ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡವೇ ಫೇವರಿಟ್; ಹೀಗಿವೆ ಕಾರಣಗಳು...
ಅಹಮದಾಬಾದ್: ಐಪಿಎಲ್ (IPL) ಫೈನಲ್ನಲ್ಲಿ ಮೊದಲ 3 ಬಾರಿ ಎಡವಿದ ಬಳಿಕ ಕಳೆದ ವರ್ಷ ಕೊನೆಗೂ ಪ್ರಶಸ್ತಿ ಗೆದ್ದು ಬೀಗಿದ್ದ ಆರ್ಸಿಬಿ (RCB), ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ವಿರಾಟ್ ಕೊಹ್ಲಿ, ಕನ್ನಡಿಗ ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್, ವೆಂಕಟೇಶ್ ಅಯ್ಯರ್, ಫಿಲ್ ಸಾಲ್ಟ್, ಟಿಮ್ ಡೇವಿಡ್ ಒಳಗೊಂಡ ಬಲಿಷ್ಠ ಬ್ಯಾಟಿಂಗ್ ವಿಭಾಗದೊಂದಿಗೆ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಸಲ್ವುಡ್, ರಸಿಕ್ ದಾರ್ ಬಿಗಿ ಬೌಲಿಂಗ್ ವಿಭಾಗ ಮತ್ತು ಕೃನಾಲ್ ಪಾಂಡ್ಯ ಅವರ ಆಲ್ರೌಂಡ್ ಆಟ ಆರ್ಸಿಬಿ ತಂಡವನ್ನು ಬಲಿಷ್ಠವಾಗಿ ರೂಪಿಸಿದೆ. ಇದರಿಂದ ಆರ್ಸಿಬಿ ಒಬ್ಬ ಅಥವಾ ಇಬ್ಬರು ಆಟಗಾರರನ್ನು ನೆಚ್ಚಿಕೊಂಡ ತಂಡವಾಗಿಲ್ಲ ಮತ್ತು ತಂಡದಲ್ಲಿ ದೊಡ್ಡ ದೌರ್ಬಲ್ಯವೂ ಕಾಣಿಸುತ್ತಿಲ್ಲ.
ಅತ್ತ ಗುಜರಾತ್ ಕೂಡ ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಹೊಂದಿದ್ದರೂ, ಅದರ ಮಧ್ಯಮ ಕ್ರಮಾಂಕ ದುರ್ಬಲವಾಗಿರುವುದು ಹಿನ್ನಡೆ ಎನಿಸಿದೆ. ಗುಜರಾತ್ ಅಗ್ರ ಮೂವರಾದ ಗಿಲ್, ಸುದರ್ಶನ್, ಬಟ್ಲರ್ರನ್ನೇ ಹೆಚ್ಚು ಅವಲಂಬಿಸಿರುವ ತಂಡವಾಗಿದೆ. ಬೌಲಿಂಗ್ನಲ್ಲೂ 2ನೇ ಸ್ಪಿನ್ನರ್ ಕೊರತೆ ಇದೆ. ಅಲ್ಲದೆ ಗುಜರಾತ್ ಪವರ್ಪ್ಲೇನಲ್ಲಿ ದೊಡ್ಡ ಮಟ್ಟದ ರನ್ ಕಸಿದಿಲ್ಲ. ಇತರ ತಂಡಗಳು 11-12ರ ಸರಾಸರಿಯಲ್ಲಿ ರನ್ ಗಳಿಸಿದ್ದರೆ, ಗುಜರಾತ್ 9ರ ಸರಾಸರಿಯಲ್ಲಿ ರನ್ ಗಳಿಸಿದೆ. ಆದರೆ ಗಿಲ್-ಸುದರ್ಶನ್ ಜೋಡಿಯ ಸ್ಥಿರ ನಿರ್ವಹಣೆ ಗುಜರಾತ್ಗೆ ಬಲ ತುಂಬಿದೆ. ಫೈನಲ್ನಲ್ಲಿ ಗುಜರಾತ್ನ ಅಗ್ರ ಕ್ರಮಾಂಕದ ನಿರ್ವಹಣೆಯೇ ಫಲಿತಾಂಶ ನಿರ್ಧಾರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ ಇದೆ. ಗುಜರಾತ್ಗೆ ತವರಿನಲ್ಲೇ ಫೈನಲ್ ಆಡಲಿರುವುದು ಎಲ್ಲಕ್ಕಿಂತ ದೊಡ್ಡ ಅನುಕೂಲವೆನಿಸಿದೆ. ಆದರೆ ಆರ್ಸಿಬಿ ಕಳೆದ ವರ್ಷ ಇಲ್ಲೇ ಪ್ರಶಸ್ತಿ ಗೆದ್ದಿತ್ತು ಎಂಬುದನ್ನು ಮರೆಯಬಾರದು.
ಹಾಲಿ ಆವೃತ್ತಿಯಲ್ಲಿ ಆರ್ಸಿಬಿ ತಂಡ ಗುಜರಾತ್ ಎದುರಿನ 3 ಮುಖಾಮುಖಿಗಳಲ್ಲಿ 2 ಜಯ, 1 ಸೋಲಿನೊಂದಿಗೆ ಮೇಲುಗೈ ಸಾಧಿಸಿದೆ. ಲೀಗ್ನಲ್ಲಿ 2 ಬಾರಿ ಎದುರಾದಾಗ ಎರಡೂ ತಂಡಗಳು ತಲಾ ಸೋಲು-ಗೆಲುವು ಕಂಡಿದ್ದವು. ಏ.18ರ ಬೆಂಗಳೂರಿನ ಪಂದ್ಯದಲ್ಲಿ ಆರ್ಸಿಬಿ 5 ವಿಕೆಟ್ಗಳಿಂದ ಗೆದ್ದರೆ, ಏ.30ರ ಅಹಮದಾಬಾದ್ ಮುಖಾಮುಖಿಯಲ್ಲಿ ಗುಜರಾತ್ 4 ವಿಕೆಟ್ಗಳಿಂದ ಜಯಿಸಿತ್ತು. ಮೇ 26ಕ್ಕೆ ಧರ್ಮಶಾಲಾದಲ್ಲಿ ನಡೆದ ಮೊದಲ ಕ್ವಾಲಿಫೈಯರ್ನಲ್ಲಿ ಆರ್ಸಿಬಿ 254 ರನ್ಗಳ ಬೃಹತ್ ಮೊತ್ತ ಪೇರಿಸಿ, 92 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು.