19ನೇ ಆವೃತ್ತಿಯ ಐಪಿಎಲ್​ ಉದ್ಘಾಟನಾ ಪಂದ್ಯಕ್ಕೆ RCB ರೆಡಿ... ಹೊಸ ಪ್ಲೇಯಿಂಗ್ ಇಲೆವೆನ್ ಪಟ್ಟಿ ಲೀಕ್​! 
ಕ್ರಿಕೆಟ್

19ನೇ ಆವೃತ್ತಿಯ ಐಪಿಎಲ್​ ಉದ್ಘಾಟನಾ ಪಂದ್ಯಕ್ಕೆ RCB ರೆಡಿ... ಹೊಸ ಪ್ಲೇಯಿಂಗ್ ಇಲೆವೆನ್ ಪಟ್ಟಿ ಲೀಕ್​!

ಪ್ರಮುಖ ಮುಖ್ಯಾಂಶಗಳು

  • ಇಂಡಿಯನ್​ ಪ್ರೀಮಿಯರ್​ ಲೀಗ್​ ( ಐಪಿಎಲ್​ ) ಎಂಬ ಮಹಾ ಕ್ರಿಕೆಟ್​ ಉತ್ಸವ ಸಮೀಪಿಸುತ್ತಿದೆ
  • ಉದ್ಘಟನಾ ಪಂದ್ಯ ಮಾರ್ಚ್ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ
  • ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿ ಮತ್ತು ಎಸ್​ಆರ್​ಎಚ್ ತಂಡಗಳು ಕಾದಾಡಲಿವೆ​
RCB Predicted Playing XI : ಕ್ರೀಡಾಭಿಮಾನಿಗಳು ಎದುರು ನೋಡುತ್ತಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ ( ಐಪಿಎಲ್​ ) ಎಂಬ ಮಹಾ ಕ್ರಿಕೆಟ್​ ಉತ್ಸವ ಸಮೀಪಿಸುತ್ತಿದೆ. ಉದ್ಘಟನಾ ಪಂದ್ಯ ಮಾರ್ಚ್ 28 ರಂದು ನಡೆಯಲಿದೆ. ಅಂದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡವು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಿಸಲಿದೆ. 
ಕಳೆದ ಐಪಿಎಲ್​ ಸೀಸನ್​ನಲ್ಲಿ ಅಂದರೆ, 18ನೇ ಆವೃತ್ತಿಯಲ್ಲಿ ಆರ್​ಸಿಬಿ ತಂಡ ಚೊಚ್ಚಲ ಐಪಿಎಲ್​ ಟ್ರೋಫಿ ಮುಡಿಗೇರಿಸಿಕೊಂಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಸುಮಾರು ವರ್ಷಗಳ ಕಾಯುವಿಕೆ ಅಂತ್ಯವಾದ ಖುಷಿ ಹೆಚ್ಚು ದಿನ ಉಳಿಯಲೇ ಇಲ್ಲ. ಏಕೆಂದರೆ, ಜೂನ್​ 4ರಂದು ಆರ್​ಸಿಬಿ ಆಟಗಾರರ ವಿಜಯೋತ್ಸವಕ್ಕೂ ಮುನ್ನವೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಈ ಒಂದು ದುರಂತ ಟ್ರೋಫಿ ಗೆಲುವಿನ ಖುಷಿಯನ್ನು ಕಸಿದುಕೊಂಡಿತು.
ಈ ದುರಂತ ಘಟನೆ ನಡೆದ ದಿನದಿಂದ ಇಲ್ಲಿಯವರೆಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದೇ ಒಂದು ಪಂದ್ಯ ನಡೆದಿಲ್ಲ. ಹೀಗಾಗಿ ಚಿನ್ನಸ್ವಾಮಿ ಪಿಚ್ ಇದೀಗ ಹೊಸತನವನ್ನು ನೀಡಲಿದೆ. ಮಾರ್ಚ್​ 28ರಂದು ಹೈವೋಲ್ಟೇಜ್​ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ವೇದಿಕೆಯಾಗಲಿದೆ. ಉದ್ಘಾಟನಾ ಪಂದ್ಯಕ್ಕಾಗಿ ಆರ್‌ಸಿಬಿ ಪ್ರಮುಖ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಅಷ್ಟೇ ಅಲ್ಲ, ವೆಂಕಟೇಶ್ ಅಯ್ಯರ್, ಜಾಕೋಬ್ ಡಫಿ, ಜೋರ್ಡಾನ್ ಕಾಕ್ಸ್‌ರಂತಹ ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅಲ್ಲದೆ, ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್ ಮತ್ತು ಮಂಗೇಶ್ ಯಾದವ್‌ರಂತಹ ಯುವಕರ ಮೇಲೆ ಆರ್​ಸಿಬಿ ಹೂಡಿಕೆ ಮಾಡಿದೆ.
ಅಂದಹಾಗೆ, ಆರ್​ಸಿಬಿ ತಂಡದಲ್ಲಿ ಈ ಬಾರಿ ಕೆಲವು ಬದಲಾವಣೆಗಳಾಗಲಿವೆ. ಕಾರಣಾಂತರಗಳಿಂದ ಈ ಬಾರಿ ಯಶ್ ದಯಾಳ್ ಅವರನ್ನು ಕೈಬಿಡಲಾಗುತ್ತಿದೆ. ದಯಾಳ್​ ಬದಲಿಗೆ ಮಂಗೇಶ್ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ. ಮತ್ತೊಂದೆಡೆ, ರಜತ್ ಪಾಟಿದಾರ್ ನೇತೃತ್ವದ ತಂಡದಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ, ಸ್ಟಾರ್ ಬೌಲರ್ ಜೋಶ್ ಹ್ಯಾಜಲ್‌ವುಡ್ ಮೊದಲ ಕೆಲವು ಪಂದ್ಯಗಳಿಗೆ ಲಭ್ಯವಿರುವುದಿಲ್ಲ, ಆದ್ದರಿಂದ ಅವರ ಸ್ಥಾನದಲ್ಲಿ ಜಾಕೋಬ್ ಡಫಿ ಬರಲಿದ್ದಾರೆ. 
ಇನ್ನೂ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಆಗಮನದಿಂದ ತಂಡದ ಬೌಲಿಂಗ್ ಬಲಗೊಂಡಿದೆ. ಬ್ಯಾಟಿಂಗ್‌ನಲ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ ಮತ್ತು ಜಿತೇಶ್ ಶರ್ಮಾ ಅವರೊಂದಿಗೆ ಮಧ್ಯಮ ಕ್ರಮಾಂಕ ಬಲಿಷ್ಠವಾಗಿ ಕಾಣುತ್ತದೆ. ಟಿಮ್ ಡೇವಿಡ್ ಫಿನಿಷರ್ ಆಗಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಮತ್ತು ಕೃನಾಲ್ ಪಾಂಡ್ಯ ಹಾಗೂ ರೊಮಾರಿಯೋ ಶೆಫರ್ಡ್​ ಆಲ್‌ರೌಂಡರ್ ಆಗಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಆರ್​ಸಿಬಿ ತಂಡದ ಆಡುವ ಹನ್ನೊಂದರ ಬಳಗ ( ನಿರೀಕ್ಷಿತ ): ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ರೊಮಾರಿಯೋ ಶೆಫರ್ಡ್,​ ಜಾಕೋಬ್ ಡಫಿ ಹಾಗೂ ಸುಯಾಶ್ ಶರ್ಮಾ.
ಇಂಪ್ಯಾಕ್ಟ್​ ಪ್ಲೇಯರ್ಸ್​ : ವೆಂಕಟೇಶ್ ಅಯ್ಯರ್/ಜೇಕಬ್ ಬೆಥೆಲ್ (ಬ್ಯಾಟಿಂಗ್), ಮಂಗೇಶ್ ಯಾದವ್ (ಬೌಲಿಂಗ್).