ಆರ್. ಅಶ್ವಿನ್, ಗೌತಮ್ ಗಂಭೀರ್
- ನ್ಯೂಜಿಲೆಂಡ್ ವಿರುದ್ಧದ 2 ಏಕದಿನ ಪಂದ್ಯದಲ್ಲಿ ಕೊಡಲಿಲ್ಲ ಸ್ಥಾನ
- ಯುವ ವೇಗಿ ಅರ್ಷದೀಪ್ ಸಿಂಗ್ ಪರ ಬ್ಯಾಟ್ ಬೀಸಿದ ಆರ್. ಅಶ್ವಿನ್
- ಗೌತಮ್ ಗಂಭೀರ್ ವಿರುದ್ಧ ವಿಡಿಯೋದಲ್ಲಿ ಕಿಡಿಕಾರಿದ ಅಶ್ವಿನ್
ನವದೆಹಲಿ: ಪ್ರಸಕ್ತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಒಂದು ಪಂದ್ಯ ಗೆದ್ದರೆ, ಕಿವೀಸ್ ಪಡೆ ಕೂಡ ಒಂದು ಪಂದ್ಯ ಗೆದ್ದಿದೆ. ಅಲ್ಲಿಗೆ, ಎರಡೂ ತಂಡಗಳು ಸರಣಿಯಲ್ಲಿ 1-1 ಅಂತರ ಕಾಯ್ದುಕೊಂಡಿದೆ.
ಮೊದಲೆರೆಡು ಪಂದ್ಯಗಳಿಂದ ಯುವ ವೇಗಿ ಅರ್ಷದೀಪ್ ಸಿಂಗ್ಗೆ ತಂಡದಲ್ಲಿ ಸ್ಥಾನ ಕೊಡದ ಹೆಡ್ ಕೋಚ್ ಗೌತಮ್ ಗಂಭೀರ್ ನೇತೃತ್ವದ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಇದೀಗ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಆರ್.ಅಶ್ವಿನ್ ತೀವ್ರ ಕಿಡಿಕಾರಿದ್ದಾರೆ. ಮೂರನೇ ಹಾಗೂ ಕೊನೆಯ ನಿರ್ಣಾಯಕ ಪಂದ್ಯದಲ್ಲಿ ಸಿಂಗ್ ಆಡುವ ಸಾಧ್ಯತೆಗಳು ಹೆಚ್ಚಿವೆ ಎಂಬ ಮಾತುಗಳು ಕೇಳಿಬಂದಿದೆ. ಇದರೊಟ್ಟಿಗೆ ಹಲವರು ಅವರನ್ನು ಆಡಿಸುವುದು ಉತ್ತಮ ಎಂಬ ಸಲಹೆಗಳನ್ನು ನೀಡಿದ್ದಾರೆ. ಈ ಮಧ್ಯೆ, ಅರ್ಷದೀಪ್ ಪರ ಬ್ಯಾಟ್ ಬೀಸಿರುವ ಅಶ್ವಿನ್, ಟೀಮ್ ಮ್ಯಾನೇಜ್ಮೆಂಟ್ ನಡೆಗೆ ಭಾರೀ ಅಸಮಾಧಾನ ಹೊರಹಾಕಿದ್ದಾರೆ.
"ಅರ್ಷದೀಪ್ ಸಿಂಗ್ನ ಈ ರೀತಿ ಮೂಲೆಯಲ್ಲಿ ಕೂರಿಸುವುದು ಸರಿಯಲ್ಲ. ಇದರಿಂದ ಅವರು ಲಯ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು. ಇಲ್ಲಿ ಬೌಲರ್ಗಳ ನಡುವೆಯೇ ಪೈಪೋಟಿ ನಡೆಯುತ್ತಿದೆ. ಯಾಕಿಲ್ಲಿ, ಅರ್ಷದೀಪ್ ಸಿಂಗ್ ಸ್ಥಾನದಲ್ಲಿ ನಿಂತು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ? ಆತ ಎಷ್ಟು ಪಂದ್ಯಳನ್ನಾಡಿದ್ದಾನೆ ಅಥವಾ ಆಡಿಲ್ಲ ಎಂಬುದು ನಮ್ಮ ಪ್ರಶ್ನೆಯಲ್ಲ. ಈ ರೀತಿ ತಂಡದಲ್ಲಿ ಸ್ಥಾನ ಕೊಡದೆ ಬದಿಗಿಡುವುದು ಒಪ್ಪುವಂತದ್ದಲ್ಲ" ಎಂದಿದ್ದಾರೆ.
"ತನ್ನ ಸಾಮರ್ಥ್ಯವನ್ನು ಈಗಾಗಲೇ ಪ್ರದರ್ಶಿಸಿ, ಸಾಬೀತುಪಡಿಸಿರುವ ವೇಗಿ ಈತ. ತಂಡಕ್ಕೆ ಹೆಚ್ಚೆಚ್ಚು ಕೊಡುಗೆ ನೀಡಿದ್ದಾನೆ. ಇಷ್ಟಾದರೂ ಸಹ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಆತ ಇಂದಿಗೂ ಪರದಾಡುವಂತಿದೆ. ನೀವೇನಾದರೂ ಹೇಳಿ, ಕ್ರಿಕೆಟ್ ಒಂದು ಆತ್ಮವಿಶ್ವಾಸದ ಆಟ. ಹೀಗೆ ಮಾಡುವುದರಿಂದ ಆತನ ಆತ್ಮವಿಶ್ವಾಸ ಕುಗ್ಗುತ್ತದೆ. ಪ್ರತಿ ಬಾರಿ ಬೌಲರ್ಗಳಿಗೇ ಏಕೆ? ಬ್ಯಾಟರ್ಗಳಿಗೆ ಏಕಿಂತ ಸಮಸ್ಯೆ ಕಾಡಲ್ಲ" ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ,(ಏಜೆನ್ಸೀಸ್).