ಹೆಸರು ಬದಲಾಗಲ್ಲ, ಆರ್ಸಿಬಿ ನಮಗೂ ಇಷ್ಟ: ಹೊಸ ಮಾಲೀಕ ಆರ್ಯಮಾನ್ ಬಿರ್ಲಾ ಸ್ಪಷ್ಟನೆ
ನವದೆಹಲಿ: ವಿಶ್ವದ ಶ್ರೀಮಂತ ಟಿ20 ಲೀಗ್ ಐಪಿಎಲ್ (IPL) ಟೂರ್ನಿಯ ಸತತ 2 ಬಾರಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈಗ ಹೊಸ ಮಾಲೀಕರ ಕೈಸೇರಿದೆ. ಇದರಿಂದ ತಂಡದ ಹೆಸರು ಬದಲಾಗುವುದೇ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಅನುಮಾನ ಮೂಡಿತ್ತು. ಈ ಬಗ್ಗೆ ತಂಡದ ಹೊಸ ಮಾಲೀಕ ಆರ್ಯಮಾನ್ ಬಿರ್ಲಾ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದು, ತಂಡದ ಹೆಸರು ಬದಲಾವಣೆಯ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
"ರಾಯಲ್ ಚಾಲೆಂಜರ್ಸ್ ಬೆಂಗಳೂರು- ಈ ಹೆಸರು ಬದಲಾಗುವುದಿಲ್ಲ. ಇದೊಂದು ದೊಡ್ಡ ಬ್ರ್ಯಾಂಡ್ ಮತ್ತು ನಮಗೂ ಈ ಹೆಸರು ಇಷ್ಟ. ತಂಡದ ಹೆಸರು ಬದಲಾಯಿಸುವ ಯಾವ ಯೋಚನೆಯೂ ನಮಗಿಲ್ಲ' ಎಂದು ಆರ್ಸಿಬಿ ಫ್ರಾಂಚೈಸಿಯ ಹೊಸ ಚೇರ್ಮನ್ ಆರ್ಯಮಾನ್ ಬಿರ್ಲಾ ಹೇಳಿದ್ದಾರೆ. ಆರ್ಸಿಬಿ ತಂಡ ಕಳೆದ ಮಾರ್ಚ್ನಲ್ಲಿ ಆದಿತ್ಯಾ ಬಿರ್ಲಾ ಗ್ರೂಪ್ ಒಳಗೊಂಡ ವಾಣಿಜ್ಯ ಒಕ್ಕೂಟಕ್ಕೆ 16,660 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿತ್ತು.
ಮಾಜಿ ಕ್ರಿಕೆಟಿಗರೂ ಆಗಿರುವ ಆರ್ಯಮಾನ್ ಬಿರ್ಲಾ ದೇಶೀಯ ಕ್ರಿಕೆಟ್ನಲ್ಲಿ ಮಧ್ಯಪ್ರದೇಶ ಪರ ಆಡಿದ್ದರು ಮತ್ತು ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರಾಗಿದ್ದರು. ಮೊದಲ ಆವೃತ್ತಿಯಿಂದಲೂ ಐಪಿಎಲ್ ಭಾಗವಾಗಿರುವ ಆರ್ಸಿಬಿ ತಂಡದ ಮಾಲೀಕತ್ವ 3ನೇ ಬಾರಿ ಬದಲಾಗುತ್ತಿದ್ದರೂ ತಂಡದ ಹೆಸರು ಮಾತ್ರ ಹಾಗೆಯೇ ಮುಂದುವರಿಯಲಿರುವುದು ಖಚಿತಗೊಂಡಿದೆ. ಆರ್ಸಿಬಿ ಮೊದಲಿಗೆ ಕರ್ನಾಟಕದ ಉದ್ಯಮಿ ವಿಜಯ್ ಮಲ್ಯ ಒಡೆತನದಲ್ಲಿತ್ತು. ನಂತರ ಬ್ರಿಟನ್ ಮೂಲದ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯ ಮಾಲೀಕತ್ವಕ್ಕೆ ಒಳಪಟ್ಟಿತ್ತು.