ಟೀಮ್​ ಇಂಡಿಯಾ ಬೃಹತ್ ಮೊತ್ತ ಕಲೆಹಾಕುವಲ್ಲಿ ಸಹಾಯ ಮಾಡಿದರು. ಅಲ್ಲದೆ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಈ ಪಂದ್ಯದಲ್ಲಿ ವಿಧ್ವಂಸಕ ಆಟವಾಡಿದ ರಿಂಕು, ಕೇವಲ 20 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ ಒಟ್ಟು 44 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಪಂದ್ಯದ ಬಳಿಕ ಮಾತನಾಡಿದ ರಿಂಕು ಸಿಂಗ್, ನನ್ನ ಮೇಲೆ ತುಂಬಾ ಒತ್ತಡವಿತ್ತು. ಹೀಗಾಗಿ, ಅವಕಾಶ ಸಿಕ್ಕಾಗಲೆಲ್ಲ ತನ್ನನ್ನು ತಾನು ಸಾಬೀತುಪಡಿಸಬೇಕೆಂಬ ಗುರಿಯೊಂದಿಗೆ ಆಡಿದೆ ಎಂದಿದ್ದಾರೆ.
ನಾನು ತಂಡಕ್ಕೆ ಆಗಾಗ ಬಂದು ಹೋಗುತ್ತಿರುವುದರಿಂದ ನನ್ನ ಮೇಲೆ ತುಂಬಾ ಒತ್ತಡವಿದೆ. ಅವಕಾಶ ಸಿಕ್ಕಾಗಲೆಲ್ಲಾ ನಾನು ನನ್ನನ್ನು ಸಾಬೀತುಪಡಿಸುತ್ತಿದ್ದೇನೆ. ಅವಕಾಶ ಎಲ್ಲಿ ಮಿಸ್​ ಆಗಿಬಿಡುತ್ತದೋ ಎಂಬ ಭಯವಿದೆ. ಸಿಂಗಲ್ಸ್, ಡಬಲ್ಸ್ ಮತ್ತು ಬೌಂಡರಿಗಳನ್ನು ಗಳಿಸುವುದೇ ನನ್ನ ಯೋಜನೆ. ಪಂದ್ಯವನ್ನು ಮುಗಿಸಲು ನಾನು ಅಂತಿಮ ಆಟಗಾರನಾಗಬೇಕೆಂದು ಬಯಸಿದ್ದೆ. ಈ ಪಂದ್ಯದಲ್ಲೂ ನಾನು ಅದನ್ನೇ ಮಾಡಿದೆ ಎಂದು ರಿಂಕು ಸಿಂಗ್​ ಹೇಳಿದ್ದಾರೆ.
ಇದೇ ರೀತಿಯ ಉದ್ದೇಶದೊಂದಿಗೆ ಆಟದಲ್ಲಿ ಮುಂದುವರಿಯುವಂತೆ ಮುಖ್ಯ ಕೋಚ್ ಗಂಭೀರ್ ಸೂಚನೆ ನೀಡಿದ್ದಾರೆ ಎಂದು ಇದೇ ವೇಳೆ ರಿಂಕು ಸಿಂಗ್​ ತಿಳಿಸಿದರು. ಅರ್ಷ್‌ದೀಪ್ ಜೊತೆ ಆಡುವಾಗ ಸಿಂಗಲ್ಸ್ ಪಡೆಯುವುದು ನನ್ನ ಯೋಜನೆಯಾಗಿತ್ತು. ನಾನು ಕೊನೆಯ ಓವರ್ ಆಡಲು ಬಯಸಿದ್ದೆ ಮತ್ತು ಅದನ್ನೇ ನಾನು ಅರ್ಷ್‌ದೀಪ್‌ಗೆ ಹೇಳಿದೆ. ಪ್ರತಿ ಬಾರಿ ನಾನು 5, 6, 7ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದಾಗಲೂ ನನ್ನ ಮನಸ್ಥಿತಿ ಇದೇ ರೀತಿ ಇರುತ್ತದೆ. ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ನಾವು ಚೆಂಡನ್ನು ಬಲವಾಗಿ ಹೊಡೆಯಬೇಕೆಂದು ಅರ್ಷ್‌ದೀಪ್‌ಗೆ ಹೇಳಿದೆ. ಅದೇ ರೀತಿ ನಾನು ಬೌಂಡರಿಗಳನ್ನು ಬಾರಿಸಿದೆ ಎಂದು ರಿಂಕು ಹೇಳಿದರು.
ಇದೇ ಸಂದರ್ಭದಲ್ಲಿ ಕ್ಯಾಚ್ ಮಿಸ್ ಆದ ಬಗ್ಗೆ ಮಾತನಾಡಿದ ರಿಂಕು, ಫ್ಲಡ್ ಲೈಟ್ ಗಳಿಂದಾಗಿ ಒಮ್ಮೊಮ್ಮೆ ಕ್ಯಾಚ್ ಹಿಡಿಯಲು ಆಗುವುದಿಲ್ಲ ಎಂದರು. ನನ್ನ ತಪ್ಪಿನಿಂದಾಗಿ ಕ್ಯಾಚ್ ಮಿಸ್​ ಆಯಿತು. ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಈ ಸರಣಿಯಲ್ಲಿ ಗೆಲುವು ಸಾಧಿಸುವುದು ಬಹಳ ಮುಖ್ಯ ಎಂದು ಅವರು ಹೇಳಿದರು. 2026ರ ಟಿ20 ವಿಶ್ವಕಪ್ ವರೆಗೆ ಇದೇ ರೀತಿಯ ವೇಗವನ್ನು ಕೊಂಡೊಯ್ಯುವುದು ಮತ್ತು ಕಪ್ ಗೆಲ್ಲುವುದು ನಮ್ಮ ಗುರಿ ಎಂದು ರಿಂಕು ಹೇಳಿದರು, (ಏಜೆನ್ಸೀಸ್​).