Rahul Dravid  
ಕ್ರಿಕೆಟ್

ಟಿ20 ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ: ಡಬ್ಲಿನ್ ತಂಡ ಖರೀದಿಸಿದ Rahul Dravid!

ಲಂಡನ್/ಬೆಂಗಳೂರು: ಭಾರತೀಯ ಕ್ರಿಕೆಟ್‌ನ ದಿಗ್ಗಜ ರಾಹುಲ್ ದ್ರಾವಿಡ್(Rahul Dravid) ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ನ (ETPL) ಭಾಗವಾಗಿರುವ ಐರ್ಲೆಂಡ್‌ನ ‘ಡಬ್ಲಿನ್’ ಫ್ರಾಂಚೈಸಿಯನ್ನು ದ್ರಾವಿಡ್ ಖರೀದಿಸಿದ್ದು, ಲೀಗ್‌ನ ಮಾಲೀಕರಾಗಿ ಪದಾರ್ಪಣೆ ಮಾಡಿದ್ದಾರೆ. ದ್ರಾವಿಡ್ ಅವರ ಈ ನಡೆಯು ಅಂತರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.  

ದ್ರಾವಿಡ್ ಬೇಕೆಂದು ಪಟ್ಟು ಹಿಡಿದಿದ್ದ ಅಭಿಷೇಕ್ ಬಚ್ಚನ್!

ಇಟಿಪಿಎಲ್ (ETPL) ಲೀಗ್‌ನ ಸಹ-ಮಾಲೀಕ ಹಾಗೂ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ದ್ರಾವಿಡ್ ಅವರನ್ನು ತಂಡದ ಮಾಲೀಕರನ್ನಾಗಿ ಮಾಡಿಕೊಂಡಿರುವ ಹಿಂದಿನ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. "ರಾಹುಲ್ ದ್ರಾವಿಡ್ ಅವರು ಮಾಡುವ ಯಾವುದೇ ಕೆಲಸದಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ದೂರದೃಷ್ಟಿ ಇರುತ್ತದೆ. ಅಂತಹ ವ್ಯಕ್ತಿ ನಮ್ಮ ಲೀಗ್‌ನ ಭಾಗವಾಗಲಿ ಎಂಬುದು ನನ್ನ ಆಶಯವಾಗಿತ್ತು" ಎಂದು ಅಭಿಷೇಕ್ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕೇವಲ ಗ್ಲಾಮರ್ ಮಾತ್ರವಲ್ಲದೆ, ಕ್ರಿಕೆಟ್‌ನ ಮೂಲಸೌಕರ್ಯ ಮತ್ತು ತಳಮಟ್ಟದ ಅಭಿವೃದ್ಧಿಗೆ ಒತ್ತು ನೀಡಲು ಸ್ಟೀವ್ ವಾ ಮತ್ತು ಜಾಂಟಿ ರೋಡ್ಸ್ ಅವರಂತಹ ದಿಗ್ಗಜರನ್ನು ಲೀಗ್‌ನೊಂದಿಗೆ ಜೋಡಿಸಿಕೊಳ್ಳಲಾಗಿದೆ.  

ನಾಯಕನಾಗಿ ರವಿಚಂದ್ರನ್ ಅಶ್ವಿನ್ ಎಂಟ್ರಿ

ಭಾರತೀಯ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ರವಿಚಂದ್ರನ್ ಅಶ್ವಿನ್, ಈಗ ಯುರೋಪ್ ಲೀಗ್‌ನಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ದ್ರಾವಿಡ್ ಒಡೆತನದ ಡಬ್ಲಿನ್ ತಂಡಕ್ಕೆ ಅಶ್ವಿನ್ ನಾಯಕರಾಗಿ ಮತ್ತು ಮಾರ್ಗದರ್ಶಕರಾಗಿ (Mentor) ನೇಮಕಗೊಂಡಿದ್ದಾರೆ. ದಕ್ಷಿಣ ಏಷ್ಯಾದ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡುವ ಕುರಿತು ಬಿಸಿಸಿಐ ಕೆಲವು ನಿರ್ಬಂಧಗಳನ್ನು ಹೊಂದಿದ್ದರೂ, ಅಶ್ವಿನ್ ಅವರ ನಿವೃತ್ತಿಯು ಅವರಿಗೆ ಈ ಅವಕಾಶವನ್ನು ಮುಕ್ತಗೊಳಿಸಿದೆ.  

ಏನಿದು ಯುರೋಪಿಯನ್ ಟಿ20 ಲೀಗ್?

ಕ್ರಿಕೆಟ್ ಐರ್ಲೆಂಡ್, ಕ್ರಿಕೆಟ್ ಸ್ಕಾಟ್ಲೆಂಡ್ ಮತ್ತು ರಾಯಲ್ ಡಚ್ ಕ್ರಿಕೆಟ್ ಅಸೋಸಿಯೇಷನ್ ಸಹಯೋಗದೊಂದಿಗೆ ಈ ಲೀಗ್ ಆಯೋಜನೆಗೊಳ್ಳುತ್ತಿದೆ. ಇದರಲ್ಲಿ ಆರು ನಗರಗಳ ತಂಡಗಳಿರಲಿವೆ. 
ಡಬ್ಲಿನ್ ಮತ್ತು ಬೆಲ್‌ಫಾಸ್ಟ್ (ಐರ್ಲೆಂಡ್)  
ಎಡಿನ್‌ಬರ್ಗ್ ಮತ್ತು ಗ್ಲ್ಯಾಸ್ಗೋ (ಸ್ಕಾಟ್ಲೆಂಡ್)  
ರೋಟರ್‌ಡ್ಯಾಮ್ ಮತ್ತು ಆಮ್‌ಸ್ಟರ್‌ಡ್ಯಾಮ್ (ನೆದರ್ಲೆಂಡ್ಸ್)  
ಈ ಲೀಗ್ ಮೂಲಕ ಯುರೋಪನ್ನು ಕ್ರಿಕೆಟ್‌ನ ಮುಂದಿನ ದೊಡ್ಡ ಮಾರುಕಟ್ಟೆಯನ್ನಾಗಿ ಬೆಳೆಸುವುದು ಸಂಘಟಕರ ಗುರಿಯಾಗಿದೆ.  

ಐಸಿಸಿ ಮಾನ್ಯತೆ ಮತ್ತು ವೇಳಾಪಟ್ಟಿ

ಈ ಲೀಗ್‌ಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಾನ್ಯತೆ ನೀಡಿದ್ದು, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ನಡುವಿನ ಸಮಯದಲ್ಲಿ ಇದು ನಡೆಯಲಿದೆ. ಆಗಸ್ಟ್ 26 ರಿಂದ ಸೆಪ್ಟೆಂಬರ್ 20, 2026 ರವರೆಗೆ ಒಟ್ಟು 33 ಪಂದ್ಯಗಳು ನಡೆಯಲಿವೆ. ಲೀಗ್‌ನ ವಿಶ್ವಾಸಾರ್ಹತೆ ಹೆಚ್ಚಿಸಲು ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ ಮತ್ತು ಮಿಚೆಲ್ ಮಾರ್ಷ್ ಅವರಂತಹ ಘಟಾನುಘಟಿ ಆಟಗಾರರು ಒಪ್ಪಂದ ಮಾಡಿಕೊಂಡಿದ್ದಾರೆ.  

ಅಭಿವೃದ್ಧಿಯೇ ಮೂಲ ಮಂತ್ರ: ದ್ರಾವಿಡ್

ತಮ್ಮ ಹೊಸ ಜವಾಬ್ದಾರಿಯ ಬಗ್ಗೆ ಮಾತನಾಡಿದ ರಾಹುಲ್ ದ್ರಾವಿಡ್, "ಯುರೋಪ್‌ನಲ್ಲಿ ಕ್ರಿಕೆಟ್ ಅನ್ನು ತಳಮಟ್ಟದಿಂದ ಬೆಳೆಸುವುದು ಮತ್ತು ಪ್ರತಿಭಾನ್ವಿತ ಯುವ ಆಟಗಾರರಿಗೆ ಅವಕಾಶ ಕಲ್ಪಿಸುವುದು ನನ್ನ ಉದ್ದೇಶ. ಡಬ್ಲಿನ್‌ನಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿರುವ ಸಮುದಾಯ ದೊಡ್ಡದಿದೆ. ಮುಂದಿನ ಪೀಳಿಗೆಯ ಆಟಗಾರರನ್ನು ಪೋಷಿಸಲು ಇಟಿಪಿಎಲ್ ಪ್ರಮುಖ ಪಾತ್ರ ವಹಿಸಲಿದೆ ಎಂಬ ನಂಬಿಕೆ ನನಗಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).