ರಣಜಿ ಟ್ರೋಫಿ: ಕೆಎಲ್ ರಾಹುಲ್ ಶತಕ, ಸೆಮಿಫೈನಲ್ಗೇರಿದ ಕರ್ನಾಟಕ
ಮುಂಬೈ: ಅನುಭವಿ ಬ್ಯಾಟರ್ ಕೆಎಲ್ ರಾಹುಲ್ (130 ರನ್, 182 ಎಸೆತ, 14 ಬೌಂಡರಿ, 1 ಸಿಕ್ಸರ್) ಭರ್ಜರಿ ಶತಕ ಮತ್ತು ಯುವ ಎಡಗೈ ಬ್ಯಾಟರ್ ಆರ್. ಸ್ಮರಣ್ (83*ರನ್, 123 ಎಸೆತ, 11 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡ 91ನೇ ಆವೃತ್ತಿಯ ರಣಜಿ ಟ್ರೋಫಿ (Ranji Trophy) ಕ್ವಾರ್ಟರ್ಫೈನಲ್ನಲ್ಲಿ 42 ಬಾರಿಯ ಚಾಂಪಿಯನ್ ಮುಂಬೈ ಎದುರು ದಿಟ್ಟ ಚೇಸಿಂಗ್ ನಡೆಸುವ ಮೂಲಕ 4 ವಿಕೆಟ್ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ರಾಜ್ಯ ತಂಡ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ 3 ವರ್ಷಗಳ ಬಳಿಕ ಉಪಾಂತ್ಯಕ್ಕೇರಿದ ಸಾಧನೆ ಮಾಡಿದೆ. ಜತೆಗೆ ದಶಕದ ಬಳಿಕ ಟ್ರೋಫಿಗೆ ಮುತ್ತಿಕ್ಕುವ ನಿರೀಕ್ಷೆಯನ್ನೂ ಹೆಚ್ಚಿಸಿದೆ.
ಬಿಕೆಸಿ ಗ್ರೌಂಡ್ನಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಬಳಗ ಆತಿಥೇಯರ 325 ರನ್ ಸವಾಲಿಗೆ ಪ್ರತಿಯಾಗಿ 2 ವಿಕೆಟ್ಗೆ 113 ರನ್ಗಳಿಂದ 4ನೇ ದಿನದಾಟ ಆರಂಭಿಸಿತು. ಬಿರುಸಿನ ಆಟದ ಮೂಲಕ ಮುಂಬೈ ಬೌಲರ್ಗಳನ್ನು ಸತಾಯಿಸಿದ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಭೋಜನ ವಿರಾಮದ ಬಳಿಕ 73.4 ಓವರ್ಗಳಲ್ಲಿ 6 ವಿಕೆಟ್ಗೆ 325 ರನ್ ಗಳಿಸಿ ಜಯಭೇರಿ ಬಾರಿಸಿತು. 4ನೇ ದಿನ ಆಡಿದ 44.4 ಓವರ್ಗಳಲ್ಲಿ 212 ರನ್ ಅಂದರೆ 4.77ರ ಸರಾಸರಿಯಲ್ಲಿ ರಾಜ್ಯ ತಂಡ ಅಮೋ ಚೇಸಿಂಗ್ ಮಾಡಿ ಗೆಲುವು ಒಲಿಸಿಕೊಂಡಿತು. ಮೊದಲ ಇನಿಂಗ್ಸ್ನಲ್ಲಿ ಭಾರಿ ಮುನ್ನಡೆ ಪಡೆಯುವ ಅವಕಾಶ ಕೈಚೆಲ್ಲಿದ್ದ ಪಡಿಕ್ಕಲ್ ಬಳಗ ಈ ಬಾರಿ ಅದರಿಂದ ಪಾಠ ಕಲಿತಂತೆ ಕಂಡಿತು.
ಕರ್ನಾಟಕ 2022-23ರಲ್ಲಿ ಕೊನೆಯದಾಗಿ ಸೆಮಿಫೈನಲ್ಗೇರಿತ್ತು. 2014-15ರಲ್ಲಿ ರಾಜ್ಯ ತಂಡ ಕೊನೆಯದಾಗಿ ಫೈನಲ್ಗೇರಿತ್ತು ಮತ್ತು ಪ್ರಶಸ್ತಿ ಒಲಿಸಿಕೊಂಡಿತ್ತು.
