- ವಿಜಯ್ ಹಜಾರೆ ಟ್ರೋಫಿಯಲ್ಲಿ ಸರ್ಫರಾಜ್ ಖಾನ್ ಅಬ್ಬರ
- ಮುಂಬೈ ಟೀಮ್ನ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ ಅಮೋಘ ಬ್ಯಾಟಿಂಗ್
- ಐಪಿಎಲ್ನಲ್ಲಿ ಸಿಎಸ್ಕೆ ಅವರನ್ನು ಉಪಯೋಗಿಸಿಕೊಳ್ಳುವಂತೆ ಸಲಹೆ
ತಮಿಳುನಾಡು: ಪ್ರಸಕ್ತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಟಾರ್ ಆಟಗಾರರಿಂದ ಹಿಡಿದು ಯುವ ಬ್ಯಾಟರ್ಗಳು ತಮ್ಮ ತಂಡಗಳ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಪೈಕಿ ಮುಂಬೈ ಟೀಮ್ನ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ ಅಮೋಘ ಬ್ಯಾಟಿಂಗ್ ಪ್ರದರ್ಶನಕ್ಕೆ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಆರ್. ರವಿಚಂದ್ರನ್ ಅಶ್ವಿನ್ ಫಿದಾ ಆಗಿದ್ದಾರೆ. ಈ ಮೂಲಕ ಐಪಿಎಲ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕಿವಿಮಾತು ನೀಡಿದ್ದಾರೆ.
2026ರ ಮಾರ್ಚ್ ಮಧ್ಯಂತರದಲ್ಲಿ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಗೆ ಕ್ರಿಕೆಟ್ ಪ್ರಿಯರು ಕಾತರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹರಾಜು ಪ್ರಕ್ರಿಯೆ ಕೂಡ ಮುಕ್ತಾಯಗೊಂಡಿದ್ದು, ಸ್ಟಾರ್ ಹಾಗೂ ಪ್ರತಿಭಾವಂತ ಆಟಗಾರರನ್ನೇ ಫ್ರಾಂಚೈಸಿಗಳು ಖರೀದಿಸಿವೆ. ತಾವು ಆಯ್ಕೆ ಮಾಡಿಕೊಂಡಿರುವ ಒಂದಷ್ಟು ಯುವ ಕ್ರಿಕೆಟಿಗರ ಮೇಲೆ ತಂಡಗಳ ನಿರೀಕ್ಷೆ ಹೆಚ್ಚಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಮಾತನಾಡಿರುವ ಅಶ್ವಿನ್, ಸರ್ಫರಾಜ್ರನ್ನು ಉತ್ತಮವಾಗಿ ಬಳಸಿಕೊಳ್ಳಿ ಎಂದು ಸಿಎಸ್ಕೆ ಸಲಹೆ ನೀಡಿದ್ದಾರೆ.
ಗೋವಾ ವಿರುದ್ಧದ ಪಂದ್ಯದಲ್ಲಿ 75 ಎಸೆತಗಳಲ್ಲಿ 157 ರನ್ ಸಿಡಿಸಿದ ಸರ್ಫರಾಜ್ ಖಾನ್ ಇನ್ನಿಂಗ್ಸ್ ಕುರಿತು ಅಶ್ಚಿನ್, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. "ಸೈಯದ್ ಅಲಿ ಮುಷ್ತಾಕ್ ಟ್ರೋಫಿ ಟೂರ್ನಿಯಲ್ಲಿ 100*(47 ಎಸೆತ), 52(40), 64(25), 73(22), ನಂತರ, ವಿಜಯ್ ಹಜಾರೆ ಟ್ರೋಫಿಯಲ್ಲಿ 14 ಸಿಕ್ಸರ್ ಬಾರಿಸುವ ಮೂಲಕ ಅವರು 157 ರನ್ ಗಳಿಸಿದರು. ಮಿಡೆಲ್ ಓವರ್ಗಳಲ್ಲಿ ತಮ್ಮ ಸ್ವೀಪ್ ಮತ್ತು ಸ್ಲಾಗ್ ಸ್ವೀಪ್ಗಳಿಂದ ಸ್ಪಿನ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಸರ್ಫರಾಜ್ಗಿದೆ ಎಂದರು.
ಈ ನಿಟ್ಟಿನಲ್ಲಿ ನೋಡುವುದಾದರೆ, ಸಿಎಸ್ಕೆ ಅವರನ್ನು ಪ್ಲೇಯಿಂಗ್ 12ಕ್ಕೆ ಸೇರಿಸಿಕೊಳ್ಳಬೇಕು. ತಮ್ಮ ಬ್ಯಾಟಿಂಗ್ ಲೈನ್ಗೆ ಇನ್ನಷ್ಟು ಬಲ ತುಂಬಬೇಕು ಎಂದು ತಿಳಿಸಿದ್ದಾರೆ. ತಮ್ಮನ್ನು ಮರೆತಿದ್ದ ಇತರೆ ತಂಡಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್, 2026ರ ಐಪಿಎಲ್ ಹರಾಜಿನಲ್ಲಿ ಖರೀದಿಸಿ, ತಮ್ಮ ತಂಡದಲ್ಲಿ ಆಡುವ ಅವಕಾಶ ನೀಡಿದ್ದಕ್ಕಾಗಿ ಸರ್ಫರಾಜ್ ಭಾವುಕರಾದರು. ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಕೂಡ ಹಂಚಿಕೊಂಡಿದ್ದರು.
2026ರ ಐಪಿಎಲ್ಗೆ ಚೆನ್ನೈ ಸೂಪರ್ ಕಿಂಗ್ಸ್ ಪಡೆ
ರುತುರಾಜ್ ಗಾಯಕ್ವಾಡ್ (ನಾಯಕ), ಎಂ.ಎಸ್. ಧೋನಿ, ಆಯುಷ್ ಮ್ಹಾತ್ರೆ, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಅನ್ಶುಲ್ ಕಾಂಬೋಜ್, ಗುರ್ಜಪ್ನೀತ್ ಸಿಂಗ್, ಜೇಮೀ ಓವರ್ಟನ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ನೂರ್ ಅಹ್ಮದ್, ರಾಮಕೃಷ್ಣ ಘೋಷ್, ಶಿವಂ ದುಬೆ, ಶ್ರೇಯಸ್ ಗೋಪಾಲ್, ಖಲೀಲ್ ಅಹ್ಮದ್, ಸಂಜು ಸ್ಯಾಮ್ಸನ್, ಅಕೇಲ್ ಹೊಸೇನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಜ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಾಹರ್, ಜ್ಯಾಕ್ ಫೌಲ್ಕ್ಸ್,(ಏಜೆನ್ಸೀಸ್).