- ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್
- ಅನುಭವಿ ಬೌಲರ್ಗಳ ಬಾಲ್ಗೆ ಸಿಕ್ಸರ್, ಬೌಂಡರಿಗಳ ಸುರಿಮಳೆ ಹರಿಸಿದ ವೈಭವ್
Vaibhav Sooryavanshi: ಮೊನ್ನೆಯಷ್ಟೇ ಅಸ್ಸಾಂನ ಗುವಾಹಟಿಯಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ಆರ್ಸಿಬಿ ತನ್ನ ಮೊದಲ ಸೋಲುಂಡಿತು. ಸತತ ಗೆಲುವಿನಿಂದ ಖುಷಿಯಲ್ಲಿದ್ದ ರಜತ್ ಪಾಟಿದಾರ್ ಪಡೆಯ ಸೋಲಿಗೆ ಮುಖ್ಯ ಕಾರಣವೇ ಆರ್ಆರ್ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ.
ಈ ಪಂದ್ಯದಲ್ಲಿ ಆರ್ಸಿಬಿಯ ಎಲ್ಲಾ ಬೌಲರ್ಗಳನ್ನು ಚೆಂಡಾಡಿದ ವೈಭವ್, ಕೇವಲ 25 ಎಸೆತಗಳಲ್ಲಿ 78 ರನ್ ಸಿಡಿಸಿದರು. ಮೈದಾನದ ತುಂಬೆಲ್ಲ ಬೌಂಡರಿ ಮತ್ತು ಸಿಕ್ಸರ್ಗಳನ್ನು ಬಾರಿಸಿದ ಸೂರ್ಯವಂಶಿ, ಅಂತಾರಾಷ್ಟ್ರೀಯ ಹಾಗೂ ಅನುಭವಿ ಬೌಲರ್ಗಳಿಗೆ ನೀರು ಕುಡಿಸಿದ್ದು, ಒಂದು ನಿಮಿಷ ಕ್ರಿಕೆಟ್ ಪ್ರಿಯರು ಮತ್ತು ನೋಡುಗರ ಹುಬ್ಬೇರಿಸಿತು. ಜೋಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್ರಂತಹ ಹೆಚ್ಚಿನ ಅನುಭವವುಳ್ಳ ವೇಗಿಗಳ ಬೌಲಿಂಗ್ಗೆ ಸಿಕ್ಸರ್ಗಳನ್ನು ಹೊಡೆದ ವೈಭವ್ ಆಟಕ್ಕೆ ಸ್ವತಃ ಭುವಿ ಶಾಕ್ ಆಗಿದ್ದಾರೆ. ಈ ಬಗ್ಗೆ ಖುದ್ದಾಗಿ ಭುವನೇಶ್ವರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೇವಲ 15 ವರ್ಷಕ್ಕೆ ಆತ ತುಂಬಾ ಪ್ರಬುದ್ಧನಿದ್ದಾನೆ. ತನ್ನ ಗುರಿಯ ಬಗ್ಗೆ ಸ್ಪಷ್ಟತೆ ಇದೆ. ಸರಿಯಾದ ಶಾಟ್ಗಳನ್ನೇ ಆಡುತ್ತಿದ್ದಾನೆ. ವೈಭವ್ ಬ್ಯಾಟಿಂಗ್ ಮಾಡುತ್ತಿರುವ ರೀತಿ ನೋಡಿದರೆ, ನಾವೆಲ್ಲ ಮನ್ನಣೆ ನೀಡಬೇಕು ಮತ್ತು ಆವೃತ್ತಿಯಲ್ಲಿ ಬಹಳ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾನೆ. ಆದ್ದರಿಂದ ಅವನು ಎಲ್ಲಾ ಮನ್ನಣೆಗೂ ಅರ್ಹ. ಇದೊಂದು ಟಿ20 ಆಟ. ನನಗಂತು ಆತ ನಮ್ಮ ಬೌಲಿಂಗ್ಗೆ ಆ ರೀತಿ ಎಲ್ಲ ಬಾರಿಸುತ್ತಾನೆ ಎಂಬ ಅರಿವೇ ಇರಲಿಲ್ಲ ಎಂದು ಭುವಿ ಹೇಳಿದ್ದಾರೆ,(ಏಜೆನ್ಸೀಸ್).