ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್ 8 ಪಂದ್ಯದ ಸಮಯದಲ್ಲಿ ನಾಳೆ ಭಾರತದ ಟಿ20 ವಿಶ್ವಕಪ್(T20 World Cup) ತಂಡವನ್ನು ರಿಂಕು ಸಿಂಗ್ ಮತ್ತೆ ಸೇರಿಕೊಳ್ಳುವ ನಿರೀಕ್ಷೆಯಿದೆ ಎಂದು ಸುದ್ದಿಸಂಸ್ಥೆ ANI ಶುಕ್ರವಾರ ವರದಿ ಮಾಡಿದೆ.
ಯಕೃತ್ತಿನ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ಅವರ ತಂದೆ ಖಾನ್‌ಚಂದ್ ಸಿಂಗ್ ಅವರ ಅಂತ್ಯಕ್ರಿಯೆಯ ಸಮಾರಂಭಗಳು ಪೂರ್ಣಗೊಂಡ ನಂತರ ರಿಂಕು ಸಿಂಗ್ ತಂಡಕ್ಕೆ ಮರಳಲಿದ್ದಾರೆ. 4 ನೇ ಹಂತದ ಯಕೃತ್ತಿನ ಕ್ಯಾನ್ಸರ್ ವಿರುದ್ಧ ದೀರ್ಘಕಾಲದವರೆಗೆ ಹೋರಾಡಿದ ನಂತರ ಖಾನ್‌ಚಂದ್ ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ನಿಧನರಾದರು.
ರಿಂಕು ತಂಡದ ಕ್ಯಾಂಪ್ ತೊರೆದು ತವರು ಮನೆಗೆ ಮರಳಿದ್ದರು. ತಂದೆಯ ಅಂತ್ಯಕ್ರಿಯೆಯ ಕಾರ್ಯಗಳನ್ನು ಮುಗಿಸಿ ಈಗ ಅವರು ಮತ್ತೆ ತಂಡದ ಜವಾಬ್ದಾರಿ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಕೋಲ್ಕತ್ತಾದಲ್ಲಿ ತಂಡವನ್ನು ಸೇರಲಿದ್ದಾರೆ
ವರದಿಯ ಪ್ರಕಾರ, ರಿಂಕು ಸಿಂಗ್ ಅವರು ಶುಕ್ರವಾರ ಚೆನ್ನೈನಿಂದ ನವದೆಹಲಿಗೆ ಪ್ರಯಾಣ ಬೆಳೆಸಿದ್ದರು. ತಂದೆಯ ನಿಧನದ ನಂತರದ ವಿಧಿವಿಧಾನಗಳನ್ನು ಮುಗಿಸಿ, ಶನಿವಾರದಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಟೀಮ್ ಇಂಡಿಯಾ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವು ಮಾರ್ಚ್ 1 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ.
ರಿಂಕು ಸಿಂಗ್ ಭಾರತ ತಂಡದ ಪ್ರಮುಖ 'ಫಿನಿಷರ್' ಆಗಿ ಹೊರಹೊಮ್ಮಿದ್ದಾರೆ. ಕಡಿಮೆ ಎಸೆತಗಳಲ್ಲಿ ಹೆಚ್ಚಿನ ರನ್ ಗಳಿಸುವ ಅವರ ಸಾಮರ್ಥ್ಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಸೂಪರ್ 8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿರುವ ಭಾರತಕ್ಕೆ, ಸೆಮಿಫೈನಲ್ ಪ್ರವೇಶಿಸಲು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ,(ಏಜೆನ್ಸೀಸ್).