ಬೆಳಗ್ಗೆ 60 ರನ್ಗಳಿಂದ ದಿನದಾಟ ಆರಂಭಿಸಿದ ಕೆಎಲ್ ರಾಹುಲ್ (KL Rahul), ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರಿಸಿ 147 ಎಸೆತಗಳಲ್ಲಿ ಶತಕ ಪೂರೈಸಿದರು. ಕರುಣ್ ನಾಯರ್ (13) ದಿನದ 2ನೇ ಓವರ್ನಲ್ಲೇ ಔಟಾದರು. ಆಗ ರಾಹುಲ್ ಜತೆಗೂಡಿದ ಆರ್. ಸ್ಮರಣ್ 4ನೇ ವಿಕೆಟ್ಗೆ 169 ಎಸೆತಗಳಲ್ಲಿ 147 ರನ್ ಸೇರಿಸಿ ರಾಜ್ಯದ ಗೆಲುವಿನ ಹಾದಿ ಸುಗಮಗೊಳಿಸಿದರು. ಭೋಜನ ವಿರಾಮದವರೆಗೂ ಈ ಜೋಡಿ ಮುಂಬೈ ಬೌಲರ್ಗಳಿಗೆ ಸವಾಲಾಗಿ ನಿಂತಿತು. ಆದರೆ ವಿರಾಮದ ನಂತರ 3ನೇ ಎಸೆತದಲ್ಲೇ ರಾಹುಲ್, ತುಷಾರ್ ದೇಶಪಾಂಡೆ ಎಸೆತದಲ್ಲಿ ಔಟಾದರು. ಆಗ ಕರ್ನಾಟಕ ಗೆಲುವಿನಿಂದ 59 ರನ್ ದೂರವಿತ್ತು.
ರಾಹುಲ್ ಔಟಾದ ಬಳಿಕ ಮುಂಬೈ ತಿರುಗೇಟು ನೀಡಲು ಯತ್ನಿಸಿತು. ಶ್ರೇಯಸ್ ಗೋಪಾಲ್ (1) ಮತ್ತು ವಿಕೆಟ್ ಕೀಪರ್-ಬ್ಯಾಟರ್ ಕೃತಿಕ್ ಕೃಷ್ಣ (2) ಬೇಗನೆ ಔಟಾದರು. 19 ರನ್ ಅಂತರದಲ್ಲಿ ಮುಂಬೈ 3 ವಿಕೆಟ್ ಕಬಳಿಸಿತು. ಆದರೆ ಆಗ 22 ವರ್ಷದ ಸ್ಮರಣ್ ಒಂದೆಡೆ ಭದ್ರವಾಗಿ ನೆಲೆಯೂರಿದರೆ, ವಿದ್ಯಾಧರ್ ಪಾಟೀಲ್ (31*ರನ್, 30 ಎಸೆತ, 3 ಬೌಂಡರಿ, 1 ಸಿಕ್ಸರ್) ಬಿರುಸಿನಾಟದೊಂದಿಗೆ ಸಮರ್ಥ ಸಾಥ್ ನೀಡಿದರು. ಇವರಿಬ್ಬರು ಮುರಿಯದ 7ನೇ ವಿಕೆಟ್ಗೆ 48 ಎಸೆತಗಳಲ್ಲಿ 40 ರನ್ ಸೇರಿಸಿ ರಾಜ್ಯವನ್ನು ಗೆಲುವಿನ ದಡ ಸೇರಿಸಿದರು.
ಮುಂಬೈ: 120 ಮತ್ತು 377, ಕರ್ನಾಟಕ: 173 ಮತ್ತು 73.4 ಓವರ್ಗಳಲ್ಲಿ 6 ವಿಕೆಟ್ಗೆ 325 (ಕೆಎಲ್ ರಾಹುಲ್ 130, ಕರುಣ್ 13, ಸ್ಮರಣ್ 83*, ಶ್ರೇಯಸ್ 1, ಕೃತಿಕ್ ಕೃಷ್ಣ 2, ವಿದ್ಯಾಧರ್ 31*, ಶಾರ್ದೂಲ್ 55ಕ್ಕೆ 2, ತುಷಾರ್ 67ಕ್ಕೆ 2, ತನುಷ್ ಕೋಟ್ಯಾನ್ 77ಕ್ಕೆ 2). ಪಂದ್ಯಶ್ರೇಷ್ಠ: ಕೆಎಲ್ ರಾಹುಲ್.
*24: ಕೆಎಲ್ ರಾಹುಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 24ನೇ ಶತಕ ಸಿಡಿಸಿದರು.
ವಿದ್ಯಾಧರ್-ತುಷಾರ್ ಜಟಾಪಟಿ
ಕರ್ನಾಟಕ-ಮುಂಬೈ ನಡುವಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಕಾದಾಟ ಸಾಮಾನ್ಯ. ಮುಂಬೈ ದೇಶೀಯ ಕ್ರಿಕೆಟ್ನ ಪ್ರಬಲ ತಂಡವೆನಿಸಿದ್ದರೂ, ರಾಜ್ಯ ತಂಡ ಇತ್ತೀಚೆಗೆ ವರ್ಷಗಳಲ್ಲಿ ಅದರ ವಿರುದ್ಧದ ಪ್ರಾಬಲ್ಯ ಮುಂದುವರಿಸಿದೆ. ರಾಜ್ಯ ತಂಡ ಗೆಲುವಿನ ಸನಿಹ ತಲುಪಿದಾಗ ಹತಾಸೆಗೊಂಡ ಮುಂಬೈ ವೇಗಿ ತುಷಾರ್ ದೇಶಪಾಂಡೆ, ಆಕ್ರಮಣಕಾರಿ ಆಟದ ಮೂಲಕ ರಾಜ್ಯವನ್ನು ಬೇಗನೆ ಗೆಲುವಿನ ದಡ ಸೇರಿಸುವತ್ತ ಮುನ್ನಡೆದ ವಿದ್ಯಾಧರ್ ಪಾಟೀಲ್ ಜತೆ ಮಾತಿನ ಚಕಮಕಿ ನಡೆಸಿದರು. ಆಗ ಮುಂಬೈ ನಾಯಕ ಶಾರ್ದೂಲ್ ಠಾಕೂರ್ ಮತ್ತು ಅಂಪೈರ್ಗಳು ಇಬ್ಬರನ್ನೂ ಸಮಾಧಾನ ಪಡಿಸಿದರು. ಅಂತಿಮವಾಗಿ ವಿದ್ಯಾಧರ್, ತನುಷ್ ಎಸೆತದಲ್ಲಿ ಡೀಪ್ ಸ್ಕ್ವೇರ್ಲೆಗ್ನತ್ತ ಬೌಂಡರಿ ಬಾರಿಸಿ ರಾಜ್ಯವನ್ನು ಗೆಲ್ಲಿಸಿದರು.
*ನಮಗೆ ಯಶಸ್ವಿ ಚೇಸಿಂಗ್ನ ವಿಶ್ವಾಸವಿತ್ತು. ಪಿಚ್ನಿಂದ ಬ್ಯಾಟಿಂಗ್ಗೆ ಸ್ವಲ್ಪಮಟ್ಟಿನ ನೆರವು ಸಿಗುವ ನಿರೀಕ್ಷೆಯೂ ಇತ್ತು. ಮುಂಬೈ ಮೇಲೆ ಒತ್ತಡ ಹೇರುವುದು ಅಗತ್ಯವಾಗಿತ್ತು. ಅದನ್ನೇ ನಾನು ಮತ್ತು ಮಯಾಂಕ್ ಪ್ರಯತ್ನಿಸಿದೆವು.
*5: 2010ರ ರಣಜಿ ಫೈನಲ್ನಲ್ಲಿ ಮುಂಬೈ ಎದುರು ಸೋತ ಬಳಿಕ ಕರ್ನಾಟಕ 8 ಮುಖಾಮುಖಿಗಳಲ್ಲಿ 5ರಲ್ಲಿ ಗೆದ್ದಿದ್ದು, 2ರಲ್ಲಿ ಇನಿಂಗ್ಸ್ ಮುನ್ನಡೆ ಸಹಿತ ಡ್ರಾ ಕಂಡಿದೆ. 1ರಲ್ಲಿ ಮಾತ್ರ ಇನಿಂಗ್ಸ್ ಹಿನ್ನಡೆ ಅನುಭವಿಸಿದೆ.
15ರಿಂದ ಉತ್ತರಾಖಂಡ ಎದುರು ಸೆಮಿಫೈನಲ್
ಕರ್ನಾಟಕ ತಂಡ ಫೆಬ್ರವರಿ 15ರಿಂದ 19ರವರೆಗೆ ಡೆಹ್ರಾಡೂನ್ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಉತ್ತರಾಖಂಡ ತಂಡವನ್ನು ಎದುರಿಸಲಿದೆ. ಉತ್ತರಾಖಂಡ ತಂಡ ಎಂಟರ ಟ್ಟದಲ್ಲಿ ಜಾರ್ಖಂಡ್ ವಿರುದ್ಧ ಇನಿಂಗ್ಸ್ ಗೆಲುವು ಸಾಧಿಸಿ ಇದೇ ಮೊದಲ ಬಾರಿ ಉಪಾಂತ್ಯಕ್ಕೇರಿದೆ.
ಮೊದಲ ಬಾರಿ ಉಪಾಂತ್ಯಕ್ಕೆ ಜಮ್ಮು-ಕಾಶ್ಮೀರ
ವೇಗಿ ಔಕಿಬ್ ನಬಿ (ಪಂದ್ಯದಲ್ಲಿ 110ಕ್ಕೆ 12 ವಿಕೆಟ್) ಅಮೋಘ ಬೌಲಿಂಗ್ ದಾಳಿಯ ನೆರವಿನಿಂದ ಜಮ್ಮು&ಕಾಶ್ಮೀರ ತಂಡ ಇಂದೋರ್ನಲ್ಲಿ ನಡೆದ ಆತಿಥೇಯ ಮಧ್ಯಪ್ರದೇಶ ವಿರುದ್ಧದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 56 ರನ್ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಜಮ್ಮು-ಕಾಶ್ಮೀರ ತಂಡ ರಣಜಿಗೆ ಪದಾರ್ಪಣೆ ಮಾಡಿ 67 ವರ್ಷಗಳ ಬಳಿಕ ಮೊದಲ ಬಾರಿ ಸೆಮಿಫೈನಲ್ಗೇರಿದ ಸಾಧನೆ ಮಾಡಿದೆ. ಜಮ್ಮು&ಕಾಶ್ಮೀರ ಮೊದಲ ಇನಿಂಗ್ಸ್ನಲ್ಲಿ 194 ರನ್ ಗಳಿಸಿದ್ದರೆ, ಮಧ್ಯಪ್ರದೇಶ 152 ರನ್ಗಳಿಗೆ ಕುಸಿದು 42 ರನ್ ಮುನ್ನಡೆ ಬಿಟ್ಟುಕೊಟ್ಟಿತ್ತು. ಜಮ್ಮು&ಕಾಶ್ಮೀರ 2ನೇ ಸರದಿಯಲ್ಲಿ 248 ರನ್ ಗಳಿಸಿ, 291 ರನ್ ಗುರಿ ನೀಡಿತ್ತು. ಪ್ರತಿಯಾಗಿ ಮಧ್ಯಪ್ರದೇಶ ತಂಡ 234 ರನ್ಗಳಿಗೆ ಕುಸಿಯಿತು. ಔಕಿಬ್ ನಬಿ ಮೊದಲ ಇನಿಂಗ್ಸ್ನಲ್ಲಿ 7 ಮತ್ತು 2ನೇ ಇನಿಂಗ್ಸ್ನಲ್ಲಿ 5 ವಿಕೆಟ್ ಕಬಳಿಸಿದರು. ಅವರು ಕಳೆದ ಐಪಿಎಲ್ ಹರಾಜಿನಲ್ಲಿ ಗಮನಾರ್ಹ 8.40 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದರು.
ಸುದೀಪ್ಗೆ 1 ರನ್ನಿಂದ ತಪ್ಪಿದ ತ್ರಿಶತಕ
ಬಂಗಾಳ ಬ್ಯಾಟರ್ ಸುದೀಪ್ ಕುಮಾರ್ ರಾಮಿ (299 ರನ್, 596 ಎಸೆತ, 31 ಬೌಂಡರಿ, 6 ಸಿಕ್ಸರ್) ಪ್ರವಾಸಿ ಆಂಧ್ರ ವಿರುದ್ಧ ಕಲ್ಯಾಣಿಯಲ್ಲಿ ನಡೆಯುತ್ತಿರುವ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕೇವಲ 1 ರನ್ನಿಂದ ತ್ರಿಶತಕವಂಚಿತರಾದರು. ಆಂಧ್ರ ಮೊದಲ ಇನಿಂಗ್ಸ್ನಲ್ಲಿ 295 ರನ್ ಗಳಿಸಿದ್ದರೆ, ಸುದೀಪ್ ಸಾಹಸದಿಂದ ಬಂಗಾಳ 629 ರನ್ ಗಳಿಸಿ 334 ರನ್ಗಳ ಭಾರಿ ಮುನ್ನಡೆ ಸಾಧಿಸಿತು. ಆಂಧ್ರ 2ನೇ ಸರದಿಯಲ್ಲಿ 3 ವಿಕೆಟ್ಗೆ 64 ರನ್ ಗಳಿಸಿ ಇನಿಂಗ್ಸ್ ಸೋಲಿನ ಭೀತಿಯಲ್ಲಿದೆ. ಸುದೀಪ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 299ಕ್ಕೆ ಔಟಾದ 3ನೇ ಬ್ಯಾಟರ್ ಎನಿಸಿದರು. ನ್ಯೂಜಿಲೆಂಡ್ನ ಮಾರ್ಟಿನ್ ಕ್ರೋವ್ (1991) ಮತ್ತು ಗ್ಲಾಮರ್ಗನ್ನ ಮೈಕ್ ಪೊವೆಲ್ (2009) ಮೊದಲಿಬ್ಬರು.