IPL-2026: ಪಂಜಾಬ್ ಕಿಂಗ್ಸ್ ಅಜೇಯ ಓಟಕ್ಕೆ ತಡೆಯೊಡ್ಡುವುದೇ ರಾಜಸ್ಥಾನ ರಾಯಲ್ಸ್?
ಮುಲ್ಲನ್ಪುರ: ಆಡಿದ ಮೊದಲ 7 ಪಂದ್ಯಗಳಲ್ಲೂ ಅಜೇಯ ಸಾಧನೆ ಮಾಡಿರುವ ಹಾಲಿ ರನ್ನರ್ಅಪ್ ಪಂಜಾಬ್ ಕಿಂಗ್ಸ್ ಮತ್ತು ಆರಂಭಿಕ 4 ಪಂದ್ಯಗಳನ್ನು ಗೆದ್ದ ಬಳಿಕ ನಂತರದ 4 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲುವು ಕಂಡಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್ 19ನೇ ಆವೃತ್ತಿಯಲ್ಲಿ ಮಂಗಳವಾರ ಮುಖಾಮುಖಿ ಆಗಲಿವೆ. ರನ್ಪ್ರವಾಹವನ್ನೇ ಹರಿಸುತ್ತಿರುವ ಶ್ರೇಯಸ್ ಅಯ್ಯರ್ ಬಳಗದ ಅಜೇಯ ಓಟಕ್ಕೆ, ಸ್ಫೋಟಕ ಬ್ಯಾಟರ್ಗಳಿದ್ದರೂ ಅಸ್ಥಿರ ನಿರ್ವಹಣೆ ತೋರಿಸುತ್ತಿರುವ ರಿಯಾನ್ ಪರಾಗ್ ಬಳಗ ತಡೆಯೊಡ್ಡಲು ಶಕ್ತವಾಗುವುದೇ ಎಂಬ ಕುತೂಹಲವಿದೆ. ಉಭಯ ತಂಡಗಳಲ್ಲಿ ಸ್ಫೋಟಕ ಬ್ಯಾಟರ್ಗಳಿರುವುದರಿಂದ ಸಿಕ್ಸರ್, ರನ್ ಮಳೆಯಾಗುವ ನಿರೀಕ್ಷೆಯೂ ಇದೆ.
ಐಪಿಎಲ್ ಇತಿಹಾಸದಲ್ಲಿ ಮೊದಲ 7 ಪಂದ್ಯಗಳಲ್ಲೂ ಅಜೇಯವಾಗುಳಿದ ಮೊದಲ ತಂಡ ಎನಿಸಿರುವ ಪಂಜಾಬ್, 6 ಜಯ ಮತ್ತು ರದ್ದುಗೊಂಡ 1 ಪಂದ್ಯದಿಂದ 13 ಅಂಕ ಗಳಿಸಿ ಪ್ಲೇಆ್ ಸನಿಹದಲ್ಲಿದೆ. ಈ ಪಂದ್ಯದಲ್ಲೂ ಗೆದ್ದರೆ ಪಂಜಾಜ್ ಸತತ 2ನೇ ಬಾರಿ ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಖಚಿತವೆನಿಸಲಿದೆ. ಮತ್ತೊಂದೆಡೆ ಆರ್ಆರ್ ತಂಡ ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಪ್ಲೇಆ್ಗೇರಲು ಉಳಿದ 6 ಪಂದ್ಯಗಳಲ್ಲಿ 3 ಪಂದ್ಯವನ್ನಾದರೂ ಗೆಲ್ಲಬೇಕಾದ ಸವಾಲು ಹೊಂದಿದೆ.
ಪಂಜಾಬ್ ತಂಡಕ್ಕೆ ಕಾಯಂ ತವರಾಗಿರುವ ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ಇದು ಹಾಲಿ ಆವೃತ್ತಿಯ ಕೊನೆಯ ಲೀಗ್ ಪಂದ್ಯವಾಗಿದೆ. ಪಂಜಾಬ್ ತಂಡ ತವರಿನ ಕೊನೇ 3 ಲೀಗ್ ಪಂದ್ಯಗಳನ್ನು ಧರ್ಮಶಾಲಾದ ಎಚ್ಪಿಸಿಎ ಸ್ಟೇಡಿಯಂನಲ್ಲಿ ಆಡಲಿದೆ. ಪಂಜಾಬ್ ಮುಲ್ಲನ್ಪುರದಲ್ಲಿ ಆಡಿದ ಮೊದಲ 3 ಲೀಗ್ ಪಂದ್ಯದಲ್ಲೂ ಗೆದ್ದಿದ್ದು, ಅಜೇಯವಾಗಿ ಇಲ್ಲಿನ ಅಭಿಯಾನ ಕೊನೆಗೊಳಿಸುವ ತವಕದಲ್ಲಿದೆ.
ಶ್ರೇಯಸ್ ಅಯ್ಯರ್ ಮತ್ತು ರಿಕಿ ಪಾಂಟಿಂಗ್ ಪಂಜಾಬ್ ಕಿಂಗ್ಸ್ ತಂಡದಲ್ಲಿ ನಾಯಕ&ಕೋಚ್ ಆಗಿ ಒಗ್ಗೂಡಿದ ಬಳಿಕ ತಂಡದ ಆಟದ ವೈಖರಿಯೇ ಬದಲಾಗಿದೆ. ಕಳೆದ ವರ್ಷ ಫೈನಲ್ಗೇರಿ ಸ್ವಲ್ಪದರಲ್ಲೇ ಪ್ರಶಸ್ತಿ ವಂಚಿತವಾಗಿದ್ದ ಪಂಜಾಬ್ ಈ ಬಾರಿ ಚಾಂಪಿಯನ್ ಪಟ್ಟಕ್ಕೇರಲು ಹಿಂದೆಂದಿಗಿಂತಲೂ ಹೆಚ್ಚು ತುಡಿತದಲ್ಲಿದೆ. ಈ ಮೂಲಕ ತಂಡದ ಸಹ&ಮಾಲಕಿ ಹಾಗೂ ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರ ಐಪಿಎಲ್ ಟ್ರೋಫಿಯ ದೀರ್ಕಾಲದ ಕೊನೆಗೂ ನನಸಾಗುವ ನಿರೀಕ್ಷೆ ಈ ಬಾರಿ ಅತ್ಯಂತ ಅಧಿಕವಾಗಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ತಂಡದ 264 ರನ್ ಸವಾಲನ್ನೂ ಬೆನ್ನಟ್ಟಿ ಗರಿಷ್ಠ ಮೊತ್ತದ ಚೇಸಿಂಗ್ ದಾಖಲೆ ಬರೆದಿರುವ ಪಂಜಾಬ್ ತಂಡ ಟೂರ್ನಿಯ ಅತ್ಯಂತ ಅಪಾಯಕಾರಿ ತಂಡವೆನಿಸಿದೆ. ಪ್ರಿಯಾಂಶ್ ಆರ್ಯ-ಪ್ರಭ್ಸಿಮ್ರನ್ ಸಿಂಗ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುತ್ತಿದ್ದರೆ, ಶ್ರೇಯಸ್ ಅಯ್ಯರ್, ಕೂಪರ್ ಕೊನೊಲಿ ಮಧ್ಯಮ ಕ್ರಮಾಂಕಕ್ಕೆ ಆಧಾರವಾಗಿದ್ದಾರೆ. ಬೌಲಿಂಗ್ನಲ್ಲಿ ಅರ್ಷದೀಪ್ ಸಿಂಗ್, ಕನ್ನಡಿಗ ವೈಶಾಖ್ ವಿಜಯಕುಮಾರ್, ಮಾಕೋರ್ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್ ಬಲ ತುಂಬಿದ್ದಾರೆ.
ರಾಜಸ್ಥಾನ ಪರ ಅಗ್ರ ಮೂವರು ಬ್ಯಾಟರ್ಗಳಾದ ವೈಭವ್ ಸೂರ್ಯವಂಶಿ (357), ಯಶಸ್ವಿ ಜೈಸ್ವಾಲ್ (255), ಧ್ರುವ ಜುರೆಲ್ (232) ಬಲಿಷ್ಠ ನಿರ್ವಹಣೆ ತೋರುತ್ತಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬುವವರಿಲ್ಲ. ನಾಯಕ ರಿಯಾನ್ ಪರಾಗ್ 8 ಪಂದ್ಯಗಳಲ್ಲಿ ಕೇವಲ 88 ರನ್ ಗಳಿಸಿದ್ದು, ಯಾವ ಇನಿಂಗ್ಸ್ನಲ್ಲೂ 20ರ ಗಡಿ ದಾಟಿಲ್ಲ. ಹೀಗಾಗಿ ನಾಯಕನೇ ಆರ್ಆರ್ ತಂಡದ ವೀಕ್ ಪಾಯಿಂಟ್ ಆಗಿದ್ದಾರೆ. ಸನ್ರೈಸರ್ಸ್ ಎದುರು 228 ರನ್ ರಸಿಕೊಳ್ಳುವ ವೇಳೆ ಅವರ ಕಳಪೆ ನಾಯಕತ್ವವೂ ತಂಡಕ್ಕೆ ಹಿನ್ನಡೆಯಾಗಿತ್ತು. ಜತೆಗೆ ಫೀಲ್ಡಿಂಗ್ ವಿಭಾಗದ ವೈಫಲ್ಯವೂ ತಂಡಕ್ಕೆ ದುಬಾರಿ ಎನಿಸಿದೆ. ಬೌಲಿಂಗ್ ವಿಭಾಗದಲ್ಲಿ ಜೋ್ರಾ ಆರ್ಚರ್ (13), ರವಿ ಬಿಷ್ಣೋಯಿ (11) ಮತ್ತು ನಾಂಡ್ರೆ ರ್ಬಗರ್ (8) ಬಲ ತುಂಬಿದ್ದಾರೆ.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
*100: ವೈಭವ್ ಸೂರ್ಯವಂಶಿ ಇನ್ನು 6 ಸಿಕ್ಸರ್ ಸಿಡಿಸಿದರೆ ಟಿ20ಯಲ್ಲಿ 100 ಸಿಕ್ಸರ್ ಪೂರೈಸಲಿದ್ದಾರೆ. ಇನ್ನು 1 ಬೌಂಡರಿ ಗಳಿಸಿದರೆ ಐಪಿಎಲ್ನಲ್ಲಿ 50 ಬೌಂಡರಿ ಪೂರ್ಣಗೊಳಿಸಲಿದ್ದಾರೆ.