ಆರ್‌ಸಿಬಿಗೆ ಅಗ್ರಸ್ಥಾನ ಕಾಯ್ದುಕೊಳ್ಳುವ ತವಕ: ಹಾಲಿ ಚಾಂಪಿಯನ್ಸ್‌ಗೆ ಸನ್‌ರೈಸರ್ಸ್ ಸವಾಲು
ಹೈದರಾಬಾದ್: ಉದ್ಘಾಟನಾ ಪಂದ್ಯದೊಂದಿಗೆ ಅಭಿಯಾನ ಆರಂಭಿಸಿದ್ದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (rcb) ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್-19ರಲ್ಲಿ ಶುಕ್ರವಾರ ಮರುಮುಖಾಮುಖಿ ಆಗಲಿವೆ. ಈಗಾಗಲೆ ಪ್ಲೇಆಫ್ ಸ್ಥಾನ ಖಾತ್ರಿಪಡಿಸಿಕೊಂಡಿರುವ ಉಭಯ ತಂಡಗಳು ಅಂಕಪಟ್ಟಿಯ ಅಗ್ರ-2ರಲ್ಲಿ ಸ್ಥಾನ ಪಡೆಯುವ ಮೂಲಕ ಕ್ವಾಲಿಫೈಯರ್-1ಕ್ಕೆ ಅರ್ಹತೆ ಪಡೆಯುವ ತವಕದಲ್ಲಿವೆ. ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ನಾಯಕ ರಜತ್ ಪಾಟೀದಾರ್, ಸನ್‌ರೈಸರ್ಸ್ ವಿರುದ್ಧ ಕಣಕ್ಕಿಳಿಯಲು ಫಿಟ್ ಆಗಿದ್ದಾರೆ.
ಪಾಟೀದಾರ್ ಸಾರಥ್ಯದಲ್ಲಿ ಸತತ 2ನೇ ವರ್ಷವೂ ಸರ್ವಾಂಗೀಣ ನಿರ್ವಹಣೆಯೊಂದಿಗೆ ಪ್ರಶಸ್ತಿ ಫೇವರಿಟ್ ಆಗಿರುವ ಆರ್‌ಸಿಬಿ, ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡಿರುವ ಏಕೈಕ ತಂಡ ಎನಿಸಿದೆ. ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 23 ರನ್‌ಗಳಿಂದ ಗೆದ್ದು ಆತ್ಮವಿಶ್ವಾಸವೃದ್ಧಿಸಿಕೊಂಡಿರುವ ಆರ್‌ಸಿಬಿ, ಇದುವರೆಗೆ ಆಡಿರುವ 13ರಲ್ಲಿ 9 ಗೆಲುವು, 4 ಸೋಲಿನೊಂದಿಗೆ 18 ಪಾಯಿಂಟ್ ಗಳಿಸಿ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದೆ.
ಸನ್‌ರೈಸರ್ಸ್ ಎದುರು ಸೋತರೂ, ಆರ್‌ಸಿಬಿ ಅಗ್ರ-2ರಲ್ಲಿ ಸ್ಥಾನ ಪಡೆಯುವ ಅವಕಾಶ ಹೆಚ್ಚಿದೆ. +1.065 ರನ್‌ರೇಟ್ ಹೊಂದಿರುವ ಆರ್‌ಸಿಬಿಯನ್ನು ಹಿಂದಿಕ್ಕಲು ಸನ್‌ರೈಸರ್ಸ್‌ಗೆ ದೊಡ್ಡ ಅಂತರದ ಗೆಲುವು ಬೇಕಿದೆ. ತವರಿನಲ್ಲಿ ಕೊನೇ ಲೀಗ್ ಪಂದ್ಯವನ್ನಾಡಲಿರುವ ಸನ್‌ರೈಸರ್ಸ್ 13ರಲ್ಲಿ 8 ಗೆಲುವು, 5 ಸೋಲಿನೊಂದಿಗೆ ಅಂಕಪಟ್ಟಿಯ 3ನೇ ಸ್ಥಾನದಲ್ಲಿದೆ. 2ನೇ ಸ್ಥಾನಿ ಗುಜರಾತ್ ಹಾಗೂ ಸನ್‌ರೈಸರ್ಸ್ ನಡುವೆ ರನ್‌ರೇಟ್‌ನಲ್ಲಿ ಹೆಚ್ಚಿನ ಅಂತರವಿಲ್ಲ. ಇದರಿಂದ ಆರ್‌ಸಿಬಿ ಎದುರು ಗೆದ್ದರೆ 2ನೇ ಸ್ಥಾನಕ್ಕೇರುವ ಅವಕಾಶ ಪ್ಯಾಟ್ ಕಮ್ಮಿನ್ಸ್ ಪಡೆ ಮುಂದಿದೆ.
ಪ್ಲೇಆ್ ಹಂತಕ್ಕೂ ಮುನ್ನ ಫಿಲ್ ಸಾಲ್ಟ್ ಆರ್‌ಸಿಬಿ ತಂಡ ಕೂಡಿಕೊಳ್ಳಲಿದ್ದು, ಸನ್‌ರೈಸರ್ಸ್ ವಿರುದ್ಧ ಕಣಕ್ಕಿಳಿಯುವುದು ಅನುಮಾನ. ಸಾಲ್ಟ್ ಗೈರಿನಲ್ಲಿ 9 ಪಂದ್ಯಗಳನ್ನಾಡಿರುವ ಜೇಕಬ್ ಬೆಥೆಲ್ ಇದುವರೆಗೆ ಕೇವಲ 96 ರನ್‌ಗಳಿಸಿದ್ದಾರೆ. ಇದರಿಂದ ಆರ್‌ಸಿಬಿ ಆರಂಭಿಕ ಜೋಡಿಯಲ್ಲಿ ಬದಲಾವಣೆಯ ನಿರೀಕ್ಷೆ ಇದೆ. ಟೂರ್ನಿಯ ಮೊದಲ ಪಂದ್ಯವನ್ನಾಡಿದ ಸನ್‌ರೈಸರ್ಸ್ ತಂಡಕ್ಕೂ ಈಗಿನ ತಂಡಕ್ಕೂ ವ್ಯತ್ಯಾಸವಿದ್ದು, ಪ್ಯಾಟ್ ಕಮ್ಮಿನ್ಸ್ ಆಗಮನ ಮತ್ತು ಪ್ರುಲ್ ಹಿಂಗೆ, ಸಾಕಿಬ್ ಹುಸೈನ್ ಒಳಗೊಂಡ ಬೌಲಿಂಗ್ ಪರಿಣಾಮಕಾರಿ ಎನಿಸಿದೆ. ಅಭಿಷೇಕ್ (507), ಇಶಾನ್ ಕಿಶನ್ (490), ಹೆನ್ರಿಚ್ ಕ್ಲಾಸೆನ್ (555) ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಆರ್‌ಸಿಬಿ ಯಶಸ್ಸಿನ ಓಟದಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ವೇಗಿ ಭುವನೇಶ್ವರ್ ಕುಮಾರ್ (24 ವಿಕೆಟ್) ಪ್ರಮುಖ ಪಾತ್ರವಹಿಸಿದ್ದು, ಕೊಹ್ಲಿ ಹಾಲಿ ವರ್ಷ ಆಡಿರುವ 13 ಇನಿಂಗ್ಸ್‌ಗಳಲ್ಲಿ 542 ರನ್ ಕಲೆಹಾಕಿದ್ದಾರೆ. ದೇವದತ್ ಪಡಿಕ್ಕಲ್ (412) ಸಹ ಆರ್‌ಸಿಬಿಯ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿ ಬಿರುಸಿನ ಆರಂಭ ನೀಡಿದ್ದಾರೆ. ರಜತ್ ಪಾಟೀದಾರ್ ಗೈರಿನಲ್ಲಿ ವೆಂಕಟೇಶ್ ಅಯ್ಯರ್ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಪಾಟೀದಾರ್ ಮರಳಿದಾಗ ವೆಂಕಟೇಶ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮುಂದುವರಿಯಬಹುದು. ಪವರ್ ಪ್ಲೇಯಲ್ಲಿ ಎದುರಾಳಿಗಳ ಬಲ ಕಸಿಯುವ ಭುವನೇಶ್ವರ್ ಜತೆಗೆ ಡೆತ್ ಓವರ್‌ಗಳಲ್ಲಿ ಜೋಶ್ ಹ್ಯಾಸಲ್‌ವುಡ್ ಸನ್‌ರೈಸರ್ಸ್‌ಗೆ ಸವಾಲೆಸೆಯಲಿದ್ದಾರೆ.
ಉಪ್ಪಾಳದ ಆರ್‌ಜಿಐ ಕ್ರೀಡಾಂಗಣವೂ ಬ್ಯಾಟಿಂಗ್ ಸ್ನೇಹಿ ಆಗಿದ್ದು, ರನ್‌ಮಳೆ ನಿರೀಕ್ಷೆ ಇದೆ. ಬೌಲರ್‌ಗಳು ಲಯ ಕಾಯ್ದುಕೊಂಡರೆ ಯಶಸ್ಸು ದೊರೆಯಲಿದೆ. ಹಾಲಿ ವರ್ಷ ಆಡಿರುವ 6 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ 4 ಬಾರಿ ಜಯಿಸಿದೆ.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.