ಮಹಿಳೆಯರ ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ ಟಿ20: ಫೈನಲ್​ಗೇರಿದ ಭಾರತ 
ಕ್ರಿಕೆಟ್

ಮಹಿಳೆಯರ ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ ಟಿ20: ಫೈನಲ್​ಗೇರಿದ ಭಾರತ

ಬ್ಯಾಂಕಾಕ್​: ನಾಯಕಿ ರಾಧಾ ಯಾದವ್​ (31*ರನ್​, 18 ಎಸೆತ, 7 ಬೌಂಡರಿ, 19ಕ್ಕೆ 4 ವಿಕೆಟ್​) ಆಲ್ರೌಂಡ್​ ಆಟದ ಬಲದಿಂದ ಭಾರತ ಎ ತಂಡ ಮಹಿಳೆಯರ ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ ಟಿ20 (Women''s Rising Stars Asia Cup) ಟೂರ್ನಿಯಲ್ಲಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಭಾರತ ತಂಡ ಶುಕ್ರವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧ 5 ವಿಕೆಟ್​ಗಳಿಂದ ಗೆಲುವು ಸಾಧಿಸುವ ಮೂಲಕ ಈ ಸಾಧನೆ ಮಾಡಿದೆ.
ಟೆರ್ಡ್​ಥಾಯಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆದ ಕಾದಾಟದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಶ್ರೀಲಂಕಾ, ಭಾರತೀಯ ಸ್ಪಿನ್ನರ್​ಗಳ ಬಿಗಿ ದಾಳಿ ಎದುರು 19.4 ಓವರ್​ಗಳಲ್ಲಿ 118 ರನ್​ಗಳಿಗೆ ಆಲೌಟ್​ ಆಯಿತು. ರಾಧಾಗೆ ತನುಜಾ ಕನ್ವರ್​ (20ಕ್ಕೆ 2) ಮತ್ತು ಪ್ರೇಮಾ ರಾವತ್​ (20ಕ್ಕೆ 2) ಉತ್ತಮ ಬೆಂಬಲ ಒದಗಿಸಿದರು. ಪ್ರತಿಯಾಗಿ ಭಾರತ ತಂಡ 13.3 ಓವರ್​ಗಳಲ್ಲೇ 5 ವಿಕೆಟ್​ಗೆ 119 ರನ್​ ಗಳಿಸಿ ಜಯ ಸಾಧಿಸಿತು. ಕನ್ನಡತಿ ವೃಂದಾ ದಿನೇಶ್​ (42 ರನ್​, 20 ಎಸೆತ, 8 ಬೌಂಡರಿ) ಮತ್ತೊಮ್ಮೆ ಭಾರತ ತಂಡದ ಚೇಸಿಂಗ್​ನಲ್ಲಿ ಮಿಂಚಿದರು. ಅವರು ಅನುಷ್ಕಾ ಶರ್ಮ (27) ಜತೆ 2ನೇ ವಿಕೆಟ್​ಗೆ 48 ರನ್​ ಜತೆಯಾಟವಾಡಿ ಗೆಲುವಿನ ಹಾದಿ ಸುಗಮಗೊಳಿಸಿದರು. ನಂತರ ರಾಧಾ, 39 ಎಸೆತ ಬಾಕಿ ಉಳಿದಿರುವಂತೆಯೇ ಭಾರತವನ್ನು ಗೆಲುವಿನ ದಡ ಸೇರಿಸಿದರು.
ಭಾರತ ಭಾನುವಾರ ನಡೆಯಲಿರುವ ಫೈನಲ್​ನಲ್ಲಿ ಬಾಂಗ್ಲಾದೇಶ ಎ ವಿರುದ್ಧ ಸೆಣಸಲಿದೆ. ದಿನದ ಇನ್ನೊಂದು ಸೆಮಿಫೈನಲ್​ ಪಂದ್ಯದಲ್ಲಿ ಬಾಂಗ್ಲಾ ತಂಡ ಪಾಕಿಸ್ತಾನ ಎ ವಿರುದ್ಧ 54 ರನ್​ಗಳಿಂದ ಗೆಲುವು ದಾಖಲಿಸಿ ಅಜೇಯವಾಗಿ ಪ್ರಶಸ್ತಿ ಸುತ್ತಿಗೇರಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಸೋತಿದ್ದ ಭಾರತ ನಂತರ ಸತತ 3 ಜಯ ಸಾಧಿಸಿದೆ.

ಶ್ರೀಲಂಕಾ ಎ: 19.4 ಓವರ್​ಗಳಲ್ಲಿ 118 (ಸಂಜನಾ 31, ಹನ್ಸಿಮಾ 14, ಅನುಷ್ಕಾ 5, ಸತ್ಯಾ ಸಂದೀಪನಿ 15, ಶಶಿನಿ 22, ರಾಧಾ 19ಕ್ಕೆ 4, ಪ್ರೇಮಾ 9ಕ್ಕೆ 2, ತನುಜಾ 20ಕ್ಕೆ 2, ಮಿನ್ನು ಮಣಿ 21ಕ್ಕೆ 1, ಸೈಮಾ 30ಕ್ಕೆ 1). ಭಾರತ ಎ: 13.3 ಓವರ್​ಗಳಲ್ಲಿ 5 ವಿಕೆಟ್​ಗೆ 119 (ನಂದಿನಿ ಕಶ್ಯಪ್​ 13, ವೃಂದಾ 42, ಅನುಷ್ಕಾ 27, ರಾಧಾ 31*, ಶಶಿನಿ 33ಕ್ಕೆ 2, ಯಶಂತಿ 17ಕ್ಕೆ 1). ಪಂದ್ಯಶ್ರೇಷ್ಠ: ರಾಧಾ ಯಾದವ್​.
*ಫೈನಲ್​
ಭಾರತ-ಬಾಂಗ್ಲಾದೇಶ ಎ
ಯಾವಾಗ: ಭಾನುವಾರ
ಆರಂಭ: ಮಧ್ಯಾಹ್ನ 12.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್​ ಟೆನ್​