- ಇಂದು (ಏ.24) ಆರ್ಸಿಬಿ ಮತ್ತು ಜಿಟಿ ನಡುವಿನ ಐಪಿಎಲ್ ಪಂದ್ಯ
- ತವರಿನಲ್ಲಿ ಆರ್ಸಿಬಿಗೆ ಇದು ಕೊನೇ ಲೀಗ್ ಹಂತದ ಮ್ಯಾಚ್
- ವಿರಾಟ್ ಕೊಹ್ಲಿ ಮತ್ತು ತಂಡದ ಆಟಗಾರರನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಹಪಾಹಪಿ
RCB vs GT: ಇಂದು (ಏ.24) ನಡೆಯಲಿರುವ 19ನೇ ಐಪಿಎಲ್ ಆವೃತ್ತಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಆರ್ಸಿಬಿ ತವರಾದ ಎಂ. ಚಿನ್ನಸ್ವಾಮಿಯಲ್ಲಿ ಈ ಪಂದ್ಯ ನಡೆಯಲಿದೆ. ತವರಿನಲ್ಲಿ ಮತ್ತೊಂದು ಗೆಲುವು ಸಾಧಿಸಲು ಎದುರುನೋಡುತ್ತಿರುವ ರಜತ್ ಪಾಟೀದಾರ್ ಪಡೆಗೆ ಬೆಂಗಳೂರಿನಲ್ಲಿ ಇದೇ ಕೊನೆಯ ಪಂದ್ಯ ಎಂಬ ಸಂಗತಿ ಸದ್ಯ ಲಾಯಲ್ ಫ್ಯಾನ್ಸ್ಗೆ ಭಾರೀ ಬೇಸರ ತಂದಿದೆ.
ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ 3ನೇ ಸ್ಥಾನದಲ್ಲಿರುವ ಆರ್ಸಿಬಿ, ಇಲ್ಲಿಯವರೆಗೆ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಜಯ ಸಾಧಿಸಿ, ಇನ್ನೆರೆಡರಲ್ಲಿ ಸೋಲುಂಡಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಒಟ್ಟಾರೆ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡುತ್ತಿರುವ ರಜತ್ ಪಾಟೀದಾರ್ ಪಡೆ ಇಂದಿನ ಪಂದ್ಯದಲ್ಲಿ ಹೇಗಾದರೂ ಗೆಲ್ಲಲೇಬೇಕು ಎಂದು ಪಣತೊಟ್ಟಿದೆ. ತವರಿನಲ್ಲಿ ಲೀಗ್ನ ಕೊನೆಯ ಪಂದ್ಯ ಇದಾಗಿರುವ ಹಿನ್ನೆಲೆ ತಮ್ಮ ಅಭಿಮಾನಿಗಳನ್ನು ಸಂತೋಷ ಪಡಿಸುವ ನಿಟ್ಟಿನಲ್ಲಿ ಆರ್ಸಿಬಿ ಗೆಲುವಿನತ್ತ ಕಣ್ಣಿಟ್ಟಿದೆ.
ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಮತ್ತು ತಂಡದ ಆಟಗಾರರನ್ನು ಕಣ್ತುಂಬಿಕೊಳ್ಳಲು ತೀವ್ರ ಕಾತರದಿಂದ ಕಾಯುತ್ತಿರುವ ಆರ್ಸಿಬಿ ಅಭಿಮಾನಿಗಳು, ಸಂಜೆಯ ಪಂದ್ಯಕ್ಕೆ ಅದಾಗಲೇ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ದೌಡಾಯಿಸಿದ್ದಾರೆ. ಗುಜರಾತ್ ಟೈಟನ್ಸ್ ತಂಡದಲ್ಲಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರಿಗೂ ಇದು ತವರೂರು ಎಂಬುದು ಲಾಯಲ್ ಫ್ಯಾನ್ಸ್ ಮರೆತಿಲ್ಲ. ಬೆಂಗಳೂರು ಪಡೆಯ ಕೊನೇ ಐಪಿಎಲ್ ಇದಾಗಿರುವ ಕಾರಣ, ಪೊಲೀಸರು ಸ್ಟೇಡಿಯಂ ಸುತ್ತಮುತ್ತ ಹದ್ದಿನ ಕಣ್ಣಿಟ್ಟಿದ್ದಾರೆ.
ಈ ಹಿಂದೆ, ಆರ್ಸಿಬಿ ಅಭಿಮಾನಿಗಳಿಂದ ಒಂದು ಟಿಕೆಟ್ಗೆ ಬರೋಬ್ಬರಿ 15ರಿಂದ 19000 ರೂ.ನಂತೆ ಹೆಚ್ಚಿನ ಹಣ ಪಡೆದು, ಬ್ಲ್ಯಾಕ್ ಟಿಕೆಟ್ ಮಾರಾಟ ಮಾಡಿದವರನ್ನು ಬಂಧಿಸಿದ ಬೆಂಗಳೂರು ಪೊಲೀಸರು, ಆ ರೀತಿ ಇಂದಿನ ಪಂದ್ಯದಲ್ಲಿ ಯಾರಾದರೂ ಮಾಡುತ್ತಿದ್ದಾರೆ ಎಂದು ಜೂಮ್ ಮಾಡಿ ಹುಡುಕುತ್ತಿದೆ. ಈ ಮಧ್ಯೆ, ತಮ್ಮ ನೆಚ್ಚಿನ ತಂಡದ ಆಟಗಾರರನ್ನು ನೋಡುವ ಆತುರದಲ್ಲಿ ಬೆಲೆ ಬಾಳುವ ಚಿನ್ನಾಭರಣ, ಮೊಬೈಲ್ ಫೋನ್, ಪರ್ಸ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳೆದುಕೊಳ್ಳುವ ಜನರಿಗೆ ಖಾಕಿ ಎಚ್ಚರಿಕೆ ನೀಡುತ್ತಿರುವುದು ಗಮನಾರ್ಹ.
ಇಂದಿನ ಗುಜರಾತ್ ಟೈಟನ್ಸ್ ಪಂದ್ಯದಲ್ಲಿ ಆರ್ಸಿಬಿ ಮತ್ತೊಂದು ಗೆಲುವು ಸಾಧಿಸಬೇಕು ಮತ್ತು ವಿರಾಟ್ ಕೊಹ್ಲಿ ಅವರಿಂದ ಶತಕದಾಟ ನೋಡಬೇಕು ಎಂಬ ಹಂಬಲ, ಮಹಾದಾಸೆ ಫ್ರಾಂಚೈಸಿಯ ಲಾಯಲ್ ಅಭಿಮಾನಿಗಳದ್ದು. ಸಂಜೆ 7:30ಕ್ಕೆ ಆರಂಭವಾಗಲಿರುವ ಮ್ಯಾಚ್ ಎಷ್ಟು ರೋಚಕವಾಗಿರಲಿದೆ? ತವರಿನಲ್ಲಿ ನಡೆಯಲಿರುವ ಕೊನೇ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲಿದೆಯೇ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ.