ಬದಲಾಗಲಿದೆ ರಾಜಸ್ಥಾನ ರಾಯಲ್ಸ್, ಗುಜರಾತ್ ಟೈಟಾನ್ಸ್ ಜೆರ್ಸಿ ಬಣ್ಣ!
ಜೈಪುರ/ಅಹಮದಾಬಾದ್: ರಾಜಸ್ಥಾನದ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಬೆಂಬಲ ಸೂಚಿಸುವ ಸಲುವಾಗಿ ರಾಜಸ್ಥಾನ ರಾಯಲ್ಸ್ (rajasthan royals) ತಂಡ ಐಪಿಎಲ್-19ರಲ್ಲಿ ಶನಿವಾರ ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ತವರಿನ ಪಂದ್ಯದಲ್ಲಿ ಸಂಪೂರ್ಣ ನಸುಗೆಂಪು (Pink) ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ರಾಜಸ್ಥಾನ ರಾಯಲ್ಸ್ ಫೌಂಡೇಷನ್ನ "ಪಿಂಕ್ ಪ್ರಾಮಿಸ್' ಅಭಿಯಾನದ ಭಾಗವಾಗಿರುವ ಈ ಪಂದ್ಯದಲ್ಲಿ ಸಿಡಿಯುವ ಪ್ರತಿ ಸಿಕ್ಸರ್ಗೆ ರಾಜಸ್ಥಾನದ ಗ್ರಾಮೀಣ ಮಹಿಳೆಯರ ಆರು ಮನೆಗಳಿಗೆ ಸೌರವಿದ್ಯುತ್ ಬೆಳಕು ನೀಡಲಾಗುತ್ತದೆ ಎಂದು ಆರ್ಆರ್ ಫ್ರಾಂಚೈಸಿ ತಿಳಿಸಿದೆ.
12ಕ್ಕೆ ಲಾವೆಂಡರ್ ಜೆರ್ಸಿ ಧರಿಸಲಿದೆ ಗುಜರಾತ್
ಗುಜರಾತ್ ಟೈಟಾನ್ಸ್ (Gujarat Titans) ತಂಡ ಮೇ 12ರಂದು ನಮೋ ಸ್ಟೇಡಿಯಂನಲ್ಲಿ ನಡೆಯಲಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ತವರಿನ ಪಂದ್ಯದಲ್ಲಿ ವಿಶೇಷವಾದ ತಿಳಿ ನೇರಳೆ (lavender) ಬಣ್ಣದ ಧರಿಸಿ ಆಡಲಿದೆ. ಕ್ಯಾನ್ಸರ್ ಜಾಗೃತಿಗಾಗಿ ಶುಭಮಾನ್ ಗಿಲ್ ಬಳಗ ತನ್ನ ಎಂದಿನ ನೇವಿ ಬ್ಲೂ ಬಣ್ಣಕ್ಕೆ ಬದಲಾಗಿ ಲಾವೆಂಡರ್ ಜೆರ್ಸಿ ಧರಿಸಲಿದೆ.
ಗುಜರಾತ್ ತಂಡ 2022ರ ಪದಾರ್ಪಣೆಯ ಆವೃತ್ತಿಯಿಂದಲೂ ವರ್ಷದಲ್ಲಿ ಒಂದು ಪಂದ್ಯವನ್ನು ಕ್ಯಾನ್ಸರ್ ಜಾಗೃತಿಗಾಗಿ ಮೀಡಲಿಡುತ್ತಿದೆ. ಪಂದ್ಯದ ವೇಳೆ ಪ್ರೇಕ್ಷಕರಿಗೂ ತಿಳಿ ನೇರಳೆ ಬಣ್ಣದ ಧ್ವಜವನ್ನು ವಿತರಿಸಲಾಗುತ್ತದೆ.