ಆರ್ಸಿಬಿಗೆ ಇಂದು ಕೆಕೆಆರ್ ಚಾಲೆಂಜ್; ರಾಯ್ಪುರದಲ್ಲೇ ಪ್ಲೇಆಫ್ ಒಲಿಸಿಕೊಳ್ಳುವ ತವಕ
ರಾಯ್ಪುರ: ಹೊಸ ತವರಿನ ಮೊದಲ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ಸಂಭ್ರಮದಲ್ಲಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bengaluru) ಐಪಿಎಲ್ 19ನೇ ಆವೃತ್ತಿಯಲ್ಲಿ (IPL-2026) ಗೆಲುವಿನ ಓಟ ವಿಸ್ತರಿಸುವ ತವಕದಲ್ಲಿದೆ. ಆರ್ಸಿಬಿ ತಂಡ ತನ್ನ 2ನೇ ತವರು ಮೈದಾನವಾದ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಬುಧವಾರ ಕೋಲ್ಕತ ನೈಟ್ರೈಡರ್ಸ್ ತಂಡವನ್ನು ಎದುರಿಸಲಿದ್ದು, ಗೆದ್ದರೆ ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ. ಇದು ರಜತ್ ಪಾಟೀದಾರ್ ಪಡೆ ಆತಿಥ್ಯದ 7ನೇ ಹಾಗೂ ಕೊನೇ ಲೀಗ್ ಪಂದ್ಯವಾಗಿದೆ.
ಆರ್ಸಿಬಿ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದರೂ, ಕಳೆದ ಕೆಲ ಪಂದ್ಯಗಳಿಂದ ಬ್ಯಾಟಿಂಗ್ ವಿಭಾಗ ಕೈಕೊಡುತ್ತಿದೆ. ಮುಂಬೈ ವಿರುದ್ಧದ ಕಳೆದ ಪಂದ್ಯದಲ್ಲಂತೂ ಎಲ್ಲ ಪ್ರಮುಖ ಬ್ಯಾಟರ್ಗಳೂ ಕೈಕೊಟ್ಟಿದ್ದರು. ಕೃನಾಲ್ ಪಾಂಡ್ಯ ಅರ್ಧಶತಕ ಮತ್ತು ಭುವನೇಶ್ವರ್ ನಿರ್ಣಾಯಕ ಸಿಕ್ಸರ್ ಸಿಡಿಸದಿದ್ದರೆ ಆರ್ಸಿಬಿ 166 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಚೇಸಿಂಗ್ ಮಾಡುವಲ್ಲಿ ಎಡವುತಿತ್ತು. ಜಿತೇಶ್ ಶರ್ಮ, ಜೇಕಬ್ ಬೆಥೆಲ್ ಈಗಾಗಲೆ ರನ್ ಗಳಿಸಲು ಪರದಾಡುತ್ತಿದ್ದರೆ, ನಾಯಕ ರಜತ್ ಪಾಟೀದಾರ್ ಕೂಡ ಇದೇ ಸಾಲಿಗೆ ಸೇರಿರುವ ಲಕ್ಷ ಕಾಣಿಸಿದೆ. ಕಳೆದ 6 ಇನಿಂಗ್ಸ್ಗಳಲ್ಲಿ ಅವರು 1 ಅರ್ಧಶತಕವನ್ನಷ್ಟೇ ಗಳಿಸಿದ್ದಾರೆ.
ಆರಂಭಿಕ 6 ಪಂದ್ಯಗಳಲ್ಲಿ ಗೆಲುವು ಕಾಣದ ಕೆಕೆಆರ್ ಇದೀಗ ಸತತ 4 ಜಯದೊಂದಿಗೆ ಪುಟಿದೆದ್ದಿದ್ದು, ಪ್ರಮುಖವಾಗಿ ಬೌಲರ್ಗಳ ಬಲಿಷ್ಠ ನಿರ್ವಹಣೆಯೇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ 4 ಪಂದ್ಯಗಳಲ್ಲೂ ಎದುರಾಳಿಯನ್ನು 170ರ ಗಡಿ ದಾಟಲು ಬಿಡದ ಕೆಕೆಆರ್ ಬೌಲಿಂಗ್ ವಿಭಾಗ ರಾಯ್ಪುರದ ದೊಡ್ಡ ಮೈದಾನದಲ್ಲಿ ಆರ್ಸಿಬಿ ಬ್ಯಾಟರ್ಗಳಿಗೆ ಇನ್ನಷ್ಟು ಕಠಿಣ ಸವಾಲೊಡ್ಡಲಿದೆ. ದೇಶೀಯ ವೇಗಿಗಳ ಜತೆಗೆ ವರುಣ್ ಚಕ್ರವರ್ತಿ&ಸುನೀಲ್ ನಾರಾಯಣ್ ಸ್ಪಿನ್ ಜೋಡಿ ಕೆಕೆಆರ್ಗೆ ಬಲ ತುಂಬಿದೆ. ಆರ್ಸಿಬಿ ಕೂಡ ಬಲಿಷ್ಠ ಬೌಲಿಂಗ್ ಹೊಂದಿರುವುದರಿಂದ ಇದು ಬೌಲರ್ಗಳ ಪಂದ್ಯವಾಗುವ ನಿರೀಕ್ಷೆ ಇದೆ.
ಆರ್ಸಿಬಿ: ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 7 ಜಯದೊಂದಿಗೆ 14 ಅಂಕ ಕಲೆಹಾಕಿರುವ ಆರ್ಸಿಬಿ, ಉಳಿದ 3 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಪ್ಲೇಆಫ್ ಸ್ಥಾನ ಒಲಿಸಿಕೊಳ್ಳಬಹುದು. ಉತ್ತಮ ರನ್ರೇಟ್ ಕೂಡ ಆರ್ಸಿಬಿಗೆ ಪ್ಲಸ್ ಪಾಯಿಂಟ್ ಆಗಿದೆ. ಎದುರಾಳಿ ನೆಲದ ಕೊನೇ 2 ಪಂದ್ಯಗಳಲ್ಲಿ ಆರ್ಸಿಬಿ, ಪಂಜಾಬ್ (ಮೇ 17) ಮತ್ತು ಸನ್ರೈಸರ್ಸ್ (ಮೇ 22) ವಿರುದ್ಧ ಆಡಲಿದೆ. ಇನ್ನೆರಡು ಪಂದ್ಯ ಗೆದ್ದರೆ ಅಗ್ರ 2ರಲ್ಲಿ ಸ್ಥಾನ ಉಳಿಸಿಕೊಳ್ಳಬಹುದಾದ ಅವಕಾಶವೂ ಇದೆ.
ಕೆಕೆಆರ್: ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಗೆದ್ದಿದ್ದರೂ, ಕೆಕೆಆರ್ಗೆ ಪ್ಲೇಆಫ್ ಆಸೆ ಜೀವಂತವಿದೆ. ಉಳಿದ 4ರಲ್ಲೂ ಗೆದ್ದರೆ ಕೆಕೆಆರ್ ಪ್ಲೇಆ್ಗೇರುವುದು ಖಚಿತ. ಈ ಪಂದ್ಯದ ನಂತರ ಕೊನೇ 3 ಪಂದ್ಯಗಳನ್ನು ತನ್ನ ತವರಾದ ಈಡನ್ ಗಾರ್ಡನ್ಸ್ನಲ್ಲೇ ಗುಜರಾತ್ (ಮೇ 16), ಮುಂಬೈ (ಮೇ 20) ಮತ್ತು ಡೆಲ್ಲಿ (ಮೇ 24) ವಿರುದ್ಧ ಆಡುವ ಅನುಕೂಲವೂ ಇದೆ. ಆದರೆ ರನ್ರೇಟ್ ಹಿನ್ನಡೆಯಿಂದಾಗಿ ಉಳಿದ 4ರಲ್ಲಿ ಒಂದರಲ್ಲಿ ಸೋತರೂ, ಅವಕಾಶ ತಪ್ಪಬಹುದು.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
*14: ವಿರಾಟ್ ಕೊಹ್ಲಿ ಇನ್ನು 78 ರನ್ ಗಳಿಸಿದರೆ ಟಿ20 ಕ್ರಿಕೆಟ್ನಲ್ಲಿ 14 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಮತ್ತು ವಿಶ್ವದ 6ನೇ ಬ್ಯಾಟರ್ ಎನಿಸಲಿದ್ದಾರೆ.