LSG ವಿರುದ್ಧದ ಪಂದ್ಯಕ್ಕೂ ಮುನ್ನವೇ RCBಗೆ ಶಾಕ್​: ಮುಂಬೈನಿಂದ ಬೆಂಗಳೂರಿಗೆ ಹಿಂತಿರುಗದ ಕೊಹ್ಲಿ, ಏನಾಯ್ತು? Virat Kohli  
ಕ್ರಿಕೆಟ್

LSG ವಿರುದ್ಧದ ಪಂದ್ಯಕ್ಕೂ ಮುನ್ನವೇ RCBಗೆ ಶಾಕ್​: ಮುಂಬೈನಿಂದ ಬೆಂಗಳೂರಿಗೆ ಹಿಂತಿರುಗದ ಕೊಹ್ಲಿ, ಏನಾಯ್ತು? Virat Kohli

ಪ್ರಮುಖ ಮುಖ್ಯಾಂಶಗಳು

  • ಜ್ವರ ಮತ್ತು ಕಾಲು ನೋವಿನ ಕಾರಣ ನಾಳೆ ಎಲ್​ಎಸ್​ಜಿ ವಿರುದ್ಧದ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯ ಸಾಧ್ಯತೆ
  • ಮುಂಬೈ ಪಂದ್ಯದ ನಂತರ ಬೆಂಗಳೂರಿಗೆ ಮರಳಿದ ಆರ್‌ಸಿಬಿ ಆಟಗಾರರ ತಂಡದಲ್ಲಿ ಕಾಣಿಸಿಕೊಳ್ಳದ ವಿರಾಟ್ ಕೊಹ್ಲಿ
  • ಆರ್‌ಸಿಬಿ ಫ್ರಾಂಚೈಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಲ್ಲ ಆಟಗಾರರಿದ್ದರೂ ಕೊಹ್ಲಿ ಅನುಪಸ್ಥಿತಿ ಎದ್ದು ಕಾಣುತ್ತಿದೆ
  • ಕೊಹ್ಲಿ ಆರೋಗ್ಯ ಅಥವಾ ನಾಳಿನ ಪಂದ್ಯದಿಂದ ಹೊರಗುಳಿಯುವ ಬಗ್ಗೆ ಆರ್‌ಸಿಬಿ ಫ್ರಾಂಚೈಸಿಯಿಂದ ಅಧಿಕೃತ ಸ್ಪಷ್ಟನೆ ಬಂದಿಲ್ಲ
Virat Kohli : ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ (IPL) ಅದ್ಭುತ ಪ್ರದರ್ಶನದೊಂದಿಗೆ ಮತ್ತೊಮ್ಮೆ ಟ್ರೋಫಿ ಗೆಲ್ಲುವತ್ತ ಹೆಜ್ಜೆ ಹಾಕಿರುವ ಹಾಲಿ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡಕ್ಕೆ ಬೇಸರದ ಸಂಗತಿಯೊಂದಿಗೆ ಹೊರಬಿದ್ದಿದೆ. ಅದೇನೆಂದರೆ, ತಂಡದ ಲೆಜೆಂಡರಿ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ನಾಳೆ ಲಖನೌ ಸೂಪರ್​ ಜೈಂಟ್ಸ್​ (LSG) ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ ಎಂಬ ವರದಿ ಇದೆ.
ಜ್ವರದಿಂದ ಹಾಗೂ ಕಾಲು ನೋವಿನಿಂದ ಬಳಲುತ್ತಿರುವ ವಿರಾಟ್​ ಕೊಹ್ಲಿಗೆ ವಿಶ್ರಾಂತಿ ಅಗತ್ಯ ಇರುವುದರಿಂದ ನಾಳಿನ ಪಂದ್ಯಕ್ಕೆ ಗೈರಾಗುವ ಸಾಧ್ಯತೆ ಇದೆ. ಈ ಹಿಂದಿನ ಪಂದ್ಯ ಮುಂಬೈ ಇಂಡಿಯನ್ಸ್​ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ನಾಳೆ ತವರು ಮೈದಾನ ಬೆಂಗಳೂರಿನಲ್ಲಿ ಎಲ್​ಎಸ್​ಜಿ ವಿರುದ್ಧ ಪಂದ್ಯ ನಡೆಯಲಿದೆ. ಶಾಕಿಂಗ್​ ಸಂಗತಿ ಏನೆಂದರೆ, ಕೊಹ್ಲಿ ಬೆಂಗಳೂರಿಗೆ ಆಗಮಿಸಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮುಂಬೈನಿಂದ ತಮ್ಮ ಆಟಗಾರರು ತವರಿಗೆ ಮರಳಿದ ವಿಡಿಯೋವನ್ನು ಆರ್​ಸಿಬಿ ಫ್ರಾಂಚೈಸಿ ಹಂಚಿಕೊಂಡಿದೆ. ಆ ವಿಡಿಯೋದಲ್ಲಿ ಕೊಹ್ಲಿ ಬಿಟ್ಟು ಉಳಿದ ಎಲ್ಲ ಆಟಗಾರು ಕಾಣಿಸಿಕೊಂಡಿದ್ದಾರೆ. ಹೀಗಾಗಿ ನಾಳಿನ ಪಂದ್ಯದಲ್ಲಿ ಕೊಹ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಆರ್​ಸಿಬಿ ಫ್ರಾಂಚೈಸಿಯಿಂದ ಯಾವುದೇ ಆಧಿಕೃತ ಹೇಳಿಕೆ ಬಂದಿಲ್ಲ. ನಾಳಿನ ಪಂದ್ಯದಲ್ಲಿ ಕೊಹ್ಲಿ ಆಡುತ್ತಾರಾ? ಅಥವಾ ಇಲ್ಲವಾ? ಅನ್ನೋ ಪ್ರಶ್ನೆಗಳಿಗೆ ಉತ್ತರ ಬೇಕಾದರೆ, ನಾಳಿನ ಪಂದ್ಯದವರೆಗೂ ಕಾಯಬೇಕಾಗುತ್ತದೆ.
ಅಂದಹಾಗೆ, ಏಪ್ರಿಲ್​ 12ರ ಭಾನುವಾರದಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 2026ರ 20ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB) ತಂಡ ಮುಂಬೈ ಇಂಡಿಯನ್ಸ್​ ವಿರುದ್ಧ ಗೆದ್ದು ಬೀಗಿತು. ಈ ಪಂದ್ಯದ ನಡುವೆ ದಾಖಲೆಗಳ ಸರದಾರ, ಚೇಸ್​ ಮಾಸ್ಟರ್​, ರನ್​ ಮೆಷಿನ್​ ಹಾಗೂ ಕ್ರಿಕೆಟ್​ ಲೋಕದ ಕಿಂಗ್​ ಎಂದೇ ಖ್ಯಾತಿಯಾಗಿರುವ ವಿರಾಟ್​ ಕೊಹ್ಲಿ ಕೋಪಗೊಂಡು ತಮ್ಮ ಹೆಲ್ಮೆಟ್​ ಹಾಗೂ ಗ್ಲೌಸ್​ ಎಸೆದು ವಿಚಿತ್ರವಾಗಿ ವರ್ತಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಮುಂಬೈ ಪಂದ್ಯದಲ್ಲಿ ಕೊಹ್ಲಿ ಅವರು ಅರ್ಧಶತಕ ಬಾರಿಸಿ ತಮ್ಮ ತಂಡಕ್ಕೆ ನೆರವಾದರು. ಕೇವಲ 38 ಎಸೆತಗಳಲ್ಲಿ 50 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿದರು. ತಮ್ಮ ಸ್ಥಿರ ಬ್ಯಾಟಿಂಗ್ ಮೂಲಕ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕಿಂಗ್, ಮುಂದಿನ ಚೆಂಡನ್ನು ದೊಡ್ಡ ಹೊಡೆತವನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದರು. ಹಾರ್ದಿಕ್ ಪಾಂಡ್ಯ ಎಸೆದ ಫುಲ್ ಟಾಸ್ ಚೆಂಡನ್ನು ಹೊಡೆಯಲು ಪ್ರಯತ್ನಿಸುವಾಗ, ಕೊಹ್ಲಿಯ ಬ್ಯಾಟ್ ಅವರ ಕೈಯಲ್ಲಿ ತಿರುಗಿತು. ಇದರಿಂದ ಟೈಮಿಂಗ್​ ಮಿಸ್​ ಆಯಿತು. ಇದರ ಪರಿಣಾಮವಾಗಿ, ಚೆಂಡು ನೇರವಾಗಿ ಲಾಂಗ್-ಆನ್‌ನಲ್ಲಿದ್ದ ಸೂರ್ಯಕುಮಾರ್ ಯಾದವ್ ಅವರ ಕೈಗೆ ಹೋಯಿತು.
ಉತ್ತಮ ಫಾರ್ಮ್‌ನಲ್ಲಿದ್ದ ಕೊಹ್ಲಿ, ದೊಡ್ಡ ಸ್ಕೋರ್‌ ಮಾಡುವ ಗುರಿಯೊಂದಿಗೆ ಆಡುವಾಗ ಅನಿರೀಕ್ಷಿತವಾಗಿ ಔಟ್​ ಆಗಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ, ತಮ್ಮ ತಂಡವು ಕೂಡ ಬೃಹತ್​ ಕಲೆಹಾಕುವ ಹಾದಿಯಲ್ಲಿ ಸಾಗುತ್ತಿತ್ತು. ಆರಂಭದಲ್ಲಿ ಬಿರುಸಿನ ಆಟವಾಡಿದ ಕೊಹ್ಲಿ ನಂತರದಲ್ಲಿ ಸಾಕಷ್ಟು ಬಾಲ್​ಗಳನ್ನು ತೆಗೆದುಕೊಂಡರು. ಹೇಗಾದರೂ ಮಾಡಿ ಗೇರ್​ ಬದಲಿಸಿ, ಸ್ಫೋಟಕ ಇನ್ನಿಂಗ್ಸ್​ ಆಡಬೇಕು ಅನ್ನುವಷ್ಟರಲ್ಲಿ ಔಟ್​ ಆಗಿದ್ದು ಕೊಹ್ಲಿಗೆ ತುಂಬಾ ಬೇಸರ ಮೂಡಿಸಿತು. ನನ್ನಿಂದ ಸ್ಫೋಟಕ ಆಟವಾಡಲು ಸಾಧ್ಯವಾಗಲಿಲ್ಲವಲ್ಲ ನಿರಾಸೆ ಮೂಡಿತು. ಹೀಗಾಗಿ, ಪೆವಿಲಿಯನ್ ಕಡೆಗೆ ನಡೆಯುತ್ತಿದ್ದಾಗ, ಕೊಹ್ಲಿ ತಮ್ಮ ಕೈಗವಸುಗಳನ್ನು ಹಾಗೂ ಹೆಲ್ಮೆಟ್ ಅನ್ನು ನೆಲದ ಮೇಲೆ ಎಸೆದರು ಅಸಮಾಧಾನ ಹೊರಹಾಕಿದರು. ಫಿನಿಷರ್ ಪಾತ್ರದಲ್ಲಿ ತಮ್ಮ ಇನ್ನಿಂಗ್ಸ್ ಅನ್ನು ಸೂಕ್ತವಾಗಿ ಕೊನೆಗೊಳಿಸಲು ಸಾಧ್ಯವಾಗದ ಬೇಸರ ಕೊಹ್ಲಿ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸಿತು.

ಫೀಲ್ಡಿಂಗ್​ ಮಾಡದ ಕೊಹ್ಲಿ

ಮುಂಬೈ ಚೇಸಿಂಗ್ ವೇಳೆ ಕೊಹ್ಲಿ ಅವರು ಫೀಲ್ಡಿಂಗ್​ಗೆ ಇಳಿಯಲಿಲ್ಲ. ಕಿಂಗ್​ ನೋಡಲೆಂದೇ ಗಂಟೇಗಟ್ಟಲೇ ಕಾದು ಕೂರುವ ಅಭಿಮಾನಿಗಳಿಗೆ ಇದು ಗೊಂದಲ ಮೂಡಿಸಿತು. ಯಾವ ಕಾರಣಕ್ಕೆ ಕೊಹ್ಲಿ ಮೈದಾನಕ್ಕಿಳಿಯಲಿಲ್ಲ. ಬ್ಯಾಟಿಂಗ್ ಚೆನ್ನಾಗಿ ಮಾಡಿದ್ದಾರೆ. ಹೀಗಿರುವಾಗ, ಅವರು ಪೆವಿಲಿಯನ್​ನಲ್ಲಿ ಕುಳಿತು ತಂಡಕ್ಕೆ ಬೆಂಬಲಿಸುವಂತದ್ದು ಏನಾಯಿತು? ಎಂಬ ಪ್ರಶ್ನೆಗಳು ತಲೆಯಲ್ಲಿ ನಿರಂತರವಾಗಿ ಓಡಿತು. ಆದರೆ, ಅದಕ್ಕೆ ಉತ್ತರವೂ ಸಿಕ್ಕಿತು. ಅದೇನೆಂದರೆ, ಕೊಹ್ಲಿಗೆ ಕಾಡುತ್ತಿದ್ದ ಕಣ್ಣಿನ ಸೋಂಕು ಮತ್ತು ವಿಪರೀತ ಜ್ವರ. ಅಲ್ಲದೆ, ತಮ್ಮ ಬ್ಯಾಟಿಂಗ್​ ಮುಗಿಸಿ, ಪೆವಲಿಯನ್​ಗೆ ಹೋಗುವಾಗ ಕೊಹ್ಲಿ ನಡೆಯುವ ರೀತಿ ಸಹಜವಾಗಿರಲಿಲ್ಲ. ತುಂಬಾ ಕಷ್ಟಪಟ್ಟು ಮೆಟ್ಟಿಲುಗಳನ್ನು ಏರಿದರು. ಆ ಬಳಿಕ ಕೊಹ್ಲಿ ಕಾಲು ನೋವಿನಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಹೊರಬಿತ್ತು.
ವರದಿಗಳ ಪ್ರಕಾರ, ವಿರಾಟ್ ಕಳೆದೆರೆಡು ದಿನಗಳಿಂದ ತೀವ್ರ ಜ್ವರ ಮತ್ತು ಕಣ್ಣು ಸೋಂಕಿನಿಂದ ಬಳಲುತ್ತಿದ್ದಾರೆ. ಸದ್ಯ ವೈದ್ಯಕೀಯ ತಂಡವು ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ. ಒಂದು ವೇಳೆ ಸಂಪೂರ್ಣ ಫಿಟ್​ ಆದರೆ, ಎಲ್​ಎಸ್​ಜಿ ವಿರುದ್ಧದ ಪಂದ್ಯಕ್ಕೆ ಕೊಹ್ಲಿ ಲಭ್ಯವಾಗಲಿದ್ದಾರೆ. ಒಂದು ವೇಳೆ ವಿಶ್ರಾಂತಿಯ ಅಗತ್ಯಬಿದ್ದರೆ ನಾಳಿನ ಪಂದ್ಯವನ್ನು ಕೊಹ್ಲಿ ತಪ್ಪಿಸಿಕೊಳ್ಳಲಿದ್ದಾರೆ. ಸಂಪೂರ್ಣ ಚೇತರಿಸಿಕೊಂಡು ಕೊಹ್ಲಿ ಆಡಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ, (ಏಜೆನ್ಸೀಸ್​).