ವಿಕೆಟ್​ ಹಿಂದೆ ಒಬ್ಬನಿದ್ದ... ಧೋನಿಗೆ ಮಾಡಿದ ಅವಮಾನ ಎಂದು RCB ವಿರುದ್ಧ ತಿರುಗಿಬಿದ್ದ CSK ಫ್ಯಾನ್ಸ್​!  
ಕ್ರಿಕೆಟ್

ವಿಕೆಟ್​ ಹಿಂದೆ ಒಬ್ಬನಿದ್ದ... ಧೋನಿಗೆ ಮಾಡಿದ ಅವಮಾನ ಎಂದು RCB ವಿರುದ್ಧ ತಿರುಗಿಬಿದ್ದ CSK ಫ್ಯಾನ್ಸ್​!

ಪ್ರಮುಖ ಮುಖ್ಯಾಂಶಗಳು

  • ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗೆಲುವಿನ ಹಾದಿಯಲ್ಲಿದೆ
  • ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್​ ತಂಡವನ್ನು ಸೋಲಿಸಿ ಶುಭಾರಂಭ
  • ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಅಗ್ರಸ್ಥಾನಕ್ಕೆ ಜಿಗಿತ
  • ಆರ್​ಸಿಬಿ ಗೆಲುವಿನ ಬೆನ್ನಲ್ಲೇ ಧೋನಿಗೆ ಅವಮಾನ ಆಗಿದೆ ಎಂದು ಆಕ್ರೋಶ ಹೊರಹಾಕಿದ ಸಿಎಸ್​ಕೆ ಫ್ಯಾನ್ಸ್​
RCB : ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗೆಲುವಿನ ಹಾದಿಯಲ್ಲಿದೆ. 2026ರ ಐಪಿಎಲ್​ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ( SRH ) ತಂಡವನ್ನು ಸೋಲಿಸಿದ ಆರ್​ಸಿಬಿ, ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ( CSK ) ತಂಡವನ್ನು ಸೋಲಿಸಿತು. ಈ ಮೂಲಕ ಸತತ ಎರಡನೇ ಗೆಲುವು ದಾಖಲಿಸಿತು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ ಆರಂಭಿಸಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್‌ಗಳ ನಷ್ಟಕ್ಕೆ 250 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ನಂತರ, ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ 19.4 ಓವರ್‌ಗಳಲ್ಲಿ ಕೇವಲ 207 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಆರ್‌ಸಿಬಿ, ಚೆನ್ನೈ ತಂಡವನ್ನು 43 ರನ್‌ಗಳಿಂದ ಸೋಲಿಸಿತು. ಅಲ್ಲದೆ, ಸತತ ಎರಡನೇ ಗೆಲುವು ದಾಖಲಿಸಿ, ನಾಲ್ಕು ಅಂಕಗಳನ್ನು ಗಳಿಸಿರು. ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ ಕಾರಣ ಉತ್ತಮ ನೆಟ್​ ರನ್​ ರೇಟ್​ನೊಂದಿಗೆ (+2.501) ಆರ್​ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಇದರೊಂದಿಗೆ, ಆರ್‌ಸಿಬಿ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ.

ಆರ್​ಸಿಬಿ ವಿರುದ್ಧ ಸಿಎಸ್​ಕೆ ಫ್ಯಾನ್ಸ್​ ಆಕ್ರೋಶ

ಈ ಪಂದ್ಯದ ಬೆನ್ನಲ್ಲೇ ಸಿಎಸ್‌ಕೆ ಅಭಿಮಾನಿಗಳು ಆರ್‌ಸಿಬಿಯ ಸಾಮಾಜಿಕ ಜಾಲತಾಣದ ನಡೆಯನ್ನು ಟೀಕಿಸುತ್ತಿದ್ದಾರೆ. ಇದಕ್ಕೆ ಕಾರಣ ಟೀಮ್ ಇಂಡಿಯಾದ ದಂತಕಥೆ ಮತ್ತು ಸಿಎಸ್‌ಕೆ ತಂಡವನ್ನು ಐದು ಬಾರಿಯ ಚಾಂಪಿಯನ್ ಪಟ್ಟಕ್ಕೆ ಮುನ್ನಡೆಸಿದ ಮಹೇಂದ್ರ ಸಿಂಗ್ ಧೋನಿ ಅವರನ್ನು ಅವಮಾನಿಸುವಂತಹ ಪೋಸ್ಟ್​ ಮಾಡಿದೆ ಎಂದು ಆರೋಪಿಸುತ್ತಿದ್ದಾರೆ.
ಎಂ.ಎಸ್. ಧೋನಿ ಅವರು ತಮ್ಮ 44ನೇ ವಯಸ್ಸಿನಲ್ಲೂ ಐಪಿಎಲ್​ ಆಡಲು ಸಿದ್ದರಾಗಿದ್ದಾರೆ. ಆದಾಗ್ಯೂ, ತಮ್ಮ ಫಿಟ್‌ನೆಸ್ ಕಾರಣಗಳಿಂದ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ತಂಡ ಸತತ ಮೂರು ಸೋಲುಗಳಿಂದ ಕಂಗೆಟ್ಟಿದೆ. ಇದರೊಂದಿಗೆ, ಧೋನಿಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. 
ಇದೇ ಸಂದರ್ಭದಲ್ಲಿ, ಆರ್‌ಸಿಬಿಯು ತನ್ನ ಸಾಮಾಜಿಕ ಜಾಲತಾಣದಲ್ಲಿ ಧೋನಿಯನ್ನು ಅವಮಾನಿಸುವ ಪೋಸ್ಟ್ ಒಂದನ್ನು ಮಾಡಿದೆ ಎಂದು ಸಿಎಸ್​ಕೆ ಅಭಿಮಾನಿಗಳು ಹೇಳುತ್ತಿದ್ದಾರೆ. ಸಿಎಸ್​ಕೆ ಇನ್ನಿಂಗ್ಸ್‌ನ ಹತ್ತನೇ ಓವರ್‌ನಲ್ಲಿ ಅಭಿನಂದನ್ ಸಿಂಗ್ ಎಸೆದ ಐದನೇ ಚೆಂಡನ್ನು ಆಡುವಲ್ಲಿ  ಶಿವಂ ದುಬೆ ವಿಫಲರಾದರು. ಈ ಪ್ರಕ್ರಿಯೆಯಲ್ಲಿ, ವಿಕೆಟ್ ಕೀಪರ್ ಜಿತೇಶ್ ಶರ್ಮಾ, ಅದ್ಭುತ ಕ್ಯಾಚ್ ತೆಗೆದುಕೊಂಡು ದುಬೆಯನ್ನು ಪೆವಿಲಿಯನ್​ಗೆ ಕಳುಹಿಸಿದರು.

ವಿಕೆಟ್‌ಗಳ ಹಿಂದೆ ಒಬ್ಬನಿದ್ದ

ಈ ವಿಡಿಯೋವನ್ನು ಹಂಚಿಕೊಂಡಿರುವ ಆರ್‌ಸಿಬಿ, "ವಿಕೆಟ್ ಹಿಂಭಾಗದಲ್ಲಿ ಒಬ್ಬನಿದ್ದ" ಎಂದು ಶೀರ್ಷಿಕೆ ನೀಡಿದೆ. ಸಾಮಾನ್ಯವಾಗಿ ಈ ವಾಕ್ಯವನ್ನು ಮಹೇಂದ್ರ ಸಿಂಗ್ ಧೋನಿ ಅವರಿಗೆ ಬಳಸಲಾಗುತ್ತದೆ. ಧೋನಿಯವರು ವಿಕೆಟ್ ಹಿಂದೆ ನಿಂತು ಪಂದ್ಯದ ಗತಿಯನ್ನು ಬದಲಿಸುವ ತಂತ್ರಗಳನ್ನು ರೂಪಿಸುತ್ತಿದ್ದ ಕಾರಣ, ಅವರ ಅಭಿಮಾನಿಗಳು ಅವರನ್ನು ಗೌರವಿಸಲು ಅಥವಾ ನೆನಪಿಸಿಕೊಳ್ಳಲು ಈ ಸಾಲನ್ನು ಬಳಸುತ್ತಾರೆ. ಆದರೆ, ಇತ್ತೀಚೆಗೆ ಆರ್‌ಸಿಬಿ ತಂಡವು ಈ ವಾಕ್ಯವನ್ನು ತನ್ನ ಟ್ವೀಟ್‌ನಲ್ಲಿ ಬಳಸಿ, ಧೋನಿಯನ್ನು ಪರೋಕ್ಷವಾಗಿ ವ್ಯಂಗ್ಯವಾಡಿದೆ ಎನ್ನಲಾಗುತ್ತಿದೆ. ಇದರಿಂದ ಸಿಎಸ್‌ಕೆ ಅಭಿಮಾನಿಗಳು ತೀವ್ರ ಕೋಪಗೊಂಡಿದ್ದಾರೆ.
ಹದಿನೆಂಟು ವರ್ಷಗಳಿಂದ ಒಂದೇ ಒಂದು ಪ್ರಶಸ್ತಿಗಾಗಿ ಕಾಯುತ್ತಿದ್ದ ಕೆಟ್ಟ ತಂಡವೊಂದು ಗೆದ್ದ ಕೂಡಲೇ ತನ್ನ ಸಣ್ಣ ಬುದ್ಧಿಯನ್ನು ಪ್ರದರ್ಶಿಸುತ್ತಿದೆ. ಧೋನಿ ಐದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆದರೆ, ಸಿಎಸ್‌ಕೆ ಎಂದಿಗೂ ಅಂತಹ ಸಣ್ಣತನವನ್ನು ತೋರಿಸಿಲ್ಲ ಎಂದು ಸಿಎಸ್​ಕೆ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ, ಆರ್​ಸಿಬಿ ಪರ ಬ್ಯಾಟ್​ ಬೀಸಿರುವ ಅಭಿಮಾನಿಗಳು, ಧೋನಿ ಅವರನ್ನೇ ಉದ್ದೇಶಿಸಿ ಹೇಳಲಾಗಿದೆ ಎಂದು ಹೇಗೆ ಹೇಳುತ್ತೀರಾ? ಜಿತೇಶ್​ ಶರ್ಮಾ ಕ್ಯಾಚ್​ ಹಿಡಿದು ಪಂದ್ಯದ ದಿಕ್ಕನ್ನು ಬದಲಿಸಿದರು. ಹೀಗಾಗಿ, ಆ ರೀತಿ ಹೇಳಲಾಗಿದೆ. ಅದಕ್ಕೆ ಧೋನಿ ಹೆಸರು ತಳುಕು ಹಾಕಬೇಡಿ ಎಂದು ಸಿಎಸ್​ಕೆ ಅಭಿಮಾನಿಗಳನ್ನು ಟೀಕಿಸುತ್ತಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 250 ರನ್​ಗಳ ಬೃಹತ್​ ಮೊತ್ತವನ್ನು ಕಲೆಹಾಕಿತು. ಆರ್‌ಸಿಬಿ ಪರ ಟಿಮ್ ಡೇವಿಡ್ (ಅಜೇಯ 70 ರನ್​, 25 ಎಸೆತ, 3 ಬೌಂಡರಿ, 8 ಸಿಕ್ಸರ್) ಮತ್ತು ದೇವದತ್ ಪಡಿಕ್ಕಲ್ (50 ರನ್​, 29 ಎಸೆತ, 5 ಬೌಂಡರಿ, 2 ಸಿಕ್ಸರ್) ಮಿಂಚಿನ ಅರ್ಧಶತಕಗಳನ್ನು ಗಳಿಸಿದರು. ನಾಯಕ ರಜತ್ ಪಾಟಿದಾರ್ (ಅಜೇಯ 48 ರನ್​, 19 ಎಸೆತ, 1 ಬೌಂಡರಿ, 6 ಸಿಕ್ಸರ್) ಮತ್ತು ಫಿಲ್ ಸಾಲ್ಟ್ (46 ರನ್​, 30 ಎಸೆತ, 3 ಬೌಂಡರಿ, 2 ಸಿಕ್ಸರ್) ವೇಗವಾಗಿ ಆಡಿದರು. ಸಿಎಸ್‌ಕೆ ಬೌಲರ್‌ಗಳಲ್ಲಿ ಅನ್ಶುಲ್ ಕಾಂಬೋಜ್, ಜೇಮಿ ಓವರ್ಟನ್ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಆರ್​ಸಿಬಿ ನೀಡಿದ 251 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 207 ರನ್​ಗಳಿಗೆ ಆಲೌಟ್ ಆಯಿತು. ಸಿಎಸ್​ಕೆ ಪರ ಸರ್ಫರಾಜ್ ಖಾನ್ (50 ರನ್​, 25 ಎಸೆತ, 8 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರು. ಪ್ರಶಾಂತ್ ವೀರ್ (43 ರನ್​, 29 ಎಸೆತ, 6 ಬೌಂಡರಿ, 1 ಸಿಕ್ಸರ್) ಮತ್ತು ಜೇಮೀ ಓವರ್ಟನ್ (37 ರನ್​, 16 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆರ್​ಸಿಬಿ ಪರ ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಪಡೆದರು. ಜಾಕೋಬ್ ಡಫಿ, ಅಭಿನಂದನ್ ಸಿಂಗ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರೆ, ಸುಯಾಶ್ ಶರ್ಮಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).