ಟೀಮ್ ಇಂಡಿಯಾ ವೇಗಿಯಿಂದ ಜನಾಂಗೀಯ ನಿಂದನೆ?: ಆಫ್ರಿಕಾ ತಂಡದ ಬ್ಯಾಟಿಂಗ್ ಕೋಚ್ ಸ್ಪಷ್ಟನೆ 
ಕ್ರಿಕೆಟ್

ಟೀಮ್ ಇಂಡಿಯಾ ವೇಗಿಯಿಂದ ಜನಾಂಗೀಯ ನಿಂದನೆ?: ಆಫ್ರಿಕಾ ತಂಡದ ಬ್ಯಾಟಿಂಗ್ ಕೋಚ್ ಸ್ಪಷ್ಟನೆ

ಕೋಲ್ಕತ: ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಮೊದಲ ದಿನವೇ ಐದು ವಿಕೆಟ್ ಪಡೆದು ಮಿಂಚಿದ ನಡುವೆಯೂ ವಿವಾದದ ಸುಳಿಗೆ ಸಿಲುಕಿದ್ದಾರೆ. ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಬುಮ್ರಾ ಎಸೆದ ಕೊನೇ ಎಸೆತ ಬವುಮಾ ಪ್ಯಾಡ್‌ಗೆ ಬಡಿಯಿತು. ಆಗ ಬುಮ್ರಾ ಅವರ ಎಲ್‌ಬಿಡಬ್ಲುೃ ಮನವಿಯನ್ನ ಆನ್‌ಫೀಲ್ಡ್ ಅಂಪೈರ್ ತಿರಸ್ಕರಿಸಿದರು. ನಂತರ ಡಿಆರ್‌ಎಸ್ ತೆಗೆದುಕೊಳ್ಳುವ ಬಗ್ಗೆ ಚರ್ಚೆ ಮಾಡುವಾಗ ಕೀಪರ್ ಪಂತ್, ಚೆಂಡು ಲೆಗ್ ಸ್ಟಂಪ್‌ನಿಂದ ಮೇಲಿದೆ ಎಂದರು. ಆಗ ‘ಬೌನಾ ಬೀ ಹೈ’ (ಇವನು ಕುಳ್ಳ ಅಥವಾ ಕುಬ್ಜ) ಎಂದು ಬುಮ್ರಾ ಹೇಳಿರುವ ಮಾತುಗಳು ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿದೆ. ಸದ್ಯ ಇದರ ಆಡಿಯೋ/ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬವುಮಾ ಎತ್ತರದ ಬಗ್ಗೆ ಬುಮ್ರಾ ಹೇಳಿರುವ ಪದದ ಬಗ್ಗೆ ಹೆಚ್ಚಿನ ಟೀಕೆಗಳು ಬಂದಿದ್ದು, ಇದೇ ಮಾತನ್ನು ವಿದೇಶಿ ಆಟಗಾರರು ಸಚಿನ್ ತೆಂಡುಲ್ಕರ್‌ರಂಥ ಆಟಗಾರರಿಗೆ ಹೇಳಿರುತ್ತಿದ್ದರೆ ಭಾರತೀಯರು ಒಪ್ಪಿಕೊಳ್ಳುತ್ತಿದ್ದರಾ ಎಂದೂ ಪ್ರಶ್ನೆಸಿದ್ದಾರೆ. ಇದು ಜನಾಂಗೀಯ ನಿಂದನೆಯ ಮೂದಲಿಕೆಯಂತಿದ್ದು, ಬುಮ್ರಾ ವಿರುದ್ಧ ಮ್ಯಾಚ್ ರೆಫ್ರಿ ಕ್ರಮ ತೆಗೆದುಕೊಳ್ಳಬೇಕು ಎಂಬ ಮಾತುಗಳೂ ಕೇಳಿಬಂದಿವೆ.
ಆದರೆ ಬುಮ್ರಾ ಹೇಳಿಕೆ ಬಗ್ಗೆ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ತಲೆಕೆಡಿಸಿಕೊಂಡಿಲ್ಲ ಮತ್ತು ಈ ಬಗ್ಗೆ ದೂರು ಕೂಡ ನೀಡುವುದಿಲ್ಲ ಎಂದಿದೆ. ‘ನಾವು ಈ ವಿವಾದದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ, ನಡೆಸುವುದಿಲ್ಲ’ ಎಂದು ಆಫ್ರಿಕಾ ತಂಡದ ಬ್ಯಾಟಿಂಗ್ ಕೋಚ್ ಆಶ್ವೆಲ್ ಪ್ರಿನ್ಸ್ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.