RCB ವಿರುದ್ಧ ನಮ್ಮ ಸೋಲಿಗೆ ಬೌಲಿಂಗ್ ಮಾತ್ರವಲ್ಲ ಅದು ಕೂಡ ಕಾರಣ... ಅಚ್ಚರಿ ಹೇಳಿಕೆ ನೀಡಿದ ಇಶಾನ್ ಕಿಶಾನ್!
- ಕ್ರೀಡಾಭಿಮಾನಿಗಳು ಬಹಳ ಉತ್ಸಾಹದಿಂದ ಎದುರು ನೋಡುತ್ತಿದ್ದ ಮೆಗಾ ಕ್ರಿಕೆಟ್ ಉತ್ಸವ ಐಪಿಎಲ್ ಆರಂಭ
- ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿ
- ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಗೆಲುವು
- ಬೃಹತ್ ಗುರಿ ನೀಡಿದರು ತಮ್ಮ ತಂಡ ಸೋತಿದ್ದಕ್ಕೆ ಅಚ್ಚರಿಯ ಕಾರಣಗಳನ್ನು ನೀಡಿದ ಇಶಾನ್ ಕಿಶನ್
RCB : ಕ್ರೀಡಾಭಿಮಾನಿಗಳು ಬಹಳ ಉತ್ಸಾಹದಿಂದ ಎದುರು ನೋಡುತ್ತಿದ್ದ ಮೆಗಾ ಕ್ರಿಕೆಟ್ ಉತ್ಸವ ಇಂಡಿಯನ್ ಪ್ರೀಮಿಯರ್ ಲೀಗ್ ( IPL ) ಆರಂಭವಾಗಿದೆ. ಶನಿವಾರ (ಮಾರ್ಚ್ 28) ರಾತ್ರಿ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ಮತ್ತು ಸನ್ ರೈಸರ್ಸ್ ಹೈದರಾಬಾದ್ ( SRH ) ಮುಖಾಮುಖಿಯಾದವು.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಎಚ್ ತಂಡ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 201 ರನ್ಗಳ ಬೃಹತ್ ಮೊತ್ತ ಗಳಿಸಿತು. ಇದಾದ ನಂತರ, ಆರ್ಸಿಬಿ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿಯಾಗಿ ಆಡಿದರು. ಕೇವಲ 15.4 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿದರು. ಇದರೊಂದಿಗೆ, ಆರ್ಸಿಬಿ ತಂಡವು ಆರು ವಿಕೆಟ್‌ಗಳ ಭಾರಿ ಅಂತರದಿಂದ ಜಯಗಳಿಸಿತು.
ಮೂರು ಬ್ಯಾಟ್ಸ್‌ಮನ್‌ಗಳ ವೈಫಲ್ಯ
ಈ ಪಂದ್ಯದ ಬಳಿಕ ಮಾತನಾಡಿದ ಎಸ್ಆರ್ಎಚ್ ನಾಯಕ ಇಶಾನ್ ಕಿಶನ್, ತಮ್ಮ ತಂಡದ ಸೋಲಿಗೆ ಕಾರಣಗಳು ಏನು ಎಂಬುದನ್ನು ತಿಳಿಸಿದರು. ಅಗ್ರ ಕ್ರಮಾಂಕದ ಮೂರು ಬ್ಯಾಟ್ಸ್‌ಮನ್‌ಗಳ ವೈಫಲ್ಯ ಮತ್ತು ಕಳಪೆ ಬೌಲಿಂಗ್ ತಮ್ಮ ತಂಡದ ಸೋಲಿಗೆ ಪ್ರಮುಖ ಕಾರಣ ಎಂದರು. ಮೊದಲ ಮೂರು ಅಥವಾ ನಾಲ್ಕು ಓವರ್‌ಗಳ ನಂತರ, ಪಿಚ್ ಬ್ಯಾಟಿಂಗ್‌ಗೆ ಸೂಕ್ತವಾಯಿತು. ನಾವು ಆರಂಭದಲ್ಲಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡೆವು. ವಿಕೆಟ್ ಉಳಿಸಿಕೊಳ್ಳುವುದರ ಕಡೆ ನಾವು ಗಮನ ಹರಿಸಬೇಕಾಗಿದೆ ಎಂದರು.
ಕೊಹ್ಲಿ ಅದ್ಭುತ ಇನ್ನಿಂಗ್ಸ್
ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಯಿತು. ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ನಾವು ಅವರನ್ನು ಆದಷ್ಟು ಬೇಗ ಔಟ್ ಮಾಡಬೇಕು. ಕೊಹ್ಲಿ ಏನಾದರೂ ಕ್ರೀಸ್‌ನಲ್ಲಿ ಸೆಟ್ ಆದರೆ, ಅವರನ್ನು ತಡೆಯುವುದು ಕಷ್ಟವಾಗುತ್ತದೆ. ಆ ವಿಷಯದಲ್ಲಿ ನಾವು ವಿಫಲರಾಗಿದ್ದೇವೆ. ಪರಿಣಾಮವಾಗಿ, ನಾವು ದೊಡ್ಡ ಸ್ಕೋರ್ ಗಳಿಸಿದರೂ ಪಂದ್ಯವನ್ನು ಕಳೆದುಕೊಂಡೆವು ಎಂದು ಇಶಾನ್ ಕಿಶನ್ ಹೇಳಿದರು.
ಇದು ಕೇವಲ ಮೊದಲ ಪಂದ್ಯವಾದ್ದರಿಂದ, ಮುಂಬರುವ ಪಂದ್ಯಗಳಲ್ಲಿ ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ನಾವು ಮುನ್ನೆಚ್ಚರಿಕೆ ವಹಿಸುತ್ತೇವೆ. ಬೌಲಿಂಗ್ ವಿಭಾಗದಲ್ಲಿ ನಾವು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ವಿಕೆಟ್ ಪಡೆಯುವಲ್ಲಿ ನಾವು ಸ್ವಲ್ಪ ವಿಫಲರಾಗಿದ್ದೇವೆ. ಮುಂದಿನ ಪಂದ್ಯಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ. ಮುಂಬರುವ ಪಂದ್ಯಗಳನ್ನು ಗೆದ್ದರೆ, ಟೂರ್ನಿಯಲ್ಲಿ ನಮ್ಮ ಪ್ರಯಾಣ ಸುಲಭವಾಗುತ್ತದೆ ಎಂದು ಇಶಾನ್ ಕಿಶನ್ ಹೇಳಿದರು, (ಏಜೆನ್ಸೀಸ್).