- ಮೊದಲ ಐಪಿಎಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭ
- ಮೊದಲ ಪಂದ್ಯದಲ್ಲೇ ಹಳೆಯ ದಾಖಲೆ ಉಡೀಸ್ಗೆ ಕಿಶನ್ ಪಡೆ ಸಜ್ಜು
- ಆರ್ಸಿಬಿ ವಿರುದ್ಧವೇ ಹೊಸ ದಾಖಲೆ ಬರೆಯಲು ಸನ್‌ರೈಸರ್ಸ್ ತವಕ
ಬೆಂಗಳೂರು: ಇಷ್ಟು ದಿನಗಳ ಕಾಯುವಿಕೆಗೆ ಕಡೆಗೂ ತೆರೆ ಬಿದ್ದಿದ್ದು, ಇಂದಿನಿಂದ ಕ್ರಿಕೆಟ್ ಪ್ರೇಮಿಗಳ ಚುಟುಕು ಕ್ರಿಕೆಟ್ ಲೀಗ್ ಐಪಿಎಲ್ 19ನೇ ಆವೃತ್ತಿ ಶುರುವಾಗಲಿದೆ. ಎಂದಿನಂತೆ ಈ ಬಾರಿಯೂ 2026ರ ಕಿಕ್ಸ್ಟಾರ್ಟ್ ಪಂದ್ಯವನ್ನು ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಸಲಿದ್ದು, ಸನ್‌ರೈಸರ್ಸ್ ಹೈದರಾಬಾದ್ (RCB vs SRH) ವಿರುದ್ಧ ತನ್ನ ಮೊದಲ ಪಂದ್ಯವನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಈ ಒಂದು ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದು, ಯಾವ ತಂಡಕ್ಕೆ ರೋಚಕ ಹಾಗೂ ಶುಭಾರಂಭ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಒಂದು ಕಡೆ ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂಬ ಆತಂಕ ಕೆಲವರಲ್ಲಿ ಕಾಡಿದ್ದೇ ಆದರೂ ಇಂದಿನ ಕಿಕ್ಸ್ಟಾರ್ಟ್ ಮ್ಯಾಚ್ಗೆ ವರುಣನ ತೊಂದರೆ ಇಲ್ಲ. ಮತ್ತೊಂದೆಡೆ, ದಾಖಲೆಗಳ ಸರದಾರ, ಆರ್ಸಿಬಿಯ ರೂವಾರಿ, ಕಿಂಗ್ ಕೊಹ್ಲಿಯನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ, ಅವರನ್ನು ಆರ್ಸಿಬಿ ಜೆರ್ಸಿಯಲ್ಲಿ ತವರಿನಲ್ಲಿ ನೋಡು ತೀರ ಉತ್ಸುಕರಾಗಿದ್ದಾರೆ. ಈ ಪಂದ್ಯದ ಮೇಲೆ ಸಾಕಷ್ಟು ಲೆಕ್ಕಾಚಾರಗಳು ಮೂಡಿರುವುದು ಇದೀಗ ನೋಡುಗರ ಉತ್ಸಾಹವನ್ನು ದುಪ್ಪಟ್ಟಾಗಿಸಿದೆ.
ಬ್ಯಾಟಿಂಗ್ ಬಲ
ರಜತ್ ಪಾಟೀದಾರ್ ನಾಯಕತ್ವದಲ್ಲಿ ಎಸ್ಆರ್ಎಚ್ ವಿರುದ್ಧ ಆಡಲಿರುವ ಆರ್ಸಿಬಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರ ಬಲಾಬಲ ಜೋರಾಗಿದೆ. ಮತ್ತೊಂದೆಡೆ, ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಇಶಾನ್ ಕಿಶನ್ ಮುನ್ನಡೆಸಲಿದ್ದಾರೆ. ಟಿ20 ಸ್ಪೆಷಲಿಸ್ಟ್ಗಳಾದ ಅಭಿಷೇಕ್ ಶರ್ಮ, ಕಿಶನ್, ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್ರಂತಹ ಸ್ಪೋಟಕ ಬ್ಯಾಟರ್ಗಳು ತಂಡದಲ್ಲಿದ್ದಾರೆ. ಇದೇ ಆರ್ಸಿಬಿ ತಂಡದ ಮೇಲೆ ದಾಖಲೆಯನ್ನು ನಿರ್ಮಿಸಿದ್ದ ಎಸ್ಆರ್ಎಚ್, ಇದೀಗ ಮತ್ತೊಮ್ಮೆ ಚಾಲೆಂಜರ್ಸ್ ಮೇಲೆ ತನ್ನ ಹಿಂದಿನ ರೆಕಾರ್ಡ್ ಮುರಿದು, ಹೊಸ ದಾಖಲೆ ನಿರ್ಮಿಸಲು ಎದುರುನೋಡುತ್ತಿದೆ.
287ಕ್ಕೆ 3 ವಿಕೆಟ್
ಏಪ್ರಿಲ್ 15, 2024ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 3 ವಿಕೆಟ್ ನಷ್ಟಕ್ಕೆ 287 ರನ್ ಬಾರಿಸಿದ ಸನ್‌ರೈಸರ್ಸ್ ಹೈದರಾಬಾದ್, ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ತಂಡದ ಮೊತ್ತದ ದಾಖಲೆಯನ್ನು ಹೊಂದಿದೆ ಎಂಬುದು ಇಲ್ಲಿ ಗಮನಾರ್ಹ. ಈಗ ಮತ್ತೊಮ್ಮೆ ಆರ್ಸಿಬಿ ಎದುರಿಗೆ ತನ್ನ ಮೊದಲ ಐಪಿಎಲ್ ಪಂದ್ಯವನ್ನಾಡಲು ಸಜ್ಜಾಗಿರುವ ಕಿಶನ್ ಪಡೆ, ತಮ್ಮ ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ ಬಳಸಿಕೊಂಡು ಬೆಂಗಳೂರು ಪಡೆಯ ವಿರುದ್ಧವೇ ತನ್ನ ಹಿಂದಿನ ದಾಖಲೆಯನ್ನು ಮುರಿಯಲು ಸಜ್ಜಾಗಿದೆ. ಇದು ಇಂದಿನ ಮೊದಲ ಪಂದ್ಯದಲ್ಲೇ ಸಾಧ್ಯವೇ? ಎಂಬ ಕುತೂಹಲ ಸದ್ಯ ಕ್ರಿಕೆಟ್ ಪ್ರಿಯರಲ್ಲಿ ಕಾಡತೊಡಗಿದೆ,(ಏಜೆನ್ಸೀಸ್).