ಸಿಎಸ್​ಕೆ ಅಭಿಮಾನಿಗಳ ಆ ಮಾತು ಕೇಳಿ ಕಣ್ಣಂಚಲ್ಲಿ ತುಂಬಿದ ನೀರು: ಮೈದಾನದಲ್ಲೇ ಭಾವುಕರಾದ ಜಡ್ಡು! Ravindra Jadeja  
ಕ್ರಿಕೆಟ್

ಸಿಎಸ್​ಕೆ ಅಭಿಮಾನಿಗಳ ಆ ಮಾತು ಕೇಳಿ ಕಣ್ಣಂಚಲ್ಲಿ ತುಂಬಿದ ನೀರು: ಮೈದಾನದಲ್ಲೇ ಭಾವುಕರಾದ ಜಡ್ಡು! Ravindra Jadeja

ಪ್ರಮುಖ ಮುಖ್ಯಾಂಶಗಳು

  • ಎಂ.ಎಸ್. ಧೋನಿ, ರವೀಂದ್ರ ಜಡೇಜಾ ಹಾಗೂ ಸುರೇಶ್ ರೈನಾ ಒಂದು ಕಾಲದಲ್ಲಿ ಸಿಎಸ್​ಕೆ​ ತಂಡದ ಆಧಾರ ಸ್ತಂಭಗಳಾಗಿದ್ದರು
  • ರೈನಾ ಅವರು ತಮ್ಮ ಟಿ20 ವೃತ್ತಿಜೀವನಕ್ಕೆ ವಿದಾಯ ಹೇಳಿ ತುಂಬಾ ವರ್ಷಗಳೇ ಕಳೆದಿ
  • ಧೋನಿ ಇನ್ನೂ ಸಿಎಸ್‌ಕೆಯಲ್ಲೇ ಇದಾರೆ ಆದರೆ ಜಡೇಜಾ 12 ವರ್ಷಗಳ ಬಳಿಕ ಮತ್ತೆ ಆರ್​ಆರ್​ ತಂಡ ಸೇರಿದ್ದಾರೆ
  • ನಿನ್ನೆ ಸಿಎಸ್​ಕೆ ವಿರುದ್ಧದ ಪಂದ್ಯದ ವೇಳೆ ಜಡೇಜಾ ಹಾಗೂ ಅಭಿಮಾನಿಗಳ ನಡುವೆ ಕೊಂಚ ಭಾವುಕ ಸನ್ನಿವೇಶ ಸೃಷ್ಟಿಯಾಯಿತು
Ravindra Jadeja : ಕೂಲ್​ ಕ್ಯಾಪ್ಟನ್​ ಖ್ಯಾತಿಯ ಎಂ.ಎಸ್. ಧೋನಿ, ರವೀಂದ್ರ ಜಡೇಜಾ ಹಾಗೂ ಸುರೇಶ್ ರೈನಾ ಒಂದು ಕಾಲದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಧಾರ ಸ್ತಂಭಗಳಾಗಿದ್ದರು ಅನ್ನೋದು ನಿಮಗೆಲ್ಲರಿಗೂ ಗೊತ್ತೇ ಇದೆ. ರೈನಾ ಅವರು ತಮ್ಮ ಟಿ20 ವೃತ್ತಿಜೀವನಕ್ಕೆ ವಿದಾಯ ಹೇಳಿ ತುಂಬಾ ವರ್ಷಗಳೇ ಕಳೆದಿವೆ. ಉಳಿದಂತೆ ಧೋನಿ ಮತ್ತು ಜಡೇಜಾ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿದ್ದಾರೆ. ಧೋನಿ ಇನ್ನೂ ಸಿಎಸ್‌ಕೆಯಲ್ಲೇ ಇದಾರೆ. ಆದರೆ, ಕಳೆದ 12 ವರ್ಷಗಳಿಂದ ಸಿಎಸ್‌ಕೆ ತಂಡದ ಅವಿಭಾಜ್ಯ ಅಂಗವಾಗಿದ್ದ ರವೀಂದ್ರ ಜಡೇಜಾ, ಈ ವರ್ಷ ತಮ್ಮ ಹಳೆಯ ತಂಡ ರಾಜಸ್ಥಾನ ರಾಯಲ್ಸ್ (ಆರ್‌ಆರ್) ಪರ ಮತ್ತೆ ಕಣಕ್ಕೆ ಇಳಿದಿದ್ದಾರೆ. ಇದು ಸಿಎಸ್​ಕೆ ಅಭಿಮಾನಿಗಳಲ್ಲಿ ಕೊಂಚ ಭಾವುಕ ಸನ್ನಿವೇಶಕ್ಕೆ ಕಾರಣವಾಗಿದೆ.
ಸೋಮವಾರ (ಮಾರ್ಚ್​ 30) ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಜಸ್ಥಾನ ರಾಯಲ್ಸ್ (ಆರ್‌ಆರ್) ನಡುವಿನ ಪಂದ್ಯದಲ್ಲಿ, ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುವಾಗ ಜಡೇಜಾ ಅವರು ತುಂಬಾ ಭಾವುಕರಾದರು. ಅಕ್ಷರಶಃ ಜಡೇಜಾ ಅವರು ಕಣ್ಣುಗಳು ಒದ್ದೆಯಾದವು. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜಡೇಜಾ ತಮ್ಮ ಹಿಂದಿನ ತಂಡ ಸಂಕಷ್ಟದಲ್ಲಿ ಇರುವುದನ್ನು ನೋಡಿ ಭಾವುಕರಾದರು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
19ನೇ ಸೀಸನ್‌ ಆರಂಭಕ್ಕೂ ಮುನ್ನವೇ ಐಪಿಎಲ್ ಇತಿಹಾಸದಲ್ಲಿ ಅತಿದೊಡ್ಡ ವ್ಯಾಪಾರ ಒಪ್ಪಂದವನ್ನು ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಾಡಿಕೊಳ್ಳಲಾಯಿತು. ರವೀಂದ್ರ ಜಡೇಜಾ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಎರಡೂ ತಂಡಗಳ ನಡುವೆ ವಿನಿಮಯ ಮಾಡಿಕೊಳ್ಳಲಾಯಿತು. ಈ ವಹಿವಾಟಿನ ನಂತರ, ಎರಡೂ ತಂಡಗಳ ನಡುವಿನ ಮೊದಲ ಪಂದ್ಯ ನಿನ್ನೆ ನಡೆಯಿತು. ಈ ಪಂದ್ಯದ ಸಮಯದಲ್ಲಿ, ಸಿಎಸ್‌ಕೆ ಅಭಿಮಾನಿಗಳ ಪ್ರೀತಿಯನ್ನು ನೋಡಿ ಜಡೇಜಾ ಭಾವುಕರಾದರು.
ಈ ಪಂದ್ಯದಲ್ಲಿ, ರವೀಂದ್ರ ಜಡೇಜಾ ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆದು ಚೆನ್ನೈ ತಂಡಕ್ಕೆ ದೊಡ್ಡ ಹೊಡೆತ ನೀಡಿದರು. ವಿಕೆಟ್​ ಪಡೆದು ಬಂದೂಕು ಸಿಡಿದಂತೆ ಮಾಡಿದ ಜಡೇಜಾ ಅವರ ವಿಶಿಷ್ಟ ಆಚರಣೆ ಎಲ್ಲರ ಗಮನ ಸೆಳೆಯಿತು. ಜಡ್ಡು ಅವರು ಸರ್ಫರಾಜ್ ಖಾನ್ ಮತ್ತು ಶಿವಂ ದುಬೆ ಅವರ ಪ್ರಮುಖ ವಿಕೆಟ್‌ಗಳನ್ನು ಪಡೆದರು. ಈ ಪಂದ್ಯದಲ್ಲಿ ಜಡೇಜಾ ಮೂರು ಓವರ್‌ಗಳನ್ನು ಬೌಲಿಂಗ್ ಮಾಡಿದರು. ತಮ್ಮ ಬೌಲಿಂಗ್​ ಮುಗಿದ ಬಳಿಕ ಜಡ್ಡು ಬೌಂಡರಿಯ ಬಳಿ ಫೀಲ್ಡಿಂಗ್‌ ಹೋದ ತಕ್ಷಣ, ಸಿಎಸ್‌ಕೆ ಅಭಿಮಾನಿಗಳು 'ಜಡ್ಡು ಜಡ್ಡು' ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು.
ಅಭಿಮಾನಿಗಳ ಪ್ರೀತಿಯಿಂದ ತುಂಬಿಹೋದ ಜಡ್ಡು ಭಾವುಕರಾದರು. ಈ ವೇಳೆ ಅವರ ಕಣ್ಣಂಚಲ್ಲಿ ನೀರು ತುಂಬಿಕೊಂಡಿತು. ಈ ಭಾವನಾತ್ಮಕ ಸನ್ನಿವೇಶಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೆರ್ಸಿ ಬದಲಾಯಿಸಿದ ನಂತರವೂ, ಜಡ್ಡು ಮೇಲಿನ ಚೆನ್ನೈ ಅಭಿಮಾನಿಗಳ ಪ್ರೀತಿ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಈ ಒಂದು ಭಾವುಕ ಸನ್ನಿವೇಶವೇ ಸಾಕ್ಷಿಯಾಗಿದೆ, (ಏಜೆನ್ಸೀಸ್​).