ಟ್ರೋಫಿ ಅನಾವರಣಗೊಳಿಸಿದ ರಾಹುಲ್ ದ್ರಾವಿಡ್. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕಾರ್ಯದರ್ಶಿ ಸಂತೋಷ್ ಮೆನನ್, ಅಧಿಕೃತ ವಕ್ತಾರ ವಿನಯ್ ಮೃತ್ಯುಂಜಯ, ಮಹಾರಾಜ ಟ್ರೋಫಿ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎಸ್. ಕೇಶವ ಇತರರಿದ್ದರು.  
ಕ್ರಿಕೆಟ್

ಮಹಾರಾಜ ಟ್ರೋಫಿ ಅನಾವರಣಗೊಳಿಸಿದ ದ್ರಾವಿಡ್: ಮೂರು ನಿಯಮ ಪರಿಷ್ಕರಣೆ, ಟಿಕೆಟ್ ಮಾರಾಟ ಯಾವಾಗ?

ಬೆಂಗಳೂರು: ರಾಜ್ಯದ ಉದಯೋನ್ಮುಖ ಕ್ರಿಕೆಟಿಗರು ತಮ್ಮ ಪ್ರತಿಭೆ ಅನಾವರಣಗೊಳಿಸುವ ಮೂಲಕ ಉತ್ತಮ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಮಹಾರಾಜ ಟ್ರೋಫಿ ಕೆಎಸ್‌ಸಿಎ (KSCA) ಟಿ20 ಟೂರ್ನಿ ಉತ್ತಮ ವೇದಿಕೆಯಾಗಿದ್ದು, ರಾಜ್ಯದ ಕ್ರಿಕೆಟ್ ಬೆಳವಣಿಗೆಯ ಹಾದಿಯನ್ನು ಬಲಪಡಿಸುವಲ್ಲಿ ಇದು ಮಹತ್ವದ್ದಾಗಿರಲಿದೆ ಎಂದು ಭಾರತ ತಂಡದ ಮಾಜಿ ನಾಯಕ-ಕೋಚ್ ರಾಹುಲ್ ದ್ರಾವಿಡ್ (Rahul Dravid) ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಸಭಾಂಗಣದಲ್ಲಿ ಗುರುವಾರ ‘ಮಹಾರಾಜ ಟ್ರೋಫಿ’ ಅನಾವರಣಗೊಳಿಸಿ ಮಾತನಾಡಿದ ದಿಗ್ಗಜ ರಾಹುಲ್ ದ್ರಾವಿಡ್, ಮಹಾರಾಜ ಟ್ರೋಫಿ ಬಹಳ ಮುಖ್ಯವಾದ ಟೂರ್ನಿ. ಸಾಕಷ್ಟು ಐಪಿಎಲ್ ಫ್ರಾಂಚೈಸಿಗಳ ಪ್ರತಿಭಾ ಶೋಧ ತಂಡಗಳು ದೇಶೀಯ ಫ್ರಾಂಚೈಸಿ ಟೂರ್ನಿಯತ್ತ ಗಮನಹರಿಸುತ್ತವೆ. ಕ್ರೀಡಾಂಗಣದಲ್ಲೂ ಅವರು ಹಾಜರಿರಲಿದ್ದು, ಕೆಲವರು ಟಿವಿಯಲ್ಲಿ ವೀಕ್ಷಿಸುತ್ತಾರೆ. ಆಟಗಾರರು ಈ ಟೂರ್ನಿಯಲ್ಲಿ ದಾಖಲಿಸಿದ ಅಂಕಿ-ಅಂಶಗಳನ್ನು ಪ್ರತಿಭಾ ಶೋಧ ತಂಡಗಳು ವಿಮರ್ಶೆ ಮಾಡಲಿವೆ.
ಆದ್ದರಿಂದ ಇದು ರಾಜ್ಯದ ಆಟಗಾರರು ಐಪಿಎಲ್‌ನಂಥ ಟೂರ್ನಿ ಪ್ರವೇಶಿಸಲು ಸಹಾಯ ಮಾಡುತ್ತದೆ ಎಂದರು. ಕರ್ನಾಟಕದ ಯುವ ಲೆಗ್ ಸ್ಪಿನ್ನರ್ ಯಶ್ ರಾಜ್ ಪೂಂಜಾರನ್ನು ಉದಾಹರಣೆಯಾಗಿಯೂ ನೀಡಿದರು. ಕರ್ನಾಟಕವನ್ನು ಪ್ರತಿನಿಧಿಸದ ನಡುವೆಯೂ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದ ಯಶ್‌ರಾಜ್, ಕಳೆದ ಆವೃತ್ತಿಯಲ್ಲಿ ತೋರಿದ ಉತ್ತಮ ಪ್ರದರ್ಶನ ಇದಕ್ಕೆ ಕಾರಣ ಎಂದ ದ್ರಾವಿಡ್, ಟೂರ್ನಿಯನ್ನು ಹುಬ್ಬಳ್ಳಿ, ಮೈಸೂರಿನಲ್ಲಿ ಆಯೋಜಿಸುವ ಕೆಎಸ್‌ಸಿಎ ನಿರ್ಧಾರವನ್ನು ಶ್ಲಾಘಿಸಿದರು.
ಟಿಕೆಟ್ ಮಾರಾಟ  
ಮಹಾರಾಜ ಟ್ರೋಫಿ ಜೂನ್ 20 ರಿಂದ ಜುಲೈ 12ರವರೆಗೆ ಮೂರು ಚರಣಗಳಲ್ಲಿ ನಡೆಯಲಿದ್ದು, ಶುಕ್ರವಾರ (ಜೂ.12) ಮಧ್ಯಾಹ್ನ 3 ಗಂಟೆಗೆ ಮೈಸೂರು ಚರಣದ ಪಂದ್ಯಗಳ ಟಿಕೆಟ್ ಮಾರಾಟ ಆರಂಭವಾಗಲಿದೆ. ಡಿಸ್ಟ್ರಿಕ್ ಆ್ಯಪ್‌ನಲ್ಲಿ ಕನಿಷ್ಠ 100 ರಿಂದ ಗರಿಷ್ಠ 250 ರೂ. ಮುಖಬೆಲೆಯ ಟಿಕೆಟ್‌ಗಳು ಸಾರ್ವಜನಿಕರಿಗೆ ಡಿಜಿಟಲ್ ಮಾದರಿಯಲ್ಲಿ ಲಭ್ಯವಾಗಲಿವೆ.
ಮೂರು ನಿಯಮ ಪರಿಷ್ಕರಣೆ
ಹಿಂದಿನ ಆವೃತ್ತಿಗಳಲ್ಲಿದ್ದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಉಳಿಸಿಕೊಳ್ಳಲಾಗಿದೆ. ಆದರೆ, ಎರಡು ತಂಡಗಳು ಟಾಸ್ ಪ್ರಕ್ರಿಯೆಗೆ ಮುನ್ನ ಹನ್ನೊಂದರ ಬಳಗವನ್ನು ಅಂತಿಮಗೊಳಿಸಬೇಕಿದ್ದು, ಇದು ಟಿ20ಯಲ್ಲಿ ಆಲ್ರೌಂಡರ್‌ಗಳ ಪ್ರಾಮುಖ್ಯತೆ ನಿರ್ಧರಿಸಲಿದೆ. 
ನೋ-ಬಾಲ್‌ನ ಮರು ಎಸೆತ ಫ್ರಿ ಹಿಟ್‌ನಲ್ಲಿ ಬ್ಯಾಟರ್ ಔಟಾದರೆ (ಕ್ಯಾಚ್, ಬೌಲ್ಡ್), ಅದನ್ನು ಡಾಟ್‌ಬಾಲ್ ಎಂದು ಪರಿಗಣಿಸಲಾಗುತ್ತದೆ. ಇದರ ಜತೆಗೆ ಡಿಆರ್‌ಎಸ್ ಮೇಲ್ಮನವಿಯಲ್ಲಿ ಬ್ಯಾಟರ್ ನಾಟೌಟ್ ಎಂದು ಗೊತ್ತಾದಾಗ, ಬ್ಯಾಟರ್‌ಗಳು ರನ್ ಪೂರ್ಣಗೊಳಿಸಿದ್ದರೆ ಅದನ್ನು ಬ್ಯಾಟರ್ ಮತ್ತು ತಂಡ ಇಬ್ಬರಿಗೂ ರನ್ ನೀಡಲಾಗುತ್ತದೆ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಪರಿಷ್ಕೃತ ನಿಯಮಗಳ ಮಾಹಿತಿ ನೀಡಿದರು.