IPL-2026: ಇಂದು ಅಜೇಯ ಪಂಜಾಬ್ ಕಿಂಗ್ಸ್ಗೆ ಲಖನೌ ಸೂಪರ್ಜೈಂಟ್ಸ್ ಸವಾಲು
ಮುಲ್ಲನ್ಪುರ: ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಏಕೈಕ ತಂಡವೆನಿಸಿರುವ ಪಂಜಾಬ್ ಕಿಂಗ್ಸ್ ಮತ್ತು ಅಸ್ಥಿರ ನಿರ್ವಹಣೆ ತೋರುತ್ತಿರುವ ಲಖನೌ ಸೂಪರ್ಜೈಂಟ್ಸ್ ತಂಡಗಳು ಐಪಿಎಲ್ (IPL) 19ನೇ ಆವೃತ್ತಿಯಲ್ಲಿ ಭಾನುವಾರ ರಾತ್ರಿ ಮುಖಾಮುಖಿ ಆಗಲಿವೆ. ಶ್ರೇಯಸ್ ಅಯ್ಯರ್ ಪಡೆ ತನ್ನ 6ನೇ ಪಂದ್ಯದಲ್ಲೂ ಅಜೇಯ ಓಟ ಕಾಯ್ದುಕೊಳ್ಳಲು ಎಲ್ಎಸ್ಜಿ ಅವಕಾಶ ನೀಡುವುದೇ ಎಂಬ ಕುತೂಹಲ ಹರಡಿದೆ.
ಹಾಲಿ ರನ್ನರ್ಅಪ್ ಪಂಜಾಬ್ ತಂಡ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದರೆ, 1 ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಜತೆಗೆ ಬ್ಯಾಟಿಂಗ್ನಲ್ಲಿ ಪ್ರಭ್ಸಿಮ್ರನ್ ಸಿಂಗ್ (211), ನಾಯಕ ಶ್ರೇಯಸ್ ಅಯ್ಯರ್ (203), ಕೂಪರ್ ಕೊನೊಲಿ (136), ಪ್ರಿಯಾಂಶ್ ಆರ್ಯ (118) ಉತ್ತಮ ಕೊಡುಗೆ ನೀಡಿದ್ದಾರೆ. ಆದರೆ ತಂಡದ ಮಧ್ಯಮ ಕ್ರಮಾಂಕಕ್ಕೆ ಇನ್ನೂ ಸತ್ವಪರೀೆ ಎದುರಾಗಿಲ್ಲ. ಬೌಲಿಂಗ್ನಲ್ಲಿ ಕನ್ನಡಿಗ ವೈಶಾಖ್ ವಿಜಯಕುಮಾರ್, ಎಡಗೈ ವೇಗಿ ಅರ್ಷದೀಪ್ ಸಿಂಗ್ಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಸ್ಪಿನ್ ವಿಭಾಗದಲ್ಲಿ ಚಾಹಲ್ ಅವರಿಂದ ಮಾತ್ರ ಈ ಬಾರಿಯೂ ನಿರೀತ ನಿರ್ವಹಣೆ ಬಂದಿಲ್ಲ.
ಮತ್ತೊಂದೆಡೆ ಲಖನೌ ತಂಡ ಇದುವರೆಗೆ ಆಡಿದ 5 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದ್ದು, 3ರಲ್ಲಿ ಸೋತಿದೆ. ಕೊನೇ 2 ಪಂದ್ಯಗಳಲ್ಲಿ ಗುಜರಾತ್ ಮತ್ತು ಆರ್ಸಿಬಿ ಎದುರು ನೀರಸ ಬ್ಯಾಟಿಂಗ್ ನಿರ್ವಹಣೆ ತೋರಿ ಶರಣಾಗಿದೆ. ಲಖನೌ ಇದುವರೆಗೆ ಆಡಿದ 5 ಪಂದ್ಯಗಳಲ್ಲೂ 200ರ ಸನಿಹ ತಲುಪಿಲ್ಲ. ಏಡನ್ ಮಾರ್ಕ್ರಮ್ (120), ಮಿಚೆಲ್ ಮಾರ್ಷ್ (115) ಉತ್ತಮ ಬುನಾದಿ ಹಾಕಲು ವಿಲರಾಗುತ್ತಿದ್ದಾರೆ. ನಿಕೋಲಸ್ ಪೂರನ್ ಕೂಡ 5 ಪಂದ್ಯಗಳಲ್ಲಿ ಕೇವಲ 42 ರನ್ ಗಳಿಸಿ ನಿರಾಸೆ ಮೂಡಿಸಿದ್ದಾರೆ. ಬೌಲಿಂಗ್ನಲ್ಲಿ ಪ್ರಿನ್ಸ್ ಯಾದವ್, ಆವೇಶ್ ಖಾನ್, ಮೊಹಮದ್ ಶಮಿ ನಿರ್ವಹಣೆ ಸಮಾಧಾನಕರವೆನಿಸಿದೆ.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಹ್ಯಾಸಲ್ವುಡ್ ಎಸೆತದಲ್ಲಿ ಚೆಂಡೇಟಿನಿಂದ ಮೊಣಕೈ ಗಾಯಕ್ಕೊಳಗಾಗಿದ್ದ ಎಲ್ಎಸ್ಜಿ ನಾಯಕ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಫಿಟ್ ಆಗುವರೇ ಎಂಬುದು ಸ್ಪಷ್ಟವಿಲ್ಲ. ಆಡಿರುವ 5 ಪಂದ್ಯಗಳಲ್ಲಿ 104 ರನ್ ಮಾತ್ರ ಗಳಿಸಿರುವ ಪಂತ್, ಬ್ಯಾಟಿಂಗ್ನಲ್ಲಿ ಮಿಂಚಬೇಕಾದ ಒತ್ತಡದ ನಡುವೆ ಫಿಟ್ನೆಸ್ ಸಮಸ್ಯೆಯನ್ನೂ ಎದುರಿಸಿದ್ದಾರೆ. ಅವರು ಫಿಟ್ ಆಗದಿದ್ದರೆ ಉಪನಾಯಕ ನಿಕೋಲಸ್ ಪೂರನ್ ತಂಡವನ್ನು ಮುನ್ನಡೆಸಲಿದ್ದಾರೆ. ಆಗ ತಂಡದ ಗರಿಷ್ಠ ರನ್ಸ್ಕೋರರ್ ಮುಕುಲ್ ಚೌಧರಿ (127) ವಿಕೆಟ್ ಕೀಪಿಂಗ್ ಕೂಡ ನಿರ್ವಹಿಸಬಹುದು.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.