ರಣಜಿ ಟ್ರೋಫಿ: 11 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ಕರ್ನಾಟಕ ಪ್ರವೇಶ ಖಾತ್ರಿ
ಲಖನೌ: ಕರ್ನಾಟಕ (karnataka) ತಂಡ ಪ್ರತಿಷ್ಠಿತ ರಣಜಿ ಟ್ರೋಫಿ (Ranji Trophy) ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ 11 ವರ್ಷಗಳ ಬಳಿಕ ಫೈನಲ್ಗೇರುವುದು ಖಾತ್ರಿಯಾಗಿದೆ. ಉತ್ತರಾಖಂಡ (uttarakhand) ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರಿ ಮುನ್ನಡೆ ಸಂಪಾದಿಸುವ ಮೂಲಕ ದೇವದತ್ ಪಡಿಕ್ಕಲ್ ಬಳಗ ಈ ಸಾಧನೆ ಮಾಡಿದೆ. ಇನ್ನು ಐದನೇ ಹಾಗೂ ಅಂತಿಮ ದಿನವಾದ ಗುರುವಾರ ಪಂದ್ಯ ಡ್ರಾಗೊಂಡರೂ ಕರ್ನಾಟಕ ತಂಡ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಡಲಿದೆ.
ಏಕನಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 4ನೇ ದಿನವಾದ ಬುಧವಾರ 5 ವಿಕೆಟ್ಗೆ 149 ರನ್ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಉತ್ತರಾಖಂಡ ತಂಡ, ಭೋಜನ ವಿರಾಮಕ್ಕೆ ಮೊದಲೇ 88.5 ಓವರ್ಗಳಲ್ಲಿ 233 ರನ್ಗಳಿಗೆ ಆಲೌಟ್ ಆಯಿತು. ಇದರಿಂದ ಮೊದಲ ಇನಿಂಗ್ಸ್ನಲ್ಲಿ 503 ರನ್ಗಳ ಬೃಹತ್ ಮುನ್ನಡೆ ಸಂಪಾದಿಸಿದ ಕರ್ನಾಟಕ ತಂಡಕ್ಕೆ ಎದುರಾಳಿ ಮೇಲೆ ಫಾಲೋ ಆನ್ ಹೇರುವ ಅವಕಾಶವಿದ್ದರೂ, ಬೌಲರ್ಗಳಿಗೆ ವಿಶ್ರಾಂತಿ ನೀಡುವ ದೃಷ್ಟಿಯಿಂದ ಮರಳಿ ಬ್ಯಾಟಿಂಗ್ಗೆ ಇಳಿಯಿತು. 2ನೇ ಸರದಿಯಲ್ಲಿ ಬ್ಯಾಟಿಂಗ್ ಕ್ರಮಾಂಕದ ಪ್ರಯೋಗ ಮತ್ತು ಬಿರುಸಿನ ಆಟ ಪ್ರದರ್ಶಿಸಿದ ಕರ್ನಾಟಕ ತಂಡ ದಿನದಂತ್ಯಕ್ಕೆ 63.5 ಓವರ್ಗಳಲ್ಲಿ 6 ವಿಕೆಟ್ಗೆ 299 ರನ್ ಕಲೆಹಾಕಿದೆ. ಇದರೊಂದಿಗೆ ಕರ್ನಾಟಕ ತಂಡ ಒಟ್ಟಾರೆ 802 ರನ್ ಮುನ್ನಡೆ ಸಾಧಿಸಿ, ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಕರ್ನಾಟಕ ಡಿಕ್ಲೇರ್ ಘೋಷಿಸುವುದೇ ಅಥವಾ ಅಂತಿಮ ದಿನವೂ ಬ್ಯಾಟಿಂಗ್ ಮುಂದುವರಿಸುವುದೇ ಎಂಬುದು ಸ್ಪಷ್ಟವಿಲ್ಲ.
ಮೊದಲ ಇನಿಂಗ್ಸ್ನಲ್ಲಿ 135 ರನ್ ಸಿಡಿಸಿ ಮಿಂಚಿದ್ದ ಯುವ ಎಡಗೈ ಬ್ಯಾಟರ್ ಆರ್. ಸ್ಮರಣ್ (127 ರನ್, 149 ಎಸೆತ, 12 ಬೌಂಡರಿ, 3 ಸಿಕ್ಸರ್) ಎರಡನೇ ಸರದಿಯಲ್ಲಿ ಮತ್ತೆ ಉತ್ತರಾಖಂಡ ಬೌಲರ್ಗಳನ್ನು ಸತಾಯಿಸಿ ಶತಕ ಸಿಡಿಸಿದರು. ವಿಕೆಟ್ ಕೀಪರ್&ಬ್ಯಾಟರ್ ಕೃತಿಕ್ ಕೃಷ್ಣಗೆ ಹೆಚ್ಚಿನ ಬ್ಯಾಟಿಂಗ್ ಅಭ್ಯಾಸ ಒದಗಿಸುವ ದೃಷ್ಟಿಯಿಂದ ಕರ್ನಾಟಕ ಈ ಬಾರಿ ಮಯಾಂಕ್ ಅಗರ್ವಾಲ್ (21) ಜತೆ ಆರಂಭಿಕನಾಗಿ ಕಣಕ್ಕಿಳಿಸಿತು. ಮಯಾಂಕ್-ಕೃತಿಕ್ ಮೊದಲ ವಿಕೆಟ್ಗೆ 39 ರನ್ ಸೇರಿಸಿ ಬೇರ್ಪಟ್ಟರು. ಬೆನ್ನಲ್ಲೇ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಶ್ರೇಯಸ್ ಗೋಪಾಲ್ (0) ಮತ್ತು ಅನುಭವಿ ಕರುಣ್ ನಾಯರ್ (8) ನಿರಾಸೆ ಮೂಡಿಸಿದರು. ಕೃತಿಕ್ ಕೃಷ್ಣ (52) ಅರ್ಧಶತಕ ಸಿಡಿಸಿ ನಿರ್ಗಮಿಸಿದರು. ಆಗ ಜತೆಗೂಡಿದ ಸ್ಮರಣ್ ಮತ್ತು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್, 5ನೇ ವಿಕೆಟ್ಗೆ 166 ಎಸೆತಗಳಲ್ಲಿ 168 ರನ್ ಜತೆಯಾಟವಾಡಿದರು. ಸ್ಮರಣ್ 125 ಎಸೆತಗಳಲ್ಲಿ ಶತಕ ಪೂರೈಸಿ ದಿನದ ಕೊನೆಯಲ್ಲಿ ಔಟಾದರೆ, ಕೆಎಲ್ ರಾಹುಲ್ (70*ರನ್, 67 ಎಸೆತ, 3 ಬೌಂಡರಿ, 5 ಸಿಕ್ಸರ್) ಸತತ 3ನೇ ಶತಕದತ್ತ ದೃಷ್ಟಿ ನೆಟ್ಟಿದ್ದಾರೆ.
ಕರ್ನಾಟಕ: 736 ಮತ್ತು 63.5 ಓವರ್ಗಳಲ್ಲಿ 6 ವಿಕೆಟ್ಗೆ 299 (ಮಯಾಂಕ್ 21, ಕೃತಿಕ್ ಕೃಷ್ಣ 52, ಶ್ರೇಯಸ್ 0, ಕರುಣ್ 8, ಸ್ಮರಣ್ 127, ಕೆಎಲ್ ರಾಹುಲ್ 70*, ವಿದ್ಯಾಧರ್ 7, ಅಭಯ್ ನೇಗಿ 53ಕ್ಕೆ 2, ಮಯಾಂಕ್ ಮಿಶ್ರಾ 57ಕ್ಕೆ 2, ಅನ್ವೇಷ್ 50ಕ್ಕೆ 1, ಜೆ. ಸುಚಿತ್ 59ಕ್ಕೆ 1), ಉತ್ತರಾಖಂಡ: 88.5 ಓವರ್ಗಳಲ್ಲಿ 233 (ಲಕ್ಷ್ಯ ರಾಯ್ಚಂದಾನಿ 55, ಆದಿತ್ಯಾ ರಾವತ್ 45*, ವಿದ್ಯಾಧರ್ 40ಕ್ಕೆ 3, ವೈಶಾಕ್ 45ಕ್ಕೆ 3, ಶ್ರೇಯಸ್ 41ಕ್ಕೆ 2, ಶಿಖರ್ 39ಕ್ಕೆ 1, ಪ್ರಸಿದ್ಧಕೃಷ್ಣ 62ಕ್ಕೆ 1).