ಆರ್​ಸಿಬಿ ಖರೀದಿಗೆ ಅಂತಿಮ ಸುತ್ತಿನಲ್ಲಿ ಎರಡೇ ಕಂಪನಿಗಳ ನಡುವೆ ಪೈಪೋಟಿ! 
ಕ್ರಿಕೆಟ್

ಆರ್​ಸಿಬಿ ಖರೀದಿಗೆ ಅಂತಿಮ ಸುತ್ತಿನಲ್ಲಿ ಎರಡೇ ಕಂಪನಿಗಳ ನಡುವೆ ಪೈಪೋಟಿ!

ನವದೆಹಲಿ: ಐಪಿಎಲ್​ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡದ ಖರೀದಿಗೆ ಅಂತಿಮ ಹಂತದ ರೇಸ್​ನಲ್ಲಿ 2 ಕಂಪನಿಗಳು ಮಾತ್ರ ಉಳಿದುಕೊಂಡಿವೆ. ಈ ಮುನ್ನ ಒಟ್ಟು 7 ಕಂಪನಿಗಳು ಆರ್​ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿಸಿದ್ದವು. ಆದರೆ ಈಗ ಅದರಲ್ಲಿ 5 ಕಂಪನಿಗಳು ಹಿಂದೆ ಸರಿದಿವೆ. ಆರ್​ಸಿಬಿ ತಂಡಕ್ಕೆ ಬಿಡ್​ ಸಲ್ಲಿಸುವ ಅಂತಿಮ ಗಡುವು ಸೋಮವಾರ ಸಂಜೆ 5 ಗಂಟೆಗೆ ಮುಕ್ತಾಯಗೊಂಡಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಸ್ವೀಡನ್​ನ ಖಾಸಗಿ ಷೇರು ಸಂಸ್ಥೆ "ಇಕ್ಯೂಟಿ' ಆರ್​ಸಿಬಿ ತಂಡದ ಖರೀದಿ ರೇಸ್​ನಲ್ಲಿ ಸದ್ಯ ಮುಂಚೂಣಿಯಲ್ಲಿದೆ. ಇಕ್ಯೂಟಿ 2ರಿಂದ 2.1 ಶತಕೋಟಿ ಡಾಲರ್​ (ಸುಮಾರು 18,463ರಿಂದ 19,386 ಕೋಟಿ ರೂ.) ಬಿಡ್​ ಸಲ್ಲಿಸಿದೆ ಎನ್ನಲಾಗಿದೆ. ಇನ್ನು ಮಣಿಪಾಲ್​ ಹಾಸ್ಪಿಟಲ್ಸ್​ನ ಡಾ. ರಂಜನ್​ ಪೈ ಅವರು ಅಮೆರಿಕದ ಖಾಸಗಿ ಷೇರು ಸಂಸ್ಥೆ ಕೆಕೆಆರ್​ ಮತ್ತು ಸಿಂಗಾಪುರದ ಪ್ರಮುಖ ಹೂಡಿಕೆ ಸಂಸ್ಥೆ ಟೆಮಾಸೆಕ್​ ಜತೆಗೂಡಿ ಆರ್​ಸಿಬಿ ಖರೀದಿ ರೇಸ್​ನಲ್ಲಿ ಉಳಿದಿದ್ದಾರೆ. ಆದರೆ ಅವರ ಬಿಡ್​ ಮೊತ್ತ ಬಹಿರಂಗವಾಗಿಲ್ಲ.

ಪ್ರತಿಷ್ಠಿತ ಫುಟ್​ಬಾಲ್​ ಕ್ಲಬ್​ ಯುನೈಟೆಡ್​ ಮ್ಯಾಂಚೆಸ್ಟರ್​ ಮಾಲೀಕ ಅವ್ರಾಮ್​ ಗ್ಲೇಜರ್​ ಅವರ ಲ್ಯಾನ್ಸರ್​ ಕ್ಯಾಪಿಟಲ್​ ಕಂಪನಿ ಈ ಮುನ್ನ ಗರಿಷ್ಠ 1.8 ಶತಕೋಟಿ ಡಾಲರ್​ (16,616 ಕೋಟಿ ರೂ.) ಬಿಡ್​ ಸಲ್ಲಿಸಿತ್ತು. ಆದರೆ ಅಂತಿಮ ಸುತ್ತಿನಲ್ಲಿ ಖರೀದಿ ರೇಸ್​ನಿಂದ ಹಿಂದೆ ಸರಿದಿದೆ ಎನ್ನಲಾಗಿದೆ.

ಸೀರಮ್​ ಇನ್​ಸ್ಟಿಟ್ಯೂಟ್​ ಒಡೆಯ ಅದರ್​ ಪೂನಾವಾಲಾ, ಪ್ರೇಮ್​ಜೀ ಇನ್​ವೆಸ್ಟ್​ ಮತ್ತು ಕ್ಯಾಪ್ರಿ ಗ್ಲೋಬಲ್​ ಸಂಸ್ಥೆ, ಟೈಮ್ಸ್​ ಗ್ರೂಪ್​ ಕೂಡ ಅಂತಿಮ ಹಂತದ ರೇಸ್​ನಿಂದ ಹಿಂದೆ ಸರದಿದ್ದಾರೆ.
ಅಕ್ಟೋಬರ್​ವರೆಗೆ ಅಂತಿಮ ಆಗಲ್ಲ!
ಯಾವುದೇ ಐಪಿಎಲ್​ ತಂಡದ ಮಾರಾಟ ಪ್ರಕ್ರಿಯೆಯನ್ನು ಬಿಸಿಸಿಐ ಒಪ್ಪಿಗೆ ಇಲ್ಲದೆ ಅಂತಿಮಗೊಳಿಸುವಂತಿಲ್ಲ. ಇದು ಬಿಸಿಸಿಐ ನಿಯಮಾವಳಿ ಆಗಿದೆ. ಹೀಗಾಗಿ ಆರ್​ಸಿಬಿ ತಂಡ ಹೊಸ ಮಾಲೀಕರ ಕೈಗೆ ಸೇರಲು ಅಕ್ಟೋಬರ್​ವರೆಗೆ ಕಾಯಬೇಕಾಗಬಹುದು ಎನ್ನಲಾಗಿದೆ. ಬಿಸಿಸಿಐ ಸದ್ಯ ಐಪಿಎಲ್​ 19ನೇ ಆವೃತ್ತಿಯಲ್ಲಿ ಬಿಜಿಯಾಗಿದೆ. ಹೀಗಾಗಿ ಈ ಸಮಯದಲ್ಲಿ ಬಿಸಿಸಿಐ ಯಾವುದೇ ತಂಡದ ಮಾಲೀಕತ್ವ ಬದಲಾವಣೆಗೆ ಸಮ್ಮತಿ ನೀಡುವ ಸಾಧ್ಯತೆ ಇಲ್ಲ. ಅಲ್ಲದೆ ಅಕ್ಟೋಬರ್​ನಲ್ಲಿ ನಡೆಯುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಷ್ಟೇ ಅಂತಿಮ ಒಪ್ಪಿಗೆ ನೀಡುವ ನಿರೀೆ ಇದೆ. ಆದರೆ ಆರ್​ಸಿಬಿ ಫ್ರಾಂಚೈಸಿ ಈ ಮೊದಲೇ ಘೋಷಿಸಿದಂತೆ, ಮಾರ್ಚ್​ 31ರೊಳಗೆ ಮಾರಾಟ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ.