ಭಾರತ ಟಿ20 ತಂಡದಿಂದ ರಿಂಕು ಸಿಂಗ್​ ಕೈಬಿಟ್ಟಿದ್ದಕ್ಕೆ ಟೀಕೆ! 
ಕ್ರಿಕೆಟ್

ಭಾರತ ಟಿ20 ತಂಡದಿಂದ ರಿಂಕು ಸಿಂಗ್​ ಕೈಬಿಟ್ಟಿದ್ದಕ್ಕೆ ಟೀಕೆ!

ಬೆಂಗಳೂರು: ಆಸ್ಟ್ರೆಲಿಯಾ ಪ್ರವಾಸದ ವೇಳೆ ರಿಂಕು ಸಿಂಗ್​ (Rinku Singh) ತಂಡದಲ್ಲಿದ್ದರೂ, ಕೊನೇ ಟಿ20 ಪಂದ್ಯಕ್ಕೆ ಮಾತ್ರ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಆದರೆ ಕೇವಲ 4.5 ಓವರ್​ ಬಳಿಕ ಮಳೆಯಿಂದಾಗಿ ರದ್ದುಗೊಂಡ ಆ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್​ ಅವಕಾಶ ಲಭಿಸಿರಲಿಲ್ಲ. ಅದಕ್ಕೆ ಮುನ್ನ ಅವರು ಏಷ್ಯಾಕಪ್​ ಫೈನಲ್​ನಲ್ಲಿ ಆಡಿದ್ದರು ಮತ್ತು ಗೆಲುವಿನ ರನ್​ ಬಾರಿಸಿದ್ದರು.

ಪ್ರಸಕ್ತ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಉತ್ತರ ಪ್ರದೇಶ ಪರ ಉತ್ತಮ ನಿರ್ವಹಣೆಯನ್ನೇ ತೋರಿದ್ದು, ಅದಕ್ಕೆ ಮುನ್ನ ರಣಜಿಯಲ್ಲೂ ಸತತ 2 ಶತಕ (165*, 176) ಸಿಡಿಸಿ ಮಿಂಚಿದ್ದರು. ಇದರ ಹೊರತಾಗಿಯೂ ಅವರನ್ನು ಟಿ20 ತಂಡದಿಂದ ಕೈಬಿಟ್ಟಿರುವ ಆಯ್ಕೆಗಾರರ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿವೆ.

ಭಾರತ ಪರ ಇದುವರೆಗೆ ಆಡಿರುವ 35 ಟಿ20 ಪಂದ್ಯಗಳಲ್ಲಿ 25ರಲ್ಲಿ ಮಾತ್ರ ಬ್ಯಾಟಿಂಗ್​ ಅವಕಾಶ ಪಡೆದಿರುವ ರಿಂಕು, ಈ ಪೈಕಿ 12ರಲ್ಲಿ ಅಜೇಯರಾಗಿ ಉಳಿದಿದ್ದಾರೆ. ಹೀಗಾಗಿ, ಫಿನಿಷರ್​ ಆಗಿ ಗುರುತಿಸಲ್ಪಟ್ಟಿರುವ ಅವರನ್ನು 2026ರ ಟಿ20 ವಿಶ್ವಕಪ್​ಗೆ ಮುನ್ನ, ಸೂಕ್ತ ಕಾರಣಗಳಿಲ್ಲದೆ ಕೈಬಿಟ್ಟಿರುವ ಕ್ರಮವನ್ನು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.