ದೆಹಲಿ ಬೀದಿಯಲ್ಲಿ ಗಲ್ಲಿ ಕ್ರಿಕೆಟ್​ ಆಡಿದ ಆರ್​ಸಿಬಿ ಹುಲಿಗಳು: ಟಿಮ್​ ಡೇವಿಡ್​, ಶೆಫರ್ಡ್​ ಸರಳತೆಗೆ ಫ್ಯಾನ್ಸ್​ ಫಿದಾ! RCB  
ಕ್ರಿಕೆಟ್

ದೆಹಲಿ ಬೀದಿಯಲ್ಲಿ ಗಲ್ಲಿ ಕ್ರಿಕೆಟ್​ ಆಡಿದ ಆರ್​ಸಿಬಿ ಹುಲಿಗಳು: ಟಿಮ್​ ಡೇವಿಡ್​, ಶೆಫರ್ಡ್​ ಸರಳತೆಗೆ ಫ್ಯಾನ್ಸ್​ ಫಿದಾ! RCB

ಪ್ರಮುಖ ಮುಖ್ಯಾಂಶಗಳು

  • ವಿರಾಮದ ಸಮಯದಲ್ಲಿ ಆರ್‌ಸಿಬಿ ಆಟಗಾರರು ದೆಹಲಿಯ ಬೀದಿಗಳನ್ನು ಸುತ್ತಾಡಿ ಬಂದಿದ್ದಾರೆ
  • ವಸಂತ್ ಕುಂಜ್ ಪ್ರದೇಶದಲ್ಲಿ ಸುತ್ತಾಡಿದ ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್
  • ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಎಲ್ಲರ ಗಮನ ಸೆಳೆದ ಆರ್​ಸಿಬಿ ಆಟಗಾರರು
  • ಸ್ಟಾರ್ ಆಟಗಾರರು ಸಾಮಾನ್ಯರಂತೆ ಕ್ರಿಕೆಟ್ ಆಡುತ್ತಿರುವುದನ್ನು ಕಂಡು ಅಭಿಮಾನಿಗಳು ಫುಲ್​ ಖುಷ್​
ನವದೆಹಲಿ : ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡದ ಸ್ಟಾರ್ ಆಟಗಾರರು ರಾಷ್ಟ್ರ ರಾಜಧಾನಿ ದೆಹಲಿಯ ಬೀದಿಗಳಲ್ಲಿ ಸಖತ್​ ಸದ್ದು ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಲೀಗ್​ ಪಂದ್ಯಕ್ಕಾಗಿ ಆರ್​ಸಿಬಿ ತಂಡ ದೆಹಲಿಯಲ್ಲಿ ಬೀಡುಬಿಟ್ಟಿದೆ. ಇಂದು ರೋಚಕ ಪಂದ್ಯ ನಡೆಯಲಿದೆ. ವಿರಾಮದ ಸಮಯದಲ್ಲಿ ಆರ್‌ಸಿಬಿ ಆಟಗಾರರು ದೆಹಲಿಯ ಬೀದಿಗಳನ್ನು ಸುತ್ತಾಡಿ ಬಂದಿದ್ದಾರೆ. ವಸಂತ್ ಕುಂಜ್ ಪ್ರದೇಶದಲ್ಲಿ ಸುತ್ತಾಡುವಾಗ ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್, ಕೆಲ ಮಕ್ಕಳು ಗಲ್ಲಿ ಕ್ರಿಕೆಟ್ ಆಡುವುದನ್ನು ನೋಡಿ, ಅವರೊಂದಿಗೆ ತಾವು ಕೂಡ​ ಆಡಿದ್ದಾರೆ.
ಹೌದು, ದೆಹಲಿಯ ಬೀದಿಗಳಲ್ಲಿ ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್ ಅವರು ಸ್ಥಳೀಯ ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಇಬ್ಬರು ವಿದೇಶಿ ಆಟಗಾರರು ಮಕ್ಕಳ ಜೊತೆ ಕೆಲಕಾಲ ಹರಟೆ ಹೊಡೆದು, ನಂತರ ಬ್ಯಾಟಿಂಗ್ ಮಾಡುವ ಮೂಲಕ ಸಂಭ್ರಮಿಸಿದರು. ದೆಹಲಿಯ ರಸ್ತೆಗಳಲ್ಲಿ ಸ್ಟಾರ್ ಆಟಗಾರರು ಸಾಮಾನ್ಯರಂತೆ ಕ್ರಿಕೆಟ್ ಆಡುತ್ತಿರುವುದನ್ನು ಕಂಡ ಸ್ಥಳೀಯರು, ತಮ್ಮ ಫೋನ್‌ಗಳಲ್ಲಿ ಈ ದೃಶ್ಯಗಳನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿದೇಶಿ ಆಟಗಾರರು ಭಾರತದ ಬೀದಿಗಳಲ್ಲಿ ಕ್ರಿಕೆಟ್ ಆಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ 2025ರ ಐಪಿಎಲ್ ಆವೃತ್ತಿಯಲ್ಲಿ ಜೋಸ್ ಬಟ್ಲರ್ ಅವರು ಮುಂಬೈನ ರಸ್ತೆಗಳಲ್ಲಿ ಒಬ್ಬರೇ ಸುತ್ತಾಡಿ, ಅಲ್ಲಿನ ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಸುದ್ದಿಯಾಗಿದ್ದರು. ಈಗ ಅದೇ ಮಾದರಿಯಲ್ಲಿ ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್ ದೆಹಲಿಯಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ನೀಡಿದ್ದಾರೆ. ಮೈದಾನದ ಹೊರಗೂ ಈ ಆಟಗಾರರು ತೋರುತ್ತಿರುವ ಇಂತಹ ಸರಳತೆ ಮತ್ತು ಕ್ರೀಡಾಭಿಮಾನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರಸಕ್ತ ಐಪಿಎಲ್​ ಸೀಸನ್​ ವಿಷಯಕ್ಕೆ ಬಂದರೆ, ಆರ್‌ಸಿಬಿ ತಂಡವು ಇಂದು ವಿರಾಟ್​ ಕೊಹ್ಲಿ ಅವರ ತವರು ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಸದೆಬಡಿಯಲು ಸಿದ್ಧವಾಗಿದೆ. ಈ ಋತುವಿನಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಸೋಲಿಸುವ ಮೂಲಕ ದೆಹಲಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು. ಕಳೆದ ವರ್ಷವೂ ಡೆಲ್ಲಿ ಕ್ಯಾಪಿಟಲ್ಸ್​, ಆರ್‌ಸಿಬಿಯನ್ನು ತವರಿನಲ್ಲಿ ಸೋಲಿಸಿತು. ಅದಾದ ನಂತರ, ದೆಹಲಿಯಲ್ಲಿ ನಡೆದ ಪಂದ್ಯವನ್ನು ಆರ್‌ಸಿಬಿ ಗೆದ್ದಿತು. ಈ ವರ್ಷವೂ ಅದೇ ದೃಶ್ಯ ಪುನರಾವರ್ತನೆಯಾಗುತ್ತದೆಯೇ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷವೂ ಉತ್ತಮ ಪ್ರದರ್ಶನ ನೀಡುತ್ತಿದೆ. ಏಳು ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಐದು ಪಂದ್ಯಗಳನ್ನು ಗೆದ್ದು ಹತ್ತು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನೊಂದಿಗೆ ಆರಂಭವಾದರೂ ನಂತರ ಸರಣಿ ಸೋಲುಗಳನ್ನು ಅನುಭವಿಸಿದೆ. ತಮ್ಮ ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, ಆರು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿಎ. ಕೊಹ್ಲಿಯ ತವರು ಮೈದಾನದಲ್ಲಿ ಡೆಲ್ಲಿ ಮತ್ತೆ ಗೆಲ್ಲುತ್ತದೆಯೇ ಎಂದು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).