ಜಿಂಬಾಬ್ವೆ ಪ್ರವಾಸದಿಂದ ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ ಕೈಬಿಟ್ಟಿದ್ದೇಕೆ?
ನವದೆಹಲಿ: ವೈಭವ್ ಸೂರ್ಯವಂಶಿ ಪದಾರ್ಪಣೆಗೆ ಅವಕಾಶ ಕಲ್ಪಿಸಲು ಅನುಭವಿ ಸಂಜು ಸ್ಯಾಮ್ಸನ್ರನ್ನು (sanju samson) ಆಡುವ 11ರ ಬಳಗದಿಂದ ಹೊರಗಿಟ್ಟ ಬೆನ್ನಲ್ಲೇ, ಜಿಂಬಾಬ್ವೆ ಪ್ರವಾಸಕ್ಕೂ ಅವರನ್ನು ಕೈಬಿಟ್ಟಿರುವುದು ಅಚ್ಚರಿ ಸೃಷ್ಟಿಸಿದೆ. ಜತೆಗೆ, ಹಾಲಿ ವರ್ಷ ಭಾರತದ ಸತತ 2ನೇ ಟಿ20 ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಆಟಗಾರನನ್ನು ಏಕಾಏಕಿ ಕಡೆಗಣಿಸಿದ ನಿರ್ಧಾರ ತೀವ್ರ ಟೀಕೆಗಳಿಗೂ ಗುರಿಯಾಗಿದೆ.
ಸ್ಯಾಮ್ಸನ್ಗೆ ಕೊಕ್ ಅಥವಾ ವಿಶ್ರಾಂತಿ ನೀಡಲಾಗಿದೆಯೇ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಹೇಳದಿದ್ದುದು ಕೂಡ ಗೊಂದಲ ಸೃಷ್ಟಿಸಿತ್ತು. ಆದರೆ ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಸಮಿತಿಯ ಮೂಲಗಳ ಪ್ರಕಾರ, ಅಷ್ಟೇನೂ ಮಹತ್ವವಿಲ್ಲದ ಜಿಂಬಾಬ್ವೆ ಪ್ರವಾಸದ ಆಯ್ಕೆಗೆ ಸ್ಯಾಮ್ಸನ್ರನ್ನು ಪರಿಗಣಿಸಲಾಗಿಲ್ಲ. ಈಗಾಗಲೆ ಮತ್ತೋರ್ವ ಪ್ರಮುಖ ವಿಕೆಟ್ ಕೀಪರ್ ಇಶಾನ್ ಕಿಶನ್ ತಂಡದಲ್ಲಿ ಇದ್ದುದರಿಂದ, ಇನ್ನೋರ್ವ ಅನುಭವಿ ಕೀಪರ್ಗೆ ಬದಲಾಗಿ ಪ್ರಭ್ಸಿಮ್ರನ್ ಸಿಂಗ್ಗೆ ಅವಕಾಶ ಕಲ್ಪಿಸಲು ಆಯ್ಕೆಗಾರರು ಬಯಸಿದ್ದರು ಎನ್ನಲಾಗಿದೆ.
ಏಷ್ಯನ್ ಗೇಮ್ಸ್ಗೆ ಈಗಾಗಲೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಯಾಮ್ಸನ್ ಸ್ಥಾನ ಪಡೆದಿದ್ದಾರೆ. ಹೀಗಾಗಿ ಏಷ್ಯಾಡ್ಗೆ ಸ್ಯಾಮ್ಸನ್ ಪುನರಾಗಮನವೂ ಖಚಿತವೆನಿಸಿದೆ. ಇದರಿಂದ, ಮಾಜಿ ನಾಯಕ ಸೂರ್ಯಕುಮಾರ್ ಯಾದವ್ರಂತೆ 31 ವರ್ಷದ ಸ್ಯಾಮ್ಸನ್ಗೆ ಟಿ20 ತಂಡದ ಬಾಗಿಲು ಇನ್ನೂ ಮುಚ್ಚಿಲ್ಲ ಎಂಬುದು ಕೂಡ ಸ್ಪಷ್ಟವಾಗಿದೆ.