ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ(IPL2026) ಬುಧವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಯಾನ್ ರಿಕಲ್ಟನ್ ಅಕ್ಷರಶಃ ರನ್‌ಗಳ ಮಳೆ ಸುರಿಸಿದ್ದಾರೆ. ಕೇವಲ 44 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾದ ಈ ಆಟಗಾರ ಮುಂಬೈ ಇಂಡಿಯನ್ಸ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆ ಬರೆಯುವುದರ ಜೊತೆಗೆ, ವಿಶ್ವ ಕ್ರಿಕೆಟ್‌ನಲ್ಲಿ ಯಾರೂ ಮಾಡದ ಅಪರೂಪದ ಸಾಧನೆಗೆ ಭಾಜನರಾಗಿದ್ದಾರೆ.
ಜಯಸೂರ್ಯ ದಾಖಲೆ ಪತನ
ಇಷ್ಟು ದಿನ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ದಾಖಲೆ ಶ್ರೀಲಂಕಾದ ದಂತಕಥೆ ಸನತ್ ಜಯಸೂರ್ಯ ಅವರ ಹೆಸರಲ್ಲಿತ್ತು. ರಿಕಲ್ಟನ್ ಕೇವಲ 44 ಎಸೆತಗಳಲ್ಲಿ ಮೂರಂಕಿ ತಲುಪುವ ಮೂಲಕ ಜಯಸೂರ್ಯ ಅವರ ಸುದೀರ್ಘ ಕಾಲದ ದಾಖಲೆಯನ್ನು ಅಳಿಸಿ ಹಾಕಿದರು. ತಮ್ಮ ಇನಿಂಗ್ಸ್ ಮುಗಿಯುವಷ್ಟರಲ್ಲಿ ಅವರು 55 ಎಸೆತಗಳಲ್ಲಿ 123 ರನ್ ಸಿಡಿಸಿ ಅಜೇಯರಾಗಿ ಉಳಿದರು. ಈ ಸ್ಫೋಟಕ ಇನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಈ 123 ರನ್ ಮುಂಬೈ ಇಂಡಿಯನ್ಸ್ ಬ್ಯಾಟರ್ ಒಬ್ಬ ಐಪಿಎಲ್ ಇತಿಹಾಸದಲ್ಲಿ ಗಳಿಸಿದ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.
ವಿಶ್ವ ಕ್ರಿಕೆಟ್‌ನಲ್ಲಿ ಮೊದಲ ಆಟಗಾರ
ರಿಕಲ್ಟನ್ ಕೇವಲ ಐಪಿಎಲ್ ದಾಖಲೆ ಮಾತ್ರವಲ್ಲದೆ, ವಿಶ್ವದಾದ್ಯಂತ ಇರುವ 'ಮುಂಬೈ ಇಂಡಿಯನ್ಸ್' ಫ್ರಾಂಚೈಸಿ ಕುಟುಂಬದ ವಿವಿಧ ತಂಡಗಳ ಪರ ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಐಪಿಎಲ್‌ನಲ್ಲಿ ಶತಕ ಸಿಡಿಸುವ ಮುನ್ನ ರಿಕಲ್ಟನ್ 2025-26ರ ಎಸ್‌ಎ20 (SA20) ಟೂರ್ನಿಯಲ್ಲಿ 'ಎಂಐ ಕೇಪ್ ಟೌನ್' ತಂಡದ ಪರ ಎರಡು ಭರ್ಜರಿ ಶತಕಗಳನ್ನು ಬಾರಿಸಿದ್ದರು. ಈ ಮೂಲಕ ಮುಂಬೈ ಇಂಡಿಯನ್ಸ್ ಮಾಲೀಕತ್ವದ ಎರಡು ಬೇರೆ ಬೇರೆ ದೇಶಗಳ ಲೀಗ್ ತಂಡಗಳ ಪರ ಶತಕ ಬಾರಿಸಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.
ರೋಹಿತ್-ಸೂರ್ಯಗೂ ಸಾಧ್ಯವಾಗದ ಸಾಧನೆ
ಮುಂಬೈ ಇಂಡಿಯನ್ಸ್ ಮಾಲೀಕತ್ವದ ತಂಡಗಳ ಪರ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ತಲಾ ಎರಡು ಶತಕಗಳನ್ನು ಹೊಂದಿದ್ದರೂ, ಅವು ಕೇವಲ ಐಪಿಎಲ್ ತಂಡಕ್ಕೆ ಮಾತ್ರ ಸೀಮಿತವಾಗಿವೆ. ಇನ್ನು ಇಂಗ್ಲೆಂಡ್‌ನ ಟಾಮ್ ಬ್ಯಾಂಟನ್ ಎಂಐ ಎಮಿರೇಟ್ಸ್ (ILT20) ಪರ ಎರಡು ಶತಕಗಳನ್ನು ಸಿಡಿಸಿದ್ದಾರೆ. ಆದರೆ, ಎರಡು ಬೇರೆ ಬೇರೆ 'ಎಂಐ' ತಂಡಗಳ ಪರ ಶತಕ ಸಿಡಿಸಿದ ದಾಖಲೆ ಮಾತ್ರ ರಿಕಲ್ಟನ್ ಪಾಲಾಗಿದೆ.
ಎಂಐ ಪರ ಶತಕ ಸಿಡಿಸಿದ 9ನೇ ಬ್ಯಾಟರ್
ಈ ಶತಕದೊಂದಿಗೆ ರಿಯಾನ್ ರಿಕಲ್ಟನ್ ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಪರ ಶತಕ ಸಿಡಿಸಿದ ಒಂಬತ್ತನೇ ಬ್ಯಾಟರ್ ಎನಿಸಿಕೊಂಡರು. ಇವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಯಿತು. ಹೈದರಾಬಾದ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ರಿಕಲ್ಟನ್, ವಾಂಖೆಡೆ ಕ್ರೀಡಾಂಗಣದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು,(ಏಜೆನ್ಸೀಸ್).