ಆರ್​ಸಿಬಿಗೆ ಇಂದು ಎಲ್​ಎಸ್​ಜಿ ಸವಾಲು 
ಕ್ರಿಕೆಟ್

ಆರ್​ಸಿಬಿಗೆ ಇಂದು ಎಲ್​ಎಸ್​ಜಿ ಸವಾಲು; ಒಂದು ವಾರ ವಿರಾಮದ ಬಳಿಕ ರಜತ್​ ಪಾಟೀದಾರ್​ ಪಡೆ ಮತ್ತೆ ಕಣಕ್ಕೆ

ಲಖನೌ: ಹಾಲಿ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ (RCB) ಐಪಿಎಲ್ (IPL) 19ನೇ ಆವೃತ್ತಿಯಲ್ಲಿ ಒಂದು ವಾರದ ವಿರಾಮದ ಬಳಿಕ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದು, ಗೆಲುವಿನ ಲಯಕ್ಕೂ ಮರಳುವ ಹಂಬಲದಲ್ಲಿದೆ. ಆರ್​ಸಿಬಿ ತಂಡ ಏಕನಾ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ಹಾಲಿ ಆವೃತ್ತಿಯ 50ನೇ ಪಂದ್ಯದಲ್ಲಿ ಲಖನೌ ಸೂಪರ್​ಜೈಂಟ್ಸ್​ (LSG) ತಂಡವನ್ನು ಎದುರಿಸಲಿದೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಮುಖಾಮುಖಿಯಲ್ಲಿ ಸುಲಭವಾಗಿ ಗೆದ್ದಿದ್ದ ರಜತ್​ ಪಾಟೀದಾರ್​ ಪಡೆ ಈ ಬಾರಿಯೂ ಅದೇ ಫಲಿತಾಂಶ ಪುನರಾವರ್ತಿಸುವ ವಿಶ್ವಾಸದಲ್ಲಿದೆ.
ಕಳೆದ ವಾರ (ಏ.30) ಅಹಮದಾಬಾದ್​ನಲ್ಲಿ ಗುಜರಾತ್​ ಟೈಟಾನ್ಸ್​ ಎದುರು ಆಡಿದ ಕೊನೇ ಪಂದ್ಯದಲ್ಲಿ ಸೋತಿದ್ದ ಆರ್​ಸಿಬಿ, ಲಖನೌದಲ್ಲಿ ಗೆಲುವಿನ ಹಾದಿಗೆ ಮರಳಬೇಕಿದೆ. ಗುಜರಾತ್​ ಎದುರು ಬ್ಯಾಟಿಂಗ್​ ವೈಫಲ್ಯದಿಂದ 155 ರನ್​ಗಳ ಸಾಧಾರಣ ಮೊತ್ತಕ್ಕೆ ಕುಸಿದರೂ, 6 ವಿಕೆಟ್​ ಕಬಳಿಸಿ ಬೌಲಿಂಗ್​ನಲ್ಲಿ ಉತ್ತಮ ಪ್ರತಿರೋಧವನ್ನೇ ತೋರಿತ್ತು. ಇದೀಗ ಆರ್​ಸಿಬಿ ಇನ್ನೊಂದು ಗೆಲುವು ಸಾಧಿಸಿದರೆ ಪ್ಲೇಆಫ್​ ​ಗೆ ಒಂದು ಕಾಲು ಇಡಬಹುದಾಗಿದೆ.
ಲಖನೌ ತಂಡ ಕಳೆದ 6 ಪಂದ್ಯಗಳಲ್ಲೂ ಸೋತಿದ್ದು, ಕೊನೇ ಗೆಲುವು ಕಂಡು 28 ದಿನಗಳೇ ಕಳೆದಿವೆ. ಕಡೇ ಪಂದ್ಯದಲ್ಲಿ ಮುಂಬೈ ಎದುರು 228 ರನ್​ ಪೇರಿಸಿಯೂ ಅದನ್ನು ರಕ್ಷಿಸಿಕೊಳ್ಳಲು ಲಖನೌ ವಿಫಲವಾಗಿತ್ತು. ಇನ್ನು ತವರಿನ ಏಕನಾದಲ್ಲಿ ಆಡಿರುವ ಕಳೆದ 4 ಪಂದ್ಯಗಳಲ್ಲೂ ಸೋಲು ಅನುಭವಿಸಿದೆ. ಪ್ರಮುಖ ಬ್ಯಾಟರ್​ಗಳಾದ ಮಿಚೆಲ್​ ಮಾರ್ಷ್​, ಏಡನ್​ ಮಾರ್ಕ್ರಮ್​, ನಿಕೋಲಸ್​ ಪೂರನ್​, ರಿಷಭ್​ ಪಂತ್​ ಸ್ಥಿರ ನಿರ್ವಹಣೆ ತೋರಲು ವಿಲರಾಗಿದ್ದಾರೆ. ಭುವನೇಶ್ವರ್​-ಹ್ಯಾಸಲ್​ವುಡ್​ರಂಥ ಅನುಭವಿ ವೇಗಿಗಳನ್ನು ಹೊಂದಿರುವ ಆರ್​ಸಿಬಿ ಬೌಲಿಂಗ್​ ವಿಭಾಗ ಲಖನೌಗೆ ಇನ್ನಷ್ಟು ಕಠಿಣ ಸವಾಲೊಡ್ಡಲಿದೆ.

ಲಖನೌ ಪರ ಯುವ ವೇಗಿಗಳಾದ ಪ್ರಿನ್ಸ್​ ಯಾದವ್​ (13) ಮತ್ತು ಮೊಹ್ಸಿನ್​ ಖಾನ್​ (10) ಗಮನಸೆಳೆದಿದ್ದರೂ, ಅನುಭವಿ ವೇಗಿ ಮೊಹಮದ್​ ಶಮಿ ಉತ್ತಮ ಆರಂಭದ ಬಳಿಕ ದುಬಾರಿ ಆಗುತ್ತಿದ್ದಾರೆ.
ಸಾಲ್ಟ್​ ಗೈರಿನ ಹಿನ್ನಡೆ
ಗುಜರಾತ್​ ಎದುರು ಒಂದು ಹಂತದಲ್ಲಿ 2 ವಿಕೆಟ್​ಗೆ 79 ರನ್​ ಗಳಿಸಿ ಸುಸ್ಥಿತಿಯಲ್ಲೇ ಇದ್ದ ಆರ್​ಸಿಬಿ ನಂತರ ತಂಡದ ಮೊತ್ತ 96 ರನ್​ ಆಗುವಷ್ಟರಲ್ಲಿ ಮತ್ತೆ 3 ವಿಕೆಟ್​ ಕಳೆದುಕೊಂಡು ದಿಢೀರ್​ ಕುಸಿದಿತ್ತು. ಮಧ್ಯಮ ಕ್ರಮಾಂಕದ ವೈಫಲ್ಯ ಒಂದೆಡೆ ಆದರೆ, ಫಿಲ್​ ಸಾಲ್ಟ್​ ಕೈಬೆರಳಿನ ಗಾಯದಿಂದಾಗಿ ಟೂರ್ನಿಯಿಂದ ಬಹುತೇಕ ಹೊರಬಿದ್ದಿರುವುದು ಕೂಡ ಹಿನ್ನಡೆ ತಂದಿದೆ. ಅವರ ಸ್ಥಾನದಲ್ಲಿ ಕಳೆದ 3 ಪಂದ್ಯ ಆಡಿರುವ ಜೇಕಬ್​ ಬೆಥೆಲ್​ 20ರ ಗಡಿ ದಾಟಿಲ್ಲ. ಇದರಿಂದ ಆರ್​ಸಿಬಿ ಆರಂಭಿಕನ ಸ್ಥಾನಕ್ಕೆ ಇನ್ನೋರ್ವ ಆಯ್ಕೆಯಾಗಿರುವ ಇಂಗ್ಲೆಂಡ್​ನವರೇ ಆದ ಜೋರ್ಡನ್​ ಕಾಕ್ಸ್​ ಕಣಕ್ಕಿಳಿಸಿದರೂ ಅಚ್ಚರಿ ಇಲ್ಲ. ವಿರಾಟ್​ ಕೊಹ್ಲಿ (379), ದೇವದತ್​ ಪಡಿಕ್ಕಲ್​ (282) ಮತ್ತು ನಾಯಕ ರಜತ್​ ಪಾಟೀದಾರ್​ (257) ಈಗಾಗಲೆ ರನ್​ಗಳಿಕೆಯಲ್ಲಿ ಮುಂದಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ಪ್ರಮುಖವಾಗಿ ವಿಕೆಟ್​ ಕೀಪರ್​ ಜಿತೇಶ್​ ಶರ್ಮ (63) ವೈಫಲ್ಯ ಹಿನ್ನಡೆ ತಂದಿದೆ.
*ಪ್ಲೇಆಫ್​ ಲೆಕ್ಕಾಚಾರ
ಆರ್​ಸಿಬಿ ತಂಡ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 6 ಜಯ, 3 ಸೋಲಿನೊಂದಿಗೆ ಪ್ಲೇಆಫ್​ ಲೆಕ್ಕಾಚಾರದಲ್ಲಿ ಮುಂಚೂಣಿಯಲ್ಲೇ ಇದೆ. ಬಲಿಷ್ಠ ರನ್​ರೇಟ್​ ಕೂಡ ಆರ್​ಸಿಬಿಗೆ ಬಲ ತುಂಬಿದೆ. ಉಳಿದ 5ರಲ್ಲಿ 2ರಲ್ಲಿ ಗೆದ್ದರೂ ಆರ್​ಸಿಬಿ ಪ್ಲೇಆಫ್​ಗೇರಲಿದೆ. ಉಳಿದ 3&4 ಪಂದ್ಯ ಗೆದ್ದರೆ ಅಗ್ರ 2ರೊಳಗೆ ಸ್ಥಾನ ಪಡೆಯುವ ಅವಕಾಶವೂ ಇದೆ. ಮತ್ತೊಂದೆಡೆ ಲಖನೌ ತಂಡ ಇದುವರೆಗೆ ಆಡಿದ 9 ಪಂದ್ಯಗಳಲ್ಲಿ 7 ಸೋಲು, 2 ಜಯ ಕಂಡು ಪ್ಲೇಆ್​ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಈ ಪಂದ್ಯದಲ್ಲೂ ಸೋತರೆ ರಿಷಭ್​ ಪಂತ್​ ಅಧಿಕೃತವಾಗಿ ಗೇಟ್​ಪಾಸ್​ ಪಡೆಯಲಿದೆ. ಜತೆಗೆ ಅಂಕಪಟ್ಟಿಯ ಕೊನೇ ಸ್ಥಾನವನ್ನು ತಪ್ಪಿಸಿಕೊಳ್ಳುವುದು ಕೂಡ ಲಖನೌಗೆ ಕಠಿಣ ಸವಾಲೆನಿಸಿದೆ.
ಮುಖಾಮುಖಿ: 7
ಆರ್​ಸಿಬಿ: 5
ಲಖನೌ: 2
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​
78: ವಿರಾಟ್​ ಕೊಹ್ಲಿ ಇನ್ನು 78 ರನ್​ ಗಳಿಸಿದರೆ ಟಿ20 ಕ್ರಿಕೆಟ್​ನಲ್ಲಿ 14 ಸಾವಿರ ರನ್​ ಪೂರೈಸಿದ ಮೊದಲ ಭಾರತೀಯ ಮತ್ತು ವಿಶ್ವದ 6ನೇ ಬ್ಯಾಟರ್​ ಎನಿಸಲಿದ್ದಾರೆ. ಕ್ರಿಸ್​ ಗೇಲ್​ (15,562), ಕೈರಾನ್​ ಪೊಲ್ಲಾರ್ಡ್​ (14,482), ಅಲೆಕ್ಸ್​ ಹ್ಯಾಲ್ಸ್​ (14,449), ಡೇವಿಡ್​ ವಾರ್ನರ್​ (14,284) ಮತ್ತು ಜೋಸ್​ ಬಟ್ಲರ್​ (14,180) ಹಿಂದಿನ ಸಾಧಕರು.
*200: ಭುವನೇಶ್ವರ್​ ಕುಮಾರ್​ ಐಪಿಎಲ್​ನಲ್ಲಿ 200 ಪಂದ್ಯ ಆಡಿದ 12ನೇ ಆಟಗಾರ ಎನಿಸಲಿದ್ದಾರೆ. ಅವರು ಆರ್​ಸಿಬಿ, ಪುಣೆ ವಾರಿಯರ್ಸ್​ ಮತ್ತು ಸನ್​ರೈಸರ್ಸ್​ ಪರ ಈ ಪಂದ್ಯಗಳನ್ನು ಆಡಿದ್ದಾರೆ